KPCC ಅಧ್ಯಕ್ಷ, ಸಿಎಂ ಸ್ಥಾನ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಹತ್ವದ ಹೇಳಿಕೆ; ಹೇಳಿದ್ದೇನು?
ಕೆಪಿಸಿಸಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತು ಸಚಿವರು, ಶಾಸಕರ ಹೇಳಿಕೆಗಳು ವೈಯಕ್ತಿಕ ಅಭಿಪ್ರಾಯಗಳಷ್ಟೇ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಮೊಣಕಾಲು ನೋವು ನಿವಾರಣೆಯಾದ ಬಳಿಕ ಹೈಕಮಾಂಡ್ ನಾಯಕರ ಭೇಟಿ ಮಾಡುವುದಾಗಿ ಹೇಳಿದ್ದಾರೆ.

ಬೆಂಗಳೂರು (ಫೆ.19): ಕೆಪಿಸಿಸಿ ಅಧ್ಯಕ್ಷ ಹುದ್ದೆ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಸಚಿವರು, ಶಾಸಕರು ನೀಡುತ್ತಿರುವ ಹೇಳಿಕೆಗಳು ಕೇವಲ ಅವರ ವೈಯಕ್ತಿಕ ಅಭಿಪ್ರಾಯ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗಳ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಯಾರೇ ಮಾತನಾಡಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹಠ ಹಿಡಿದಿಲ್ಲ, ರಿಕ್ವೆಸ್ಟ್ ಅಷ್ಟೇ: ಸತೀಶ್ ಜಾರಕಿಹೊಳಿ
ಅಧಿಕಾರ ಹಂಚಿಕೆ ಸೂತ್ರದ ಕುರಿತ ಪ್ರಶ್ನೆಗೆ ಉತ್ತರಿಸಿ, ಯಾವುದೇ ವಿಚಾರವಾದರೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಹೈಕಮಾಂಡ್ ನಾಯಕರು ಯಾವ ರೀತಿ ತೀರ್ಮಾನಿಸುತ್ತಾರೋ ಅದನ್ನು ನಾನೂ ಸೇರಿದಂತೆ ಎಲ್ಲರೂ ಒಪ್ಪಬೇಕಾಗುತ್ತದೆ ಎಂದ ಅವರು, ನನಗೆ ಮೊಣಕಾಲಿನ ನೋವಿದ್ದು, ಅದು ನಿವಾರಣೆಯಾದ ನಂತರ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ. ನಾನೇ ದೆಹಲಿಗೆ ಹೋಗಬೇಕೆ ಅಥವಾ ಹೈಕಮಾಂಡ್ ನಾಯಕರೇ ಇಲ್ಲಿಗೆ ಬರುತ್ತಾರೆಯೇ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಯಾವ ನೋಟಿಸ್‌ಗೂ ಉತ್ತರಿಸೋಲ್ಲ ಎಂದಿದ್ದ ಯತ್ನಾಳ್ ಕಡೆಗೂ ಉತ್ತರ! ಏನಿದೆ? | ಇಂದು ವಿಜಯೇಂದ್ರ ಸುದ್ದಿಗೋಷ್ಠಿ ಕುತೂಹಲ!
ಸಿಎಂ ಭೇಟಿಯಾಗಿ ರಾಜಣ್ಣ ಚರ್ಚೆ
ಮುಖ್ಯಮಂತ್ರಿ ಸ್ಥಾನದ ಕುರಿತಂತೆ ನಾಯಕರು ನೀಡುತ್ತಿರುವ ಹೇಳಿಕೆಗಳು ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಸಚಿವ ಕೆ.ಎನ್. ರಾಜಣ್ಣ ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲಕಾಲ ಚರ್ಚಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ನೀಡಿರುವ ಹೇಳಿಕೆ ಸೇರಿದಂತೆ ಮತ್ತಿತರ ವಿಚಾರಗಳ ಕುರಿತಂತೆ ರಾಜಣ್ಣ ಅವರು ಸಿದ್ದರಾಮಯ್ಯ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.