ಕೇಂದ್ರ ಸರ್ಕಾರದ ಶೇ.20ರ ಮಿತಿಯನ್ನು ಮೀರಿ ಪೆಟ್ರೋಲ್‌ನಲ್ಲಿ ಶೇ.31.2ರಷ್ಟು ಎಥೆನಾಲ್ ಮಿಶ್ರಣವಾಗಿರುವುದು ಕರ್ನಾಟಕ ಸರ್ಕಾರದ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಇದರಿಂದ ವಾಹನಗಳ ಮೈಲೇಜ್ ಮತ್ತು ಎಂಜಿನ್ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ರೈತರಿಗೂ ಅನ್ಯಾಯವಾಗುತ್ತಿದೆ ಎಂದು ರಾಜ್ಯ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಬೆಂಗಳೂರು (ನ.06): ದೇಶಾದ್ಯಂತ ಪೆಟ್ರೋಲ್‌ನಲ್ಲಿ ಶೇಕಡಾ 20ರಷ್ಟು ಎಥೆನಾಲ್ (E20) ಮಿಶ್ರಣ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವ ಬೆನ್ನಲ್ಲೇ, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದೆ. ರಾಜ್ಯದ 7 ಜಿಲ್ಲೆಗಳಿಂದ ಪ್ರಮುಖ ತೈಲ ಸಂಸ್ಥೆಗಳ (IOCL, HPCL, BPCL ಇತ್ಯಾದಿ) ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಇಂಧನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ನಿಗದಿತ ಶೇ. 20ರ ಮಿತಿಯನ್ನು ಮೀರಿ ಶೇಕಡಾ 31.2 ರಷ್ಟು ಎಥೆನಾಲ್ ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ವಾಹನಗಳ ದಕ್ಷತೆ ಮತ್ತು ಹೆಚ್ಚುವರಿ ಹಣದ ಹೊರೆಗೆ ಯಾರು ಹೊಣೆ?
ಕೇಂದ್ರ ಸರ್ಕಾರವೇ ಒಪ್ಪಿಕೊಂಡಿರುವಂತೆ E20 (ಶೇ. 20 ಎಥೆನಾಲ್) ಬಳಕೆಯಿಂದಲೇ ವಾಹನಗಳ ಮೈಲೇಜ್ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಹೀಗಿರುವಾಗ, ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಶೇಕಡಾ 30ಕ್ಕಿಂತ ಹೆಚ್ಚಾದರೆ ವಾಹನ ಎಂಜಿನ್‌ಗಳ ಕಾರ್ಯಕ್ಷಮತೆ ಹಾಗೂ ಆಯುಷ್ಯದ ಮೇಲಾಗುವ ಭಾರಿ ಪರಿಣಾಮಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಎದ್ದಿದೆ. ಎಥೆನಾಲ್ ಇಂಧನಕ್ಕೆ ಹೊಂದಿಕೆಯಾಗದ ಹಳೆಯ ವಾಹನಗಳಿಗೆ ಇದು ನೇರ ಹಾನಿ ಉಂಟುಮಾಡಲಿದ್ದು, ಮೈಲೇಜ್ ಕಡಿಮೆಯಾಗುವುದರಿಂದ ಗ್ರಾಹಕರಿಗೆ ಇಂಧನ ವೆಚ್ಚ ಹೆಚ್ಚಾಗುತ್ತಿದೆ. ಈ ತಪ್ಪಿಗೆ ಸಾಮಾನ್ಯ ವಾಹನ ಸವಾರರು ತಮ್ಮ ಜೇಬಿನಿಂದ ಬೆಲೆ ತೆರಬೇಕಾಗಿ ಬಂದಿರುವುದು ಗ್ರಾಹಕ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ ಎಂದು ಸರ್ಕಾರ ಕಿಡಿಕಾರಿದೆ.
ರೈತರ ವಿಷಯದಲ್ಲೂ ಕೇಂದ್ರ ಸರ್ಕಾರದ ದ್ವಂದ್ವ ನಿಲುವು
ಒಂದೆಡೆ ಎಥೆನಾಲ್ ಮಿಶ್ರಣದಿಂದ ಕಬ್ಬು ಬೆಳೆಯುವ ರೈತರಿಗೆ ಲಾಭವಾಗುತ್ತದೆ ಎಂದು ಪ್ರತಿಪಾದಿಸುವ ಕೇಂದ್ರ ಸರ್ಕಾರ, ಮತ್ತೊಂದೆಡೆ ಎಥೆನಾಲ್ ಖರೀದಿಗಾಗಿ ಹೊರಡಿಸಿರುವ ಹೊಸ ಟೆಂಡರ್ ನಿಯಮಗಳಲ್ಲಿ ಕಬ್ಬಿನ ರಸ (Sugarcane Juice), ಸಕ್ಕರೆ ಪಾಕ (Sugar Syrup) ಹಾಗೂ ಬಿ-ಹೆವಿ ಮೊಲಾಸಿಸ್ ನಿಂದ ತಯಾರಿಸುವ ಎಥೆನಾಲ್ ಅನ್ನು ಹೊರಗಿಟ್ಟಿದೆ. ಕರ್ನಾಟಕದ ರೈತರು ತೀವ್ರ ಬರದಿಂದ ಕಷ್ಟಪಡುತ್ತಿರುವ ಈ ಸಮಯದಲ್ಲಿ, ಕಬ್ಬಿನ ಎಥೆನಾಲ್‌ಗೆ ಇರುವ ಪ್ರಮುಖ ಮಾರುಕಟ್ಟೆ ಅವಕಾಶವನ್ನು ಕೇಂದ್ರವೇ ಕಡಿತಗೊಳಿಸುತ್ತಿದೆ. ಇತ್ತ ರೈತರಿಗೂ ನ್ಯಾಯ ಸಿಗದೆ, ಅತ್ತ ಗ್ರಾಹಕರಿಗೂ ಸೂಕ್ತ ಇಂಧನ ಸಿಗದೆ ಇಬ್ಬರನ್ನೂ ವಂಚಿಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಸಮಗ್ರ ತನಿಖೆಗೆ ಆಗ್ರಹಿಸಿದ ಕರ್ನಾಟಕ ಸರ್ಕಾರ
ಕರ್ನಾಟಕದಲ್ಲಿ ನಡೆಸಲಾದ ಈ ಪ್ರಯೋಗಾಲಯ ಪರೀಕ್ಷೆಯ ವರದಿಯನ್ನು ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.
- ಸಮಗ್ರ ತನಿಖೆ: ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಿ ಮಾರಾಟ ಮಾಡುತ್ತಿರುವ ತೈಲ ಕಂಪನಿಗಳ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.
- ಬಂಕ್‌ಗಳಲ್ಲಿ ಮಾಹಿತಿ ಪ್ರಕಟಣೆ: ಪ್ರತಿ ಪೆಟ್ರೋಲ್ ಬಂಕ್‌ನಲ್ಲೂ ಸಾರ್ವಜನಿಕರಿಗೆ ಕಾಣಿಸುವಂತೆ ಪೆಟ್ರೋಲ್‌ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣವಾಗಿದೆ ಎಂಬುದನ್ನು ಸ್ಪಷ್ಟವಾಗಿ ಪ್ರಕಟಿಸಬೇಕು.
- ನಷ್ಟ ಪರಿಹಾರ ಮತ್ತು ಭದ್ರತೆ: ವಾಹನ ಸವಾರರ ಹಿತಾಸಕ್ತಿ ಕಾಪಾಡಲು ಹಾಗೂ ಎಂಜಿನ್‌ಗಳಿಗೆ ಹಾನಿಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಬೇಕು.
ಈ ಕುರಿತು ದೇಶದ ಜನತೆಗೆ ಹಾಗೂ ವಾಹನ ಸವಾರರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಉತ್ತರಿಸಬೇಕೆಂದು ರಾಜ್ಯ ಸರ್ಕಾರದ ಪರವಾಗಿ ಆಗ್ರಹಿಸಲಾಗಿದೆ.














