ಕೊರೋನಾ ಲ್ಯಾಬ್‌: ಗುರಿ ಮುಟ್ಟಿದ ರಾಜ್ಯ| ಶೀಘ್ರ 60ನೇ ಲ್ಯಾಬ್‌ ಶುರು-ಸುಧಾಕರ್‌|  ಗಡುವಿನೊಳಗೆ ಗುರಿ ತಲುಪಿದ ಮೊದಲ ರಾಜ್ಯ ಕರ್ನಾಟಕ| ಇದರಿಂದ ಹೆಚ್ಚು ಪರೀಕ್ಷೆ ಸಾಧ್ಯ

ಬೆಂಗಳೂರು(ಮೇ.28): ರಾಜ್ಯದ 60ನೇ ಕೋವಿಡ್‌ 19 ಪ್ರಯೋಗಾಲಯವು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಆರಂಭವಾಗಲಿದೆ. ತನ್ಮೂಲಕ ಕೇಂದ್ರ ಸರ್ಕಾರ ನೀಡಿದ ಗಡುವಿನೊಳಗೆ ರಾಜ್ಯದಲ್ಲಿ 60 ಕೋವಿಡ್‌ 19 ಪರೀಕ್ಷಾ ಕೇಂದ್ರಗಳ ಗುರಿ ಮುಟ್ಟಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ.

ಹೀಗೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಬುಧವಾರ ಟ್ವೀಟ್‌ ಮಾಡಿದ್ದಾರೆ.

‘ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಯಲ್ಲಿ ರಾಜ್ಯದ 60ನೇ ಕೊರೋನಾ ಸೋಂಕು ಪರೀಕ್ಷಾ ಪ್ರಯೋಗಾಲಯ ಆರಂಭವಾಗಲಿದೆ. ಇದರಿಂದ ಕೇಂದ್ರ ಸರ್ಕಾರ ನೀಡಿದ ಮೇ 31ರ ಅವಧಿಗೂ ಮೊದಲೇ ಕರ್ನಾಟಕ 60 ಅನುಮೋದಿತ ಕೋವಿಡ್‌ 19 ಪ್ರಯೋಗಾಲಯಗಳನ್ನು ಸ್ಥಾಪಿಸಿದ ಮೊದಲ ರಾಜ್ಯವಾಗಲಿದೆ. ಈ ಸಾಧನೆಗೆ ಕಾರಣಕರ್ತರಾದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮತ್ತು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ಧನ್ಯವಾದ ತಿಳಿಸುವೆ’ ಎಂದು ಅವರು ಹೇಳಿದ್ದಾರೆ.

ಕೊರೋನಾ ಎಫೆಕ್ಟ್: ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರ್ಕಾರ, ದೇಶದಲ್ಲಿಯೇ ಮೊದಲ ಪ್ರಯತ್ನ

ಇದರಿಂದ ಹೆಚ್ಚು ಪರೀಕ್ಷೆ ಸಾಧ್ಯ:

ರಾಜ್ಯಕ್ಕೆ ಕೊರೋನಾ ಸೋಂಕು ಕಾಲಿಟ್ಟಆರಂಭದಲ್ಲಿ ಕೇವಲ 2 ಪ್ರಯೋಗಾಲಯಗಳು ಮಾತ್ರ ಇದ್ದವು. ಇವುಗಳಲ್ಲಿ ನಿತ್ಯ 300ರಷ್ಟುಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವಿತ್ತು. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯ ಸರ್ಕಾರ ಈ ಪ್ರಯೋಗಾಲಯಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿದೆ.

ಮೇ 31ರೊಳಗೆ ನಿತ್ಯ ಕನಿಷ್ಠ 10 ಸಾವಿರ ಜನರಿಗೆ ಪರೀಕ್ಷೆ ನಡೆಸುವ ಗುರಿ ಹೊಂದಿರುವುದಾಗಿ ಸಚಿವ ಸುಧಾಕರ್‌ ಹಲವು ಬಾರಿ ಹೇಳಿದ್ದರು. ಆ ಗುರಿಯನ್ನು 10 ದಿನಗಳಿಗೆ ಮೊದಲೇ ತಲುಪಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ನಿತ್ಯ 12 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಶೀಘ್ರವೇ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ತಲಾ ಎರಡು ಲ್ಯಾಬ್‌ ಅಸ್ತಿತ್ವಕ್ಕೆ ಬರಲಿದೆ.