ನಾಯಕತ್ವ ಬದಲಾವಣೆ ಸ್ಪಷ್ಟತೆ ಬಯಸಿದ ಡಿಕೆಶಿ, ಜಾರ್ಜ್‌ಗೆ ಟಾಸ್ಕ್ ನೀಡಿ ತೆರೆ ಹಿಂದೆ ಸರಿಯಿತಾ ಹೈಕಮಾಂಡ್?, ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ರಣತಂತ್ರ ಬದಲಾಗಿದೆ. ಆದರೆ ಡಿಕೆಶಿ ಪಟ್ಟು ಬಿಗಿ ಗೊಳಿಸಿದ್ದಾರೆ.
ಬೆಂಗಳೂರು (ನ.23) ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಅಧಿಕಾರ ಬದಲಾವಣೆ ಸೇರಿದಂತೆ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಸಿದ್ದರಾಮಯ್ಯ ಬಣ, ಡಿಕೆ ಶಿವಕುಮಾರ್ ಬಣ ನಾಯಕರಿಂದ ಹೈಕಮಾಂಡ್ ಭೇಟಿ ಬಳಿಕ ಸ್ವತಃ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತ ಡಿಕೆ ಶಿವಕುಮಾರ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಸ್ಪಷ್ಟತೆ ಬಯಸಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ನಾಯಕತ್ವ ಬದಲಾವಣೆ ವಿಚಾರ ಹೈಕಮಾಂಡ್ ಮುಂದೆ ಇದೆಯೋ ಅಥವಾ ಇಲ್ಲವೋ ಅನ್ನೋದು ಸ್ಪಷ್ಟವಾಗಿ ತಿಳಿಸಲು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾಗಿಯೇ ಇಂದು ಕೆಜೆ ಜಾರ್ಜ್ ನಿವಾಸಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿ ಮಹತ್ವದ ಮಾತುಕತ ನಡೆಸಿದ್ದಾರೆ.
ಡಿಕೆಶಿ ಮನವೊಲಿಕೆಗೆ ಹೈಕಮಾಂಡ್ ಸರ್ಕಸ್
ನಾಯಕತ್ವ ಬದಲಾವಣೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಸ್ಪಷ್ಟತೆ ಬಯಸಿದ್ದಾರೆ. ಸದ್ಯ ಯಾವುದೇ ನಿರ್ಧಾರವಿಲ್ಲ ಎಂದು ಹೈಕಮಾಂಡ್ ಹೇಳಿದೆ. ಇಷ್ಟೇ ಅಲ್ಲ ಮಾರ್ಚ್ ತಿಂಗಳವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಡಿಕೆ ಶಿವಕುಮಾರ್ ಮನ ಒಲಿಸಲು ಕಾಂಗ್ರೆಸೆ್ ಹೈಕಮಾಂಡ್ ಮುಂದಾಗಿದ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇಷ್ಟೇ ಅಲ್ಲ ಡಿಕೆ ಶಿವಕುಮಾರ್ ಮನ ಒಲಿಸುವ ಜವಾಬ್ದಾರಿಯನ್ನು ಕೆಜೆ ಜಾರ್ಜ್‌ಗೆ ನೀಡಲಾಗಿದೆ. ಇಂದು ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಬಳಿಕ ಕೆ.ಜೆ.ಜಾರ್ಜ್‌ಗೆ ಈ ಜವಾಬ್ದಾರಿ ನೀಡಲಾಗಿದೆ ಎನ್ನಲಾಗುತ್ತಿದೆ.
ಖರ್ಗೆ ಭೇಟಿ ಬಳಿಕ ಡಿಕೆಶಿವಕುಮಾರ್ ಅವರನ್ನ ಕರೆಸಿ ಕೆಜಿ ಜಾರ್ಜ್ ಮಾತುಕತೆ ನಡೆಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೆ.ಜೆ.ಜಾರ್ಜ್ ಸರ್ಕಾರಿ ನಿವಾಸಕ್ಕೆ ತೆರಳಿದ ಡಿಕೆ ಶಿವಕುಮಾರ್ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಒಂದು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಮಾತುಕತೆ ಬಳಿಕ ಉಭಯ ನಾಯಕರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ನಾಯಕರು
ಕಳೆದ ಮೂರು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿದ್ದಾರೆ. ಇದರ ನಡುವೆ ಖರ್ಗೆ ರಾಜ್ಯ ನಾಯಕರ ಭೇಟಿ ಹಾಗೂ ಮಾತುಕತೆಗೆ ಸಮಯ ನೀಡಿದ್ದರು. ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ನಿನ್ನೆ ರಾತ್ರಿ ಖರ್ಗೆ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸುದೀರ್ಘ ಮಾತುಕತೆ ನಡೆಸಿತ್ತು. ಈ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅನಗತ್ಯ ಹೇಳಿಕೆಗಳನ್ನು ಮಾಧ್ಯಮಗಳ ಮೂಲಕ ನೀಡುತ್ತಿರುವ ಕಾರಣ ಗೊಂದಲ ಸೃಷ್ಟಿಯಾಗುತ್ತಿದೆ. ನಾಯಕರು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ಕುರಿತು ಖರ್ಗೆ ಒತ್ತಿ ಹೇಳಿದ್ದಾರೆ ಎನ್ನಲಾಗಿದೆ.


