ಬೆಂಗಳೂರು(ಜೂ.08): ಕೊರೋನಾ ಮೂರನೇ ಅಲೆ ಎದುರಿಸಲು ರಾಜ್ಯದಲ್ಲಿ 19 ಜಿಲ್ಲಾಸ್ಪತ್ರೆ, 146 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಅಗತ್ಯ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನೇಮಿಸಲು 1,500 ಕೋಟಿ ರು. ತೊಡಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕೊರೋನಾ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ನೇತೃತ್ವದಲ್ಲಿ ಸೋಮವಾರ ನಡೆದ ಕೊರೋನಾ ಕಾರ್ಯಪಡೆ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಪ್ರತಿ ತಾಲೂಕಿನಲ್ಲಿ 25 ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌, 25 ಎಚ್‌ಡಿಯು (ಹೈ ಡಿಂಪೆಂಡೆನ್ಸಿ ಯುನಿಟ್‌), 50 ಆಕ್ಸಿಜನ್‌ ಬೆಡ್‌ ಸೇರಿದಂತೆ ಕನಿಷ್ಠ 100 ಆಕ್ಸಿಜನೇಟೆಡ್‌ ಬೆಡ್‌ ವ್ಯವಸ್ಥೆಯನ್ನು 3 ತಿಂಗಳ ಒಳಗಾಗಿ ನಿರ್ಮಾಣ ಮಾಡುವುದು, 5 ಲಕ್ಷ ರೆಮ್ಡೆಸಿವರ್‌ ಔಷಧ ದಾಸ್ತಾನು, 1 ಲಕ್ಷ ಆಯುಷ್‌-64 ಔಷಧ ಖರೀದಿ ಮಾಡುವುದು ಸೇರಿದಂತೆ ಹಲವು ಮಹತ್ತರ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಶ್ವತ್ಥನಾರಾಯಣ, ಪ್ರಾಥಮಿಕ ಮಟ್ಟದಿಂದ ಜಿಲ್ಲಾ ಆಸ್ಪತ್ರೆವರೆಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯದಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ತಾಲೂಕು ಮಟ್ಟದಲ್ಲೇ ಐಸಿಯು, ವೆಂಟಿಲೇಟರ್‌, ಮಾನೀಟರ್‌ಗಳು ಬೈಪ್ಯಾಪ್‌ ವ್ಯವಸ್ಥೆ ಇರುವ ಹಾಗೆ ಕ್ರಮ ವಹಿಸಲಾಗುವುದು. ರಿಮೋಟ್‌ ಐಸಿಯುಗಳ ಜತೆಗೆ ಎಲ್ಲ ರೀತಿಯ ಡಯಾಗ್ನಾಸ್ಟಿಕ್‌ ಸೌಲಭ್ಯವನ್ನೂ ಒದಗಿಸಲಾಗುವುದು. ಈ ಇಡೀ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ಎಲ್ಲ ನುರಿತ ಸಿಬ್ಬಂದಿಯನ್ನು ಸಮರೋಪಾದಿಯಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಅಗತ್ಯ ಹೆಚ್ಚುವರಿ ಸಿಬ್ಬಂದಿ ನೇಮಕ:

3ನೇ ಅಲೆ ವೇಳೆಗೆ ಪರಿಪೂರ್ಣ ಚಿಕಿತ್ಸೆ ತಾಲೂಕು ಮಟ್ಟದಲ್ಲೇ ನೀಡುವ ಗುರಿಯಿದೆ. ಗಂಭೀರ ಸ್ವರೂಪದ ಸಮಸ್ಯೆಗಳು ಸೇರಿ ಶೇ.97 ಆರೋಗ್ಯ ಸೇವೆ ಸಿಗಬೇಕು. ಶೇ.3ರಷ್ಟುಸೂಪರ್‌ ಸ್ಪೆಷಾಲಿಟಿ ಆರೈಕೆ ಅಗತ್ಯವಿರುವವರು ಮಾತ್ರ ಜಿಲ್ಲೆಯಿಂದ ಹೊರಗೆ ಬರಬೇಕು. ಇದಕ್ಕಾಗಿ ಕನಿಷ್ಠ 4 ಸಾವಿರ ವೈದ್ಯರ ಅಗತ್ಯವಿದೆ. ಜತೆಗೆ, ಒಬ್ಬ ವೈದ್ಯರಿಗೆ ಮೂವರು ನರ್ಸ್‌, 3ಡಿ ವಿಭಾಗದ ಮೂವರು ಸಿಬ್ಬಂದಿ ಅಗತ್ಯ. ಇವರ ವೇತನಕ್ಕಾಗಿಯೇ ವಾರ್ಷಿಕ 600 ಕೋಟಿ ರು. ವೆಚ್ಚಾಗಲಿದೆ. ಉಳಿದಂತೆ 800ಕ್ಕೂ ಹೆಚ್ಚು ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ರೂಪಿಸಲಾಗುವುದು ಎಂದರು.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

ರಾಜ್ಯದಲ್ಲಿ ಕೌಶಲ್ಯವುಳ್ಳ ಸಿಬ್ಬಂದಿ ಕೊರತೆ ನೀಗಿಸಲು 5 ಸಾವಿರ ಮಂದಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಹತೆ ಹೊಂದಿರುವವರಿಗೆ 3 ತಿಂಗಳ ಕಾಲ ತರಬೇತಿ ನೀಡಲಾಗುವುದು. ಇವರಿಗೆ 3 ತಿಂಗಳ ಕಾಲ ಮಾಸಿಕ 5 ಸಾವಿರ ವಿದ್ಯಾರ್ಥಿವೇತನ ನೀಡಲಾಗುವುದು. ಬಳಿಕ ಆರೋಗ್ಯ ಇಲಾಖೆಯಲ್ಲೇ ಕೆಲಸ ನೀಡಲಾಗುವುದು ಎಂದರು.

ಈಗಾಗಲೇ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 7,300 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲು ಪ್ರತಿ ಕಾಲೇಜಿಗೆ 3 ಕೋಟಿ ರು. ಸಹಾಯಧನವನ್ನು ರಾಜ್ಯ ಸರ್ಕಾರ ನೀಡಿದೆ. ಇದನ್ನು 2 ತಿಂಗಳ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೀಗಾಗಿ 3ನೇ ಅಲೆ ವೇಳೆಗೆ ಬೆಡ್‌ ಕೊರತೆ ಉಂಟಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಆಸ್ಪತ್ರೆಗಳಲ್ಲೇ 500 ಟನ್‌ ಆಕ್ಸಿಜನ್‌ ಉತ್ಪಾದನೆ:

ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ನಿಮಿಷಕ್ಕೆ 1 ಸಾವಿರ ಲೀಟರ್‌ ಆಕ್ಸಿಜನ್‌ ಉತ್ಪಾದನೆ ಮಾಡುವ ಘಟಕ ಸ್ಥಾಪಿಸಲಾಗುವುದು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1,500 ಲೀಟರ್‌ ಉತ್ಪಾದನೆ ಘಟಕ ಮಾಡಲಾಗುವುದು. ಈ ಮೂಲಕ ಆಸ್ಪತ್ರೆಗಳಲ್ಲೇ 500 ಟನ್‌ ಆಕ್ಸಿಜನ್‌ ಉತ್ಪಾದನೆ ಗುರಿ ಹೊಂದ್ದಿದೇವೆ. ಇನ್ನು ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 18 ಸಾವಿರ ಕಿಲೋ ಲಿಕ್ವಿಡ್‌ ಆಕ್ಸಿಜನ್‌ ದಾಸ್ತಾನು, ಮೆಡಿಕಲ್‌ ಕಾಲೇಜಿನಲ್ಲಿ 20 ಸಾವಿರ ಟನ್‌ ದಾಸ್ತಾನು ಘಟಕವನ್ನು 2-3 ತಿಂಗಳಲ್ಲಿ ಮಾಡಲಾಗುವುದು ಎಂದರು.

ರಾಜ್ಯದಲ್ಲಿ 7 ಜಿನೋಮ್‌ ಲ್ಯಾಬ್‌:

ಕೊರೋನಾ ವೈರಸ್‌ನ ರೂಪಾಂತರವನ್ನು ಪತ್ತೆ ಹಚ್ಚಲು ರಾಜ್ಯದಲ್ಲಿ 7 ಜಿನೋಮ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ ಸ್ಥಾಪನೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಪಾಸಿಟಿವ್‌ ಪ್ರಕರಣಗಳಲ್ಲಿ ಶೇ.5ರಷ್ಟುಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುವುದು. ಈ ಪ್ರತಿ ಪರೀಕ್ಷೆಗೆ 6 ಸಾವಿರ ರು. ವೆಚ್ಚಾಗಲಿದ್ದು, ಇದರ ಮೇಲ್ವಿಚಾರಣೆಗೆ ವೈರಾಣು ತಜ್ಞ ಡಾ.ವಿ.ರವಿ ನೇತೃತ್ವದಲ್ಲಿ ಎಂಟು ಜನರ ಸಮಿತಿ ರಚಿಸಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಇನ್ನು ರಾಜ್ಯದಿಂದ ಲಸಿಕೆ ಖರೀದಿ ಇಲ್ಲ: ಡಿಸಿಎಂ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 18ರಿಂದ 44 ವರ್ಷದವರಿಗೂ ಕೇಂದ್‌ರ ಸರ್ಕಾರದಿಂದಲೇ ಲಸಿಕೆ ನೀಡುವುದಾಗಿ ಘೋಷಿಸಿರುವುದರಿಂದ ರಾಜ್ಯದಿಂದ ಲಸಿಕೆ ಖರೀದಿಸುವುದಿಲ್ಲ. ಅಲ್ಲದೆ, ಈಗಾಗಲೇ ಲಸಿಕೆ ಖರೀದಿಗಾಗಿ ಮಾಡಿರುವ ಸಿದ್ಧತೆಯನ್ನು ನಿಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ. ಈ ತಿಂಗಳು ಕೇಂದ್ರದಿಂದ 58 ಲಕ್ಷ ಲಸಿಕೆ ಬರಲಿದೆ. ಮುಂದಿನ ತಿಂಗಳಿಂದ ಪ್ರತಿನಿತ್ಯ 6 ಲಕ್ಷ ಲಸಿಕೆ ನೀಡಲು ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಎಂದರು.

ಬಿಬಿಎಂಪಿಯ ಪ್ರತಿ ಕ್ಷೇತ್ರದಲ್ಲೂ 100 ಹಾಸಿಗೆ ಆಸ್ಪತ್ರೆ:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 100 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಹಾಗೂ ಪ್ರತಿ 4 ಕ್ಷೇತ್ರಗಳಿಗೆ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಅಗತ್ಯವಿರುವ ಜಾಗ ಗುರುತಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona