ಬೆಂಗಳೂರು(ಮೇ.09): ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಪ್ರತಿಪಕ್ಷ ನಾಯಕರ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಕೊರೋನಾ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ರಾಜ್ಯಕ್ಕೆ 50 ಸಾವಿರ ಕೋಟಿ ರು. ವಿಶೇಷ ಪ್ಯಾಕೇಜ್‌ ನೀಡಲು ಕೇಂದ್ರ ಸರ್ಕಾರವನ್ನು ಕೋರುವಂತೆ ಒತ್ತಾಯಿಸಿತು. ಅಲ್ಲದೆ, ಅನೇಕ ಬೇಡಿಕೆಗಳನ್ನು ಮಂಡಿಸಿತು. ಅವುಗಳ ವಿವರ ಇಂತಿದೆ.

ವಿಪಕ್ಷಗಳ ಬೇಡಿಕೆ

1. ರಾಷ್ಟ್ರೀಯ ವಿಪತ್ತು ಘೋಷಿಸಿ .50000 ಕೋಟಿ ನೀಡಲು ಕೇಂದ್ರವನ್ನು ಒತ್ತಾಯಿಸಿ

2. ತೆಲಂಗಾಣ, ಕೇರಳ ಮಾದರಿಯಲ್ಲಿ .50000 ಕೋಟಿ ವಿಶೇಷ ಪ್ಯಾಕೇಜನ್ನು ನೀಡಿ

3. ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ .10000 ಕೋಟಿ ವಿಶೇಷ ಪ್ಯಾಕೇಜ್‌ ಕೊಡಿ

4. ಕಲಾವಿದರು, ವಿವಿಧ ಮಾಧ್ಯಮಗಳ ನೌಕರರು, ಬೀದಿಬದಿ ವ್ಯಾಪಾರಿಗಳು, ಮಂಗಳಮುಖಿಯರು, ಅಂಗವಿಕಲರು, ಹಮಾಲಿಗಳು, ಅರ್ಚಕರಿಗೆ ಪ್ರತಿ ತಿಂಗಳು .10000 ನೀಡಿ

5. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲು .5000 ಕೋಟಿ ಆವರ್ತ ನಿಧಿ ಸ್ಥಾಪಿಸಿ

6. ವೈಜ್ಞಾನಿಕ ಸಮೀಕ್ಷೆ ನಡೆಸಿ ಕೋಳಿ ಸಾಕಣೆದಾರರು, ರೇಷ್ಮೆ ಕೃಷಿಕರಿಗೆ ಶೇ.50 ಪರಿಹಾರ ನೀಡಿ

7. ಕೊರೋನಾ ನಿಯಂತ್ರಣಕ್ಕಾಗಿ ಸಿಎಂ ಪರಿಹಾರ ನಿಧಿಯ ಕುರಿತು ಶ್ವೇತ ಪತ್ರ ಹೊರಡಿಸಿ

8. ಮೂರು ತಿಂಗಳು ಕೈಗಾರಿಕೆಗಳಿಗೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು

9. ನರೇಗಾ ಕಾರ್ಮಿಕರಿಗೆ ಒಂದು ತಿಂಗಳ ಹಣವನ್ನು ಉಚಿತವಾಗಿ ನೀಡಬೇಕು