ದೆಹಲಿ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಂಡರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಶಿವರಾಜ ತಂಗಡಗಿ, ಬಿಜೆಪಿ ಇವಿಎಂ ದುರ್ಬಳಕೆ ಮಾಡಲು ಯತ್ನಿಸಿದೆ ಎಂದು ಆರೋಪಿಸಿದ್ದಾರೆ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿದರೆ ಬಿಜೆಪಿ ಗೆಲುವು ಅಸಾಧ್ಯ ಎಂದೂ ಅವರು ಹೇಳಿದ್ದಾರೆ.

ಕೊಪ್ಪಳ (ಫೆ.10): ದೆಹಲಿ ಚುನಾವಣೆ ಮತದಾರರ ತೀರ್ಪಿಗೆ ತಲೆಬಾಗುತ್ತೇವೆ. ಆದರೆ ನನಗೆ ಈ ಇವಿಎಂ ಮೇಲೆ ಇನ್ನೂ ನಂಬಿಕೆ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅನುಮಾನ ವ್ಯಕ್ತಪಡಿಸಿದರು.

ಇಂದು ಕೊಪ್ಪಳ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಗರು ಕರ್ನಾಟಕದಲ್ಲಿ ಇದೇ ರೀತಿ ಇವಿಎಂ ದುರ್ಬಳಕೆ ಮಾಡಲು ನೋಡಿದ್ರು. ಆದ್ರೆ ರಾಜ್ಯದಲ್ಲಿ ಹಾಗೆ ಮಾಡಲಿಕ್ಕೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇಲ್ಲಿನ ವಾತಾವರಣ ಚೆನ್ನಾಗಿದ್ದರಿಂದ. ಹಾಗೇನಾದ್ರೂ ಮಾಡಿದ್ರೆ ಸಿಕ್ಕಿಬಿಳ್ತೀವಿ ಅನ್ನೋ ಭಯದಿಂದ ಮಾಡಿರಲಿಕ್ಕಿಲ್ಲ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು(ಕಾಂಗ್ರೆಸ್)185 ರಿಂದ 190 ಗೆಲ್ಲಬಹುದಿತ್ತು. ಆದರೆ 135 ಕ್ಕೆ ಬಂದಿದ್ದೇವೆ. ಇವಿಎಂ ಬದಲು ಬ್ಯಾಲೇಟ್ ಪೇಪರ್ ನಲ್ಲಿ ಒಂದು ರಾಜ್ಯದ ಚುನಾವಣೆ ಮಾಡಿ‌ ನೋಡಲಿ ಬಿಜೆಪಿ ಗೆಲುವು ಅಸಾಧ್ಯವೆನ್ನುವುದು ಗೊತ್ತಾಗುತ್ತದೆ. ಮಹಾರಾಷ್ಟ್ರದಲ್ಲಿ 34 ಲಕ್ಷ ಓಟಿಂಗ್ ಹೆಚ್ಚಾಗಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿ ಚುನಾವಣಾ ಕುತಂತ್ರದ ವಿರುದ್ಧ ಒಂದಲ್ಲ ಒಂದು ದಿನ ದೇಶದ ಜನ ರೊಚ್ಚಿಗೇಳ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್ ಗೆಲ್ಲುತ್ತೆ ಮುಂದಿನ ಸಲ ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗ್ತಾರೆ: ಶಿವರಾಜ ತಂಗಡಗಿ ಭವಿಷ್ಯ

ಇದೇ ವೇಳೆ 'ವಾಲ್ಮೀಕಿ ರಾಮ ಬೇರೆ, ಅಯೋಧ್ಯ‌ ರಾಮ ಬೇರೆ' ಎಂಬ ಸಚಿವ ಮಹದೇವಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಮ ಒಬ್ಬನೇ, ಆದ್ರೆ ರಾಮನನ್ನು ಸೃಷ್ಟಿ ಮಾಡಿದ್ದು ವಾಲ್ಮೀಕಿ. ಬಿಜೆಪಿಯವರು ಕೆಲ ದೇವರನ್ನು ಗುತ್ತಿಗೆ ಪಡೆದವರಂತೆ ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ದಿನಾ ಬೆಳಗಾದರೆ ದೇವರು, ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ನಾವೂ ರಾಮನ ಭಕ್ತರಿದ್ದೇವೆ, ಆಂಜನೇಯನ ಭಕ್ತರಿದ್ದೇವೆ. ನಾನು ದೇವರನ್ನು ನಂಬುತ್ತೇನೆ. ಹೋಗಲು ಸಾಧ್ಯವಾದ್ರೆ ನಾನೂ ಪ್ರಯಾಗರಾಜ್ ಕ್ಕೆ ಹೋಗಿ ಪವಿತ್ರ ಸ್ನಾನ ಮಾಡುತ್ತೇನೆ. ಬಿಜೆಪಿಯವರೇ ಎಷ್ಟು ದಿನ ನೀವು ಜನರ ಮೇಲೆ ಧರ್ಮ ಪ್ರಯೋಗ ಮಾಡುತ್ತೀರಿ? ಒಂದಲ್ಲ ಒಂದು ದಿನ ಜನರೇ ಬಿಜೆಪಿಯವರಿಗೆ ಪಾಠ ಕಲಿಸುತ್ತಾರೆ ಎಂದರು.

'ಶುಭವಾಗಲಿ' ಪದ ತಪ್ಪು ಬರೆದ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕನ್ನಡ ಭಾಷೆಯಲ್ಲಿ ಯಾರು ಪರಿಪಕ್ವರಿದ್ದಾರೆ ಬರೆಯುವಾಗ ಒತ್ತಕ್ಷರ, ದೀರ್ಘ ಹೆಚ್ಚು ಕಡಿಮೆಯಾಗಿರುತ್ತೆ. ಕನ್ನಡ ಭಾಷೆ ಬಗ್ಗೆ ನನಗೆ ಬಹಳ ಗೌರವವಿದೆ. ನಡೆಯುವವರು ಎಡವುವನಲ್ಲದೆ ಬೆಡ್ ಮೇಲೆ ಇರೋನು ಎಡವುತ್ತಾನೆಯೇ ಎಂದು ಪ್ರಶ್ನಿಸಿದರು. ಇದೇ ವೇಳೆ ಎಸ್‌ಸಿ ಎಸ್‌ಟಿ ಸಮಾವೇಶ ಕುರಿತು ಪ್ರಸ್ತಾಪಿಸಿದ ಸಚಿವರು ಸಮಾವೇಶ ಮಾಡಲು ನಮ್ಮಲ್ಲೇನು ಸಮಸ್ಯೆ ಇಲ್ಲ. ಹೈಕಮಾಂಡ್ ಬೇಡ ಅಂತ ಹೇಳಿಲ್ಲ. ನಾವು ಎಲ್ಲರೂ ಕೂತು ಮಾತನಾಡುತ್ತೇವೆ ಎಂದರು.