ಕರ್ನಾಟಕ ಮುಸ್ಲಿಂ ಮೀಸಲಾತಿ ರದ್ದು ಪ್ರಕರಣ ಯಥಾಸ್ಥಿತಿ ಇರಲಿ: ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ಪ್ರಕರಣದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ದೆಹಲಿ (ಮೇ 09): ರಾಜ್ಯದಲ್ಲಿ ಹಿಂದುಳಿದ ವರ್ಗದ (ಒಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಹೊಂದಿದ್ದ ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದುಹಾಕಿ ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿಗೆ ಸೇರ್ಪಡೆ ಮಾಡಿದ್ದ ಕರ್ನಾಟಕ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಇದನ್ನೇ ಯಥಾಸ್ಥಿತಿಯಲ್ಲಿ ಕಾಯ್ದಿಡುವಂತೆ ಮತ್ತೊಮ್ಮೆ ಆದೇಶಿದಿದೆ.
ರಾಜ್ಯ ಸರ್ಕಾರದಿಂದ ರದ್ದುಗೊಳಿಸಲಾಗಿದ್ದ ಮುಸ್ಲಿಂ ಸಮುದಾಯದ ಒಬಿಸಿ ಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಈ ಕುರಿತು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಆದೇಶಕ್ಕೆ ಏ.25ರಮದು ತಡೆ ನೀಡಿತ್ತು. ಜೊತೆಗೆ, ಇಂದು (ಮೇ 9- ಮಂಗಳವಾರ) ಪ್ರಕರಣವನ್ನು ನ್ಯಾ.ಕೆ.ಎಂ.ಜೋಸೆಫ್ ನೇತೃತ್ವದ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, ಈ ಹಿಂದಿನ ಆದೇಶವನ್ನು ಮುಂದುವರೆಸುವ ಹಾಗೂ ಮೀಸಲಾತಿ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಲಾಗಿದೆ.
ಕರ್ನಾಟಕ ಸರ್ಕಾರದ ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂ ಕೋರ್ಟ್ ತಡೆ
ಹಿಂದಿನ ಹೇಳಿಕೆಗೆ ಬದ್ಧ: ರಾಜ್ಯ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಸಂವಿಧಾನಾತ್ಮಕ ಪೀಠದಲ್ಲಿ ಪ್ರಕರಣದ ವಿಚಾರಣೆ ಇದೆ ಹಾಗಾಗಿ ಮುಂದೂಡುವಂತೆ ಮನವಿ ಮಾಡಿದರು. ಅಲ್ಲದೇ ಸರ್ಕಾರ ತನ್ನ ಹಿಂದಿನ ಹೇಳಿಕೆ ಗೆ ಬದ್ದವಾಗಿರುತ್ತದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪೀಠ ಆದೇಶ ಹೊರಡಿಸಿದೆ.
ಜುಲೈ 25ಕ್ಕೆ ಮುಂದೂಡಿಕೆ: ಕರ್ನಾಟಕ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು, ಈ ಪ್ರಕರಣದಲ್ಲಿ ಹಿಂದಿನ ಸ್ಥಿತಿಯನ್ನೇ ಕಾಯ್ದುಕೊಳ್ಳಬೇಕು ಎಂದು ಆದೇಶಿಸಿದ್ದಾರೆ. ಈ ಹಿಂದಿನ ವಿಚಾರಣೆಯಲ್ಲಿ ರಾಜ್ಯದಲ್ಲಿ ಯಾವುದೇ ನೇಮಕಾತಿಗಳನ್ನು ಮಾಡುವುದಿಲ್ಲ, ಜೊತೆಗೆ ಹೊಸ ನಿಯಮಗಳನ್ನು ಅನ್ವಯ ಮಾಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಸರ್ಕಾರದಿಂದ ತಿಳಿಸಲಾದ ಮಾಹಿತಿಯಂತೆಯೇ ನಡೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಚುನಾವಣೆ ವೇಳೆ ಈ ಈ ವಿಷ್ಯ ಪ್ರಸ್ತಾಪ ಬೇಕಿತ್ತಾ?: ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಪ್ರಕರಣ ದಾಖಲಿಸಿದ ಅರ್ಜಿದಾರರ ಪರ ವಾದ ಮಂಡಿಸಿದ ದುಷ್ಯಂತ್ ದವೆ ಅವರು, ಮುಸ್ಲಿಂ ಮೀಸಲು ರದ್ದು ಬಗ್ಗೆ ಚುನಾವಣೆ ಪ್ರಚಾರ ವೇಳೆ ಪ್ರಸ್ತಾಪ ಮಾಡಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಂ ಮೀಸಲಾತಿ ರದ್ದು ಕುರಿತು ಕರ್ನಾಟಕ ದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣ ನ್ಯಾಯಾಲಯದ ಮುಂದೆ ಇರುವಾಗ ಚುನಾವಣೆ ವೇಳೆ ಇಂಥ ಪ್ರಸ್ತಾಪ ಸರಿ ಅಲ್ಲ ಎಂದ ಸುಪ್ರೀಂ ಕೋರ್ಟ್ ಕಿಡಿಕಾರಿದೆ.
ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಲವಾಗಿದೆ, ಮುಸ್ಲಿಂ ಮೀಸಲಾತಿ 1 ವರ್ಷ ಮೊದಲೇ ತೆಗೆಯಬೇಕಿತ್ತು: ಅಮಿತ್ ಶಾ
ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಹೋರಾಟ: ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯವು ಸಾಮಾಜಿಕ ಹಿಂದುಳಿದ ವರ್ಗದ (ಒಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಪಡೆದುಕೊಮಡಿತ್ತು. ಆದರೆ, ಇತ್ತೀಚೆಗೆ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮುಸ್ಲಿಮರಿಗೆ ನೀಡಲಾಗಿದ್ದ ಸಾಮಾಜಿಕ ಹಿಂದುಳಿದ ವರ್ಗದ ಮೀಸಲಾತಿಯನ್ನು ರದ್ದುಗೊಳಿಸಿ ಅವರನ್ನು ಸಾಮಾನ್ಯ ವರ್ಗದ ಆರ್ಥಿಕ ಹಿಂದುಳಿದವರಿಗೆ ನೀಡಲಾಗುತ್ತಿದ್ದ ಶೇ.10 ಮೀಸಲಾತಿಗೆ ಸೇರ್ಪಡೆ ಮಾಡಲಾಗಿತ್ತು. ಇದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮುಸ್ಲಿಂ ಸಮುದಾಯ ರಾಜ್ಯಾದ್ಯಂತ ಹೋರಾಟವನ್ನೂ ಮಾಡಿತ್ತು.