ಕಾವೇರಿ ನೀರಿಗಾಗಿ ಕರ್ನಾಟಕ ಬಂದ್‌ ಹಾಗೂ ಸಾಲು ಸಾಲು ರಜೆಗಳಿರುವ ಹಿನ್ನೆಲೆಯಲ್ಲಿ ಊರಿಗೆ ಹೊರಟವರಿಗೆ ಖಾಸಗಿ ಬಸ್‌ ಮಾಲೀಕರು ಶಾಕ್‌ ನೀಡಿದ್ದಾರೆ.

ಬೆಂಗಳೂರು (ಸೆ.28): ರಾಜ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದೆ. ನಾಳೆ ಶುಕ್ರವಾರ ಕರ್ನಾಟಕ ಬಂದ್‌ ಮಾಡಲಾಗುತ್ತಿದ್ದು ಇಂದು ಸಂಜೆಯೇ ಊರಿನತ್ತ ಹೊರಟವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಸೀಟು ಬುಕ್‌ ಮಾಡುವವರ ಸಂಖ್ಯೆ ಹಚ್ಚಾಗಿದ್ದ, ಬಸ್‌ ಮಾಲೀಕರು ಪ್ರಯಾಣದ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ.

ಹೌದು, ಶುಕ್ರವಾರ ಕಾವೇರಿ ನೀರಿಗಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಹೀಗಾಗಿ, ಬಹುತೇಕ ಉದ್ಯಮಗಳು, ಕಂಪನಿಗಳು, ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಬಂದ್‌ ಮಾಡಲಾಗುತ್ತದೆ. ವಿವಿಧ ಸಂಘಟನೆಗಳಿಂದ ಬೆಂಬಲ ನೀಡಲಾಗಿದ್ದು, ಪ್ರತಿಭಟನೆಗೆ ಮುಂದಾಗಿವೆ. ಹೀಗಾಗಿ, ಶುಕ್ರವಾರ (ಸೆ.29) ಕರ್ನಾಟಕ ಬಂದ್‌, ಶನಿವಾರ (ಸೆ.30) ವೀಕೆಂಡ್‌ ರಜೆ, ಭಾನುವಾರ (ಅ.1) ಸಾಮಾನ್ಯ ರಜೆ, ಸೋಮವಾರ (ಅ.02) ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ರಜೆಗಳು ಲಭ್ಯವಾಗಲಿವೆ. ಆದ್ದರಿಂದ ಸಾಲು ಸಾಲು ರಜೆಗಳ ಲಾಭವನ್ನು ಪಡೆಯಲು ಸಹಸ್ರಾರು ಜನರು ಊರಿನತ್ತ ಹೊರಟಿದ್ದಾರೆ. ಆದರೆ, ಖಾಸಗಿ ಬಸ್‌ ಮಾಲೀಕರು ಊರಿಗೆ ಹೊರಟವರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದಾರೆ.

ಬಿಪಿಎಲ್‌ ಕಾರ್ಡ್‌ದಾರರಿಗೆ ಶಾಕ್‌: ಅನ್ನಭಾಗ್ಯದ ಹಣಕ್ಕೆ ಕತ್ತರಿ ಹಾಕಿದ ಸರ್ಕಾರ, 10 ಕೆ.ಜಿ. ಅಕ್ಕಿ ಕೊಡಲು ನಿರ್ಧಾರ

ಒಂದಕ್ಕೆ 3 ಪಟ್ಟು ದರ ಹೆಚ್ಚಳ: ಬೆಂಗಳೂರು- ಮಂಗಳೂರು, ಬೆಂಗಳೂರು-ಉಡುಪಿ, ಬೆಂಗಳೂರು-ಬಳ್ಳಾರಿ, ಬೆಂಗಳೂರು-ಧರ್ಮಸ್ಥಳ ಸೇರಿದಂತೆ ಅನೇಕ ಸ್ಥಳಗಳಿಗೆ ತೆರಳಲು ಬಸ್‌ಗಳಿಗೆ ದುಬಾರಿ ದರವನ್ನು ನಿಗದಿ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ 800 ರೂ.ಗಳಿಂದ 1,000 ರೂ. ಇರುವ ಬಸ್‌ ಪ್ರಯಾಣದ ದರವನ್ನು 3,000 ರೂ.ಗಳಿಂದ 3,500 ರೂ.ಗಳವರೆಗೆ ಹೆಚ್ಚಳ ಮಾಡಲಾಗಿದೆ. ಜೊತೆಗೆ, ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡುವವರಿಗೆ ಜಿಎಸ್‌ಟಿ ಚಾರ್ಜಸ್‌ ಸೇರಿಸಿ ಮತ್ತಷ್ಟು ದುಬಾರಿ ದರವನ್ನು ವಿಧಿಸಲಾಗುತ್ತಿದೆ. ಒಟ್ಟಾರೆ, ಕರ್ನಾಟಕ ಬಂದ್ ಹಾಗೂ ಲಾಂಗ್ ವೀಕೆಂಡ್ ಮೂಡಲ್ಲಿ ಊರಿಗೆ ಹೊರಟವ್ರಿಗೆ ಶಾಕ್ ಕೊಡಲಾಗಿದೆ.

ಖಾಸಗಿ ಬಸ್‌ಗಳ ದುಬಾರಿ ದರದ ಬಗ್ಗೆ ಬಸ್‌ ಏಜೆನ್ಸಿಗೆ ಕರೆ ಮಾಡಿ ವಿಚಾರಣೆ ಮಾಡಿದರೆ, ನೀವು ಬರುವುದಿದ್ದರೆ ದುಬಾರಿ ಬೆಲೆ ಕೊಟ್ಟು ಬುಕಿಂಗ್‌ ಮಾಡಿ. ಇಲ್ಲವಾದರೆ ಬಸ್‌ಗೆ ಇದೇ ಹಣವನ್ನು ಕೊಟ್ಟು ಬರುವ ಪ್ರಯಾಣಿಕರು ಸಾಕಷ್ಟು ಜನರಿದ್ದಾರೆ ಎಂದು ನಿರ್ಲಕ್ಷ್ಯತನದ ಉತ್ತರವನ್ನು ಕೊಡುತ್ತಾರೆ. ಕೋವಿಡ್‌ ಹಾಗೂ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಹಿನ್ನೆಲೆಯಲ್ಲಿ ನಷ್ಟವನ್ನು ಅನುಭವಿಸಿದ ನಾವು ಹಬ್ಬ ಹಾಗೂ ಸಾಲು ಸಾಲು ರಜೆಯ ದಿನಗಳಲ್ಲಿ ಒಂದಷ್ಟು ಹಣ ಮಾಡಿಕೊಳ್ಳುತ್ತೇವೆ ಎಂದು ಹಾರಿಕೆ ಉತ್ತರವನ್ನು ನೀಡುತ್ತಾರೆ.

ಕೋಲಾರದಲ್ಲಿ 15 ಅಡಿ ಉದ್ದದ ಮುಸ್ಲಿಂ ಖಡ್ಗ, ಹಸಿರು ಬಟ್ಟೆ, ಉರ್ದು ಬರಹದ ಬ್ಯಾನರ್‌ ಅಳವಡಿಕೆ

ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ: ಇನ್ನು ಖಾಸಗಿ ಬಸ್‌ಗಳ ಮಾಲೀಕರು ಸ್ಲೀಪರ್‌ ಕೋಚ್ ಬಸ್‌ಗಳ ದರವನ್ನು ದುಬಾರಿ ಮಾಡಿರುವುದರ ಬಗ್ಗೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಎಕ್ಸ್‌ (ಹಳೆಯ ಟ್ವಿಟರ್), ಫೇಸ್‌ಬುಕ್‌ ಹಾಗೂ ಇನ್ಸ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಪೋಸ್ಟ್‌ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನೇ ವಿರೋಧ ವ್ಯಕ್ತಪಡಿಸಿದರೂ ದರವನ್ನು ಮಾತ್ರ ಕಡಿಮೆ ಮಾಡಲು ಬಸ್‌ ಮಾಲೀಕರು ನಿರ್ಧಾರ ಕೈಗೊಳ್ಳುವ ಸೂಚನೆ ಕಂಡುಬರುತ್ತಿಲ್ಲ. ಇನ್ನು ಕಳೆದ ಬಾರಿ ಗಣೇಶ ಹಬ್ಬದ ವೇಳೆ ಸಾರಿಗೆ ಇಲಾಖೆ ಆಯುಕ್ತರೇ ದುಬಾರಿ ಶುಲ್ಕ ವಸೂಲಿ ಮಾಡದಂತೆ ಸೂಚನೆ ನೀಡಿದ್ದರೂ, ಹೆಚ್ಚೆಚ್ಚು ಹಣವನ್ನು ವಸೂಲಿ ಮಾಡಿದ್ದ ಖಾಸಗಿ ಬಸ್‌ ಮಾಲೀಕರಿಗೆ ಸರ್ಕಾರ ಕೂಡ ನಿರ್ಬಂಧ ವಿಧಿಸುವ ಲಕ್ಷಣಗಳು ಕಂಡುಬರುತ್ತಿಲ್ಲ.

Scroll to load tweet…