ಬೆಳಗಾವಿಯಲ್ಲಿ ನಡೆದ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ದೇಶದ ಸಂವಿಧಾನ ಮತ್ತು ರಾಷ್ಟ್ರಧ್ವಜದ ಬಗ್ಗೆ ಗೌರವಿಸುವುದಿಲ್ಲ, ಕೇವಲ ತೋರಿಕೆಗೆ ದೇಶಭಕ್ತಿಯ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಬೆಳಗಾವಿ (ಜುಲೈ.27): ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯ ಬೈಲಹೊಂಗಲದಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಜ್ಞಾ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಸಂಘಟನೆಯು ದೇಶದ ಸಂವಿಧಾನ ಮತ್ತು ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲದೆ, ಕೇವಲ ತೋರಿಕೆಗೆ ದೇಶಭಕ್ತಿಯ ಮಾತುಗಳನ್ನಾಡುತ್ತದೆ ಎಂದು ಆರೋಪಿಸಿದ್ದಾರೆ.

RSS ಇತ್ತೀಚೆಗೆ ರಾಷ್ಟ್ರಧ್ವಜ ಹಾರಿಸಿದೆ:

ಸಮಾವೇಶದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಆರ್‌ಎಸ್‌ಎಸ್‌ನ ನಾಗಪುರದ ಕಚೇರಿಯಲ್ಲಿ ಇತ್ತೀಚಿಗೆ ಭಾರತದ ಧ್ವಜವನ್ನು ಹಾರಿಸಲಾಗಿದೆ. ಆದರೆ, ಐವತ್ತು ವರ್ಷಗಳ ಕಾಲ ಭಾರತದ ರಾಷ್ಟ್ರಧ್ವಜವನ್ನೂ ಇಲ್ಲಿ ಹಾರಿಸಿರಲಿಲ್ಲ. ಇವರಿಗೆ ಸಂವಿಧಾನದ ಮೇಲೆ ವಿಶ್ವಾಸವಿಲ್ಲ, ದೇಶದ ಧ್ವಜದ ಬಗ್ಗೆ ಗೌರವವಿಲ್ಲ. ಕೇವಲ ತೋರಿಕೆಗೆ ದೇಶಭಕ್ತಿಯ ಮಾತುಗಳನ್ನಾಡುತ್ತಾರೆ ಎಂದು ತೀಕ್ಷ್ಣವಾಗಿ ಟೀಕಿಸಿದರು.

ಆರೆಸ್ಸೆಸ್ ಯುವಕರ ಮನಸು ಕೆಡಿಸುತ್ತಿದೆ:

ಆರ್‌ಎಸ್‌ಎಸ್ ಸಂಘಟನೆಯು ಯುವಕರ ಮನಸ್ಸಿನಲ್ಲಿ ತಪ್ಪು ಭಾವನೆಗಳನ್ನು ಮೂಡಿಸುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು, ವಾಟ್ಸ್‌ಆಪ್ ಯೂನಿವರ್ಸಿಟಿ ಮತ್ತು ಫೇಸ್‌ಬುಕ್ ಯೂನಿವರ್ಸಿಟಿಯಿಂದ ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಇದರಿಂದ ಯುವಕರ ಮನಸ್ಸನ್ನು ಕೆಡಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯವರ ಕಷ್ಟ, ತ್ಯಾಗ ಯುವಕರಿಗೆ ಮಾದರಿ:

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಕೊಂಡಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ರಾಹುಲ್ ಗಾಂಧಿಯವರು ದೇಶದಾದ್ಯಂತ ಭಾರತ್ ಜೋಡೋ ಯಾತ್ರೆಯ ಮೂಲಕ ಒಗ್ಗಟ್ಟಿನ ಸಂದೇಶವನ್ನು ಸಾರಿದ್ದಾರೆ. ಅವರ ಕಷ್ಟ, ತ್ಯಾಗ ಮತ್ತು ಸಮರ್ಪಣೆ ಯುವಕರಿಗೆ ಮಾದರಿಯಾಗಬೇಕು. ಪ್ರಧಾನಿಯ ಮಗ, ಮೊಮ್ಮಗನಾಗಿದ್ದರೂ ಅವರು ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ದೇಶಕ್ಕಾಗಿ ನೆಹರು ಆಸ್ತಿ ಮಾರಿದರು:

ಗಾಂಧಿ-ನೆಹರು ಕುಟುಂಬದ ಕೊಡುಗೆಗಾಂಧಿ-ನೆಹರು ಕುಟುಂಬದ ಕೊಡುಗೆ ಬಗ್ಗೆ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜವಾಹರಲಾಲ್ ನೆಹರು 9 ವರ್ಷ ಜೈಲಿನಲ್ಲಿ ಕಳೆದರು. ತಮ್ಮ ಆಸ್ತಿಯನ್ನು ಮಾರಾಟ ಮಾಡಿ ದೇಶಕ್ಕಾಗಿ ಕೊಟ್ಟರು. ಆದರೆ, ಆರ್‌ಎಸ್‌ಎಸ್‌ನಂತಹ ಸಂಘಟನೆಗಳು ಗಾಂಧಿ ಕುಟುಂಬದ ಬಗ್ಗೆ ತಪ್ಪು ಭಾವನೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿವೆ. ರಾಹುಲ್ ಗಾಂಧಿಯವರು ತಮ್ಮ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿಯವರ ಹೆಜ್ಜೆಯನ್ನು ಅನುಸರಿಸಿ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ, ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ:

ನಾವು ದೇಶದ ಒಗ್ಗಟ್ಟು ಮತ್ತು ಸಂವಿಧಾನದ ರಕ್ಷಣೆಗಾಗಿ ಕೆಲಸ ಮಾಡಬೇಕು. ಆರ್‌ಎಸ್‌ಎಸ್‌ನಂತಹ ಸಂಘಟನೆಗಳು ದೇಶದ ಯುವಕರನ್ನು ದಾರಿತಪ್ಪಿಸುವ ಯತ್ನ ಮಾಡುತ್ತಿವೆ. ಆದರೆ, ಕಾಂಗ್ರೆಸ್‌ನ ಯುವಕರು ರಾಹುಲ್ ಗಾಂಧಿಯವರ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು ಸತ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಬೈಲಹೊಂಗಲದ ಯುವ ಕಾಂಗ್ರೆಸ್ ಪ್ರತಿಜ್ಞಾ ಸಮಾವೇಶವು ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರನ್ನು ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ದೇಶದ ಒಗ್ಗಟ್ಟಿನ ಸಂಕೇತವಾಗಿ ಕೊಂಡಾಡಿದರು.