ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ, ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಡಿ ಸಿ ಆರ್ ಇ ಎಸ್‌ಪಿ ಕಾಶಿನಾಥ್ ಅವರು ಡಿಜಿಪಿ ಸಲೀಂ ಅವರಿಗೆ ಪತ್ರ ಬರೆದಿದ್ದಾರೆ. 

ಬೆಂಗಳೂರು (ಏ.20): ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಶೀತಲ ಸಮರ ಈಗ ಸ್ಫೋಟಗೊಂಡಿದೆ. ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಡಿ ಸಿ ಆರ್ ಇ (DCRE) ಎಸ್‌ಪಿ ಕಾಶಿನಾಥ್ ಅವರು ಡಿಜಿಪಿ ಸಲೀಂ ಅವರಿಗೆ ಗಂಭೀರ ಆರೋಪಗಳಿರುವ ಪತ್ರ ಬರೆಯುವ ಮೂಲಕ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ತಾರತಮ್ಯ ಮಾಡುತ್ತಿದ್ದಾರೆ ಎಂದು ಎಸ್‌ಪಿ ಕಾಶಿನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. "ನನಗೆ ಕೇವಲ 30 ನಿಮಿಷಗಳ ಕಾಲಾವಕಾಶ ನೀಡಿ, ಈ ಐಪಿಎಸ್ ಅಧಿಕಾರಿಯ ಎಲ್ಲಾ ಕರ್ಮಕಾಂಡಗಳನ್ನು ನಿಮ್ಮ ಮುಂದೆ ಬಯಲು ಮಾಡುತ್ತೇನೆ" ಎಂದು ಡಿಜಿಪಿಯವರಿಗೆ ಬರೆದ ಪತ್ರದಲ್ಲಿ ಸವಾಲು ಹಾಕಿದ್ದಾರೆ.

ಎಸ್‌ಪಿ ಕಾಶಿನಾಥ್ ಮಾಡಿರುವ ಗಂಭೀರ ಆರೋಪಗಳು

ಐಪಿಎಸ್ ಅಧಿಕಾರಿಗಳು ಹೇಳಿದಂತೆ ಕೆಲಸ ಮಾಡದಿದ್ದರೆ ಶೋಕಾಸ್ ನೋಟಿಸ್ (Memo) ನೀಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಕರ್ನಾಟಕ ಮೂಲದ ಅಧಿಕಾರಿಗಳನ್ನು ಮುದ್ದಾಂ ಗುರಿ ಮಾಡಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಭ್ರಷ್ಟಾಚಾರ ಮತ್ತು ಕಿರುಕುಳದ ವಿಷಯವನ್ನು ಕೇವಲ ಡಿಜಿಪಿ ಮಾತ್ರವಲ್ಲದೆ, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಗಮನಕ್ಕೂ ತರಬೇಕು. ಹಾಗಾಗಿ ಅವರನ್ನು ಭೇಟಿ ಮಾಡಿಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಮುಕ್ತವಾಗಿ ಮಾತನಾಡಲು ಒಂದು ವಾರದೊಳಗೆ ಭೇಟಿಗೆ ಸಮಯ ನಿಗದಿಪಡಿಸುವಂತೆ ಎಸ್‌ಪಿ ಪಟ್ಟು ಹಿಡಿದಿದ್ದಾರೆ.

ಹಲವು ಬಾರಿ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈಗ ಎಸ್‌ಪಿ ಕಾಶಿನಾಥ್ ಅವರು ನೇರವಾಗಿ ಡಿಜಿಪಿ ಅಂಗಳಕ್ಕೆ ಚೆಂಡನ್ನು ಎಸೆದಿದ್ದಾರೆ. ಈ ಬೆಳವಣಿಗೆಯಿಂದಾಗಿ ಪೊಲೀಸ್ ಇಲಾಖೆಯಲ್ಲಿ ಆಂತರಿಕ ಭಿನ್ನಮತ ಬೀದಿಗೆ ಬಂದಂತಾಗಿದೆ.