ನೂರಲ್ಲ, ದಿನಕ್ಕೆ ಸಾವಿರ ಸಲ ಅಂಬೇಡ್ಕರ್ ಜಪ ಮಾಡುತ್ತೇನೆ; ಸಿಟಿ ರವಿ, ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ!
ಸಿಟಿ ರವಿ ಬಿಡುಗಡೆಯನ್ನು ಸರ್ಕಾರಕ್ಕೆ ಆದ ಮುಖಭಂಗ ಎಂದು ಬಿಂಬಿಸುವುದು ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬಿಜೆಪಿ ನಾಯಕರು ಸದನದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರೂ ತಪ್ಪೊಪ್ಪಿಕೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ. ಅಲ್ಲದೆ, ಅಮಿತ್ ಶಾ ಅವರ ಅಂಬೇಡ್ಕರ್ ವಿರೋಧಿ ಹೇಳಿಕೆಗಳನ್ನು ಖಂಡಿಸಿದ್ದಾರೆ.
ಕಲಬುರಗಿ (ಡಿ.21): ಸಿಟಿ ರವಿ ಬಿಡುಗಡೆ ವಿಚಾರ ಹೈಕೋರ್ಟ್‌ನಲ್ಲಿ ಸರ್ಕಾರಕ್ಕಾದ ಮುಖಭಂಗ ಅಲ್ಲ. ಆ ಕೇಸ್ ಬೇಲೆಬಲ್ ಇದೆ ಹಾಗಾಗಿ ಜಾಮೀನು ಸಿಕ್ಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಿಟಿ ರವಿ ಬಿಡುಗಡೆ ವಿಚಾರವಾಗಿ ಇಂದು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಿಟಿ ರವಿ ಬಿಡುಗಡೆ ಆಗಿರೋದನ್ನೇ ಅವರು ಸತ್ಯಕ್ಕೆ ಜಯ.. ಹಾಗೆ ಹೀಗೆ ಅಂತ ಎದೆ ತಟ್ಟಿಕೊಂಡು ಮಾತನಾಡುತ್ತಿದ್ದಾರೆ ಅಂದ್ರೆ ಅವರಿಗೆ ನಾಚಿಕೆ ಬರಬೇಕು. ಅವರು ವಿಧಾನ ಸಭೆಯಲ್ಲಿ ಒಬ್ಬ ಹೆಣ್ಣಿನ ಬಗ್ಗೆ ಅಷ್ಟು ಕೆಟ್ಟದಾಗಿ ಮಾತನಾಡಿದ್ದಾರೆ. ಆದ್ರೆ ಅದಾದ ನಂತರವೂ ಇವರು ತಪ್ಪಾಯ್ತು ಅನ್ನುತ್ತಿಲ್ಲ. ಬದಲಾಗಿ ನಾನು ಹಾಗೆ ಹೇಳೇ ಇಲ್ಲ ಅಂತ ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದ್ದಾರೆ. ಅವರು ಹಾಗೆ ಹೇಳಿದ್ದು ಮಾಧ್ಯಮಗಳಲ್ಲೂ ಬಂದಿದೆ. ಆದರೂ ಒಪ್ಪಿಕೊಳ್ಳುತ್ತಿಲ್ಲ ಅಂದರೆ ಎಷ್ಟು ದುರಹಂಕಾರ ಇರಬೇಕು ಇವರಿಗೆ? ಎಂದು ಕಿಡಿಕಾರಿದರು.
ಬಿಜೆಪಿಯವರು ಮನೆ ಬೆಳಗುವ ಕೆಲಸ ಮಾಡಿದ್ದಾರಾ?
ಆರೆಸ್ಸೆಸ್ ಶಾಖಾ ಟ್ರೈನಿಂಗ್‌ನಲ್ಲಿ ಕಲಿತಿದ್ದನ್ನು ಅವರು ಸದನದಲ್ಲಿ ಪ್ರದರ್ಶನ ಮಾಡಿದ್ದಾರೆ. ಎಫ್‌ಎಸ್‌ಎಲ್ ವರದಿ ಬರಲಿ ಇವತ್ತಲ್ಲ ನಾಳೆ ಬಂದೇ ಬರುತ್ತಲ್ಲ. ಆಗಲಾದರೂ ಸತ್ಯ ಒಪ್ಪಿಕೊಳ್ಳಬೇಕಲ್ಲ? ಸುಳ್ಳನ್ನು ಸತ್ಯ ಹೇಗೆ ಮಾಡುವುದು ಎನ್ನುವುದು ಅವರಿಂದ ಕಲಿಯಬೇಕಾಗಿದೆ. ನಮ್ಮಿಂದ ಅವರು ಕಲಿಯಬೇಕಿರುವುದು ಪ್ರಗತಿಪರ ರಾಜಕೀಯ ಮಾಡುವುದು ಹೇಗೆ ಎಂಬುದನ್ನ. ಸಿಟಿ ರವಿ ಸೇರಿದಂತೆ ಬಿಜೆಪಿ ನಾಯಕರು ಯಾವತ್ತಾದರೂ ಮನೆ ಬೆಳಗುವ ಕೆಲಸ ಮಾಡಿದ್ದಾರಾ ಬಿಜೆಪಿಯವರು ಕೇವಲ ಬೆಂಕಿ ಹಚ್ಚುವ ಕೆಲಸ ಮಾತ್ರ ಮಾಡೋದು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಹಾಳು ಬುದ್ಧಿಯವರು:
ಈ ಘಟನೆಯಿಂದ ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ರೀತಿ ಪದ ಬಳಕೆಯಿಂದ ಬಿಜೆಪಿಯವರು ಒಗ್ಗಟ್ಟಾಗಿದ್ದಾರೆ ಎಂದರೆ ಅವರೆಲ್ಲರೂ ಹಾಳು ಬುದ್ಧಿಯವರೇ ಎನ್ನುವುದು ಗೊತ್ತಾಗುತ್ತೆ. ಬಿಜೆಪಿಯಲ್ಲಿ ಒಬ್ಬರಾದರೂ ಇದು ತಪ್ಪು ಅಂತ ಖಂಡಿಸಿದ್ದಾರಾ? ಈ ವಿಷಯದ ಮೇಲೆ ಬಿಜೆಪಿಯವರು ಒಗ್ಗಟ್ಟಿಯಾಗಿದ್ದಾರೆ ಅಂದರೆ ಅವರೆಲ್ಲರೂ ದುಶ್ಯಾಸನರೇ ಅಲ್ವ? ಏಕೆಂದರೆ ಇವರೆಲ್ಲರೂ ಆರೆಸ್ಸೆಸ್ ಎನ್ನುವ ಒಂದೇ ಶಾಖೆಯಿಂದ ಬಂದವರು. ಯಡಿಯೂರಪ್ಪ ಮಾಡಿದ್ದು, ಮುನಿರತ್ನ ಮಾಡಿದ್ದು, ಈಗ ಸಿಟಿ ರವಿ ಮಾಡಿದ್ದು ತಪ್ಪು ಅಂತ ಅವರಲ್ಲಿ ಒಬ್ಬರಾದ್ರೂ ಹೇಳ್ತಾರಾ? ಯಡಿಯೂರಪ್ಪರನ್ನು ವೇದಿಕೆ ಹತ್ತಿಸಬೇಡಿ ಅಂತ ಹೇಳಿದ್ದು ಯತ್ನಾಳ ಒಬ್ಬರೇ ಎಂದು ಉಳಿದ ಯಾವ ನಾಯಕರು ತಪ್ಪು ಎಂದು ಒಪ್ಪಿಕೊಳ್ಳುತ್ತಿಲ್ಲ. ಎಲ್ಲರ ಮನಸ್ಥಿತಿ ಒಂದೇ ಆಗಿದೆ ಎಂದು ಕಿಡಿಕಾರಿದರು.
ಅಮಿತ್ ಶಾ ಗೆ ಹುಚ್ಚು ನಾಯಿ ಕಡಿದಿದೆ:
ಇನ್ನು ಅಂಬೇಡ್ಕರ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಅಮಿತ್ ಶಾಗೆ ಹುಚ್ಚು ನಾಯಿ ಕಡಿದಿದೆ. ಅದಕ್ಕಾಗಿ ಅಂಬೇಡ್ಕರ ಕುರಿತು ತುಚ್ಛವಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಟಿ ರವಿಗೆ 41ಎ ಅಡಿಯಲ್ಲಿ ನೋಟಿಸ್ ಕೊಡಬೇಕಿತ್ತು, ಬಂಧನ ಪ್ರಶ್ನಿಸಿದ ಹೈಕೋರ್ಟ್!
ದೇವರ ಹೆಸರು ಸಾವಿರ ಸಲ ಜಪ ಮಾಡಿದ್ರೆ ಏಳು ಜನ್ಮದಲ್ಲಿ ಸ್ವರ್ಗ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅಂಬೇಡ್ಕರ್ ಹೆಸರು ಜಪ ಮಾಡಿದ್ರೆ ಈ ಜನ್ಮದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಬದುಕು ಸಿಗುತ್ತೆ. ನಾನು ನೂರು ಸಲ ಅಲ್ಲ, ದಿನಕ್ಕೆ ಸಾವಿರ ಸಲ ಅಂಬೇಡ್ಕರ್ ಜಪ ಮಾಡುತ್ತೇನೆ. ಇವರು(ಬಿಜೆಪಿ) ಅಂಬೇಡ್ಕರ್ ತತ್ವ ವಿರೋಧಿಗಳು. ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ , ಬಸವ ತತ್ವ ಹೆಚ್ಚಾದಂತೆ RSS ತತ್ವ ಕುಸಿತ ಆಗುತ್ತೆ. ಹೀಗಾಗಿ ಅವರಿಗೆ ಅಸೂಯೆ, ದ್ವೇಷ ಹೆಚ್ಚಾfಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.