ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ನಾಗರಿಕರ ಸುರಕ್ಷತೆ ಹೆಚ್ಚಿಸಲು ಮತ್ತು ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆಯು 100 ಹೊಸ ಗಸ್ತು ವಾಹನ ನಿಯೋಜಿಸಲಿದೆ. ಈ ವಾಹನಗಳು ದಿನದ 24 ಗಂಟೆಯೂ ಪ್ರತಿ 15-20 ಕಿ.ಮೀ. ಅಂತರದಲ್ಲಿ ಗಸ್ತು ತಿರುಗುವ ಮೂಲಕ, ಪ್ರಯಾಣಿಕರಿಗೆ ತ್ವರಿತ ನೆರವು, ರಕ್ಷಣೆ ಒದಗಿಸಲಿವೆ.
ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಮೇ.24): ನಾಡಿನ ಸರಹದ್ದಿನಲ್ಲಿರುವ ಪ್ರಮುಖ ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಪಯಣದಲ್ಲಿ ನಾಗರಿಕರ ರಕ್ಷಣೆ ಹಾಗೂ ಅಪರಾಧ ಚಟುವಟಿಕೆಗಳಿಗೆ ಲಗಾಮು ಹಾಕಲು 100 ವಾಹನಗಳಲ್ಲಿ ಪೊಲೀಸರು ಶೀಘ್ರದಲ್ಲೇ ಕಾರ್ಯಾಚರಣೆಗೆ ಇಳಿಯಲಿದ್ದಾರೆ.
ಹೆದ್ದಾರಿಗಳ ಸುರಕ್ಷತೆಗೆ ಹೊಸ ಯೋಜನೆ ರೂಪಿಸಿರುವ ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗವು, ಹೆದ್ದಾರಿಗಳಲ್ಲಿ ಪ್ರತಿ 15-20 ಕಿ.ಮೀ. ಅಂತರದಲ್ಲಿ ಒಂದು ಪೊಲೀಸ್ ವಾಹನ ಗಸ್ತು ತಿರುಗಾಟಕ್ಕೆ ನಿಯೋಜಿಸಲು ಮುಂದಾಗಿದೆ. ಈ ಸಂಬಂಧ ಹೊಸ ವಾಹನಗಳ ಖರೀದಿಗೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಕೂಡ ಹಸಿರು ನಿಶಾನೆ ತೋರಿದೆ.
ಈ ಯೋಜನೆ ಕಾರ್ಯರೂಪಕ್ಕಿಳಿಸುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಆಯುಕ್ತ ಕೆ.ಪರಶುರಾಮ್ ಸೇರಿದಂತೆ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಮಿತಿ ಚರ್ಚಿಸಿದೆ. ಕೆಲವೇ ದಿನಗಳಲ್ಲಿ ವಾಹನ ಖರೀದಿಗೆ ಇಲಾಖೆ ಟೆಂಡರ್ ಕರೆಯುವ ಸಾಧ್ಯತೆಗಳಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಕಾರ್ಯಾಚರಣೆ ಹೇಗೆ?:
ಹೆದ್ದಾರಿಗಳ ಗಸ್ತು ವಿರಳವಾಗಿದೆ. ಹಾಗಾಗಿ ಪ್ರಯಾಣದ ವೇಳೆ ಅನಿರೀಕ್ಷಿತವಾಗಿ ವಾಹನ ಅಪಘಾತ ಅಥವಾ ಸಮಸ್ಯೆ ಎದುರಾದರೆ ನಾಗರಿಕರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಸಂಚಾರದಲ್ಲಿ ತೊಂದರೆ ಉಂಟಾದರೆ ಜನರು ಮತ್ತಷ್ಟು ಭೀತಿಗೊಳ್ಳುತ್ತಾರೆ. ಇಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಅಸುರಕ್ಷತೆ ಕಾಡುತ್ತದೆ. ಇನ್ನು ಕೆಲವು ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಸೇರಿ ಇತರೆ ಅಪರಾಧ ಕೃತ್ಯಗಳು ಹೆಚ್ಚು ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಹೆದ್ದಾರಿಗಳ ಸುರಕ್ಷತೆ ಸಲುವಾಗಿ ಗಸ್ತು ವ್ಯವಸ್ಥೆ ಬಲವರ್ಧನೆಗೆ ಪೊಲೀಸ್ ಇಲಾಖೆ ಹೊಸ ಯೋಜನೆ ರೂಪಿಸಿದೆ.
ಬೆಂಗಳೂರು-ಮೈಸೂರು, ಬಳ್ಳಾರಿ, ಬೆಳಗಾವಿ ಹಾಗೂ ಗೋವಾ ಹೆದ್ದಾರಿ ಸೇರಿದಂತೆ ರಾಜ್ಯ ವ್ಯಾಪ್ತಿಯ ಪ್ರಮುಖ ಹೆದ್ದಾರಿಗಳಲ್ಲಿ ಗಸ್ತು ತಿರುಗಾಟಕ್ಕೆ ಪೊಲೀಸರಿಗೆ ಹೊಸ ವಾಹನ ನೀಡಲಾಗುತ್ತದೆ. ಅಂತೆಯೇ ಪ್ರತಿ 15 ರಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ದಿನದ 24 ತಾಸು ಆ ವಾಹನ ಓಡಾಟ ನಡೆಸಲಿದೆ. ಈ ಗಸ್ತು ವಾಹನಗಳಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಸಾರಥ್ಯದಲ್ಲಿ 3 ರಿಂದ 4 ಸಿಬ್ಬಂದಿ ಇರುತ್ತಾರೆ. ಇದರಿಂದ ಒಂದೆಡೆ ಹೆದ್ದಾರಿಗಳಲ್ಲಿ ತೊಂದರೆಗೆ ಸಿಲುಕುವ ನಾಗರಿಕರಿಗೆ ಕೆಲವೇ ನಿಮಿಷಗಳಲ್ಲಿ ಪೊಲೀಸರ ನೆರವು ಸಿಗಲಿದೆ. ಮತ್ತೊಂದೆಡೆ ಪೊಲೀಸ್ ವಾಹನಗಳ ಸಂಚಾರದಿಂದ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
150 ವಾಹನಕ್ಕೆ ಬೇಡಿಕೆ, 100 ವಾಹನಗಳಿಗೆ ಓಕೆ
ಹೆದ್ದಾರಿಗಳ ಗಸ್ತಿಗೆ 150 ವಾಹನಗಳ ಖರೀದಿಗೆ ರಾಜ್ಯ ಸರ್ಕಾರಕ್ಕೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಮೊದಲ ಹಂತದಲ್ಲಿ 100 ವಾಹನಗಳ ಖರೀದಿಗೆ ಸರ್ಕಾರ ಸಮ್ಮತಿಸಿದೆ ಎಂದು ತಿಳಿದು ಬಂದಿದೆ.
ಸುರಕ್ಷತೆಗೆ ಆದ್ಯತೆ
ಹೆದ್ದಾರಿಗಳಲ್ಲಿ ನಾಗರಿಕರ ಸುರಕ್ಷತೆಗೆ ಪ್ರಮುಖವಾಗಿ ಆದ್ಯತೆ ನೀಡಲಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಗಸ್ತು ವಾಹನಗಳು ನಿಯೋಜನೆಯಾಗಲಿವೆ.
-ಕೆ.ಪರಶುರಾಮ್, ಆಯುಕ್ತ, ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ.


