ಬಾಹ್ಯಾಕಾಶ ಯಾನಕ್ಕೆ ದಲಿತರ ಆಯ್ಕೆ ವಿವಾದದ ನಂತರ, ಕಾಂಗ್ರೆಸ್ ನಾಯಕ ಉದಿತ್ ರಾಜ್ ರಾಹುಲ್ ಗಾಂಧಿಯವರನ್ನು 'ಎರಡನೇ ಅಂಬೇಡ್ಕರ್' ಎಂದು ಬಣ್ಣಿಸಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನವದೆಹಲಿ (ಜುಲೈ.27): ಬಾಹ್ಯಾಕಾಶಕ್ಕೆ ಮೇಲ್ವರ್ಗದ ಶುಭಾಂಶು ಶುಕ್ಲಾ ಅವರ ಬದಲಿಗೆ ದಲಿತರನ್ನು ಕಳಿಸಬೇಕಿತ್ತು ಎಂದು ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕ ಉದಿತ್ ರಾಜ್ ಈಗ ರಾಹುಲ್ ಗಾಂಧಿ ಅವರು ಎರಡನೇ ಅಂಬೇಡ್ಕರ್ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಉದಿತ್, ‘ಒಬಿಸಿಗಳೇ ಕಾಲ ಕಳೆದುಹೋಗುವ ಮುನ್ನ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ. ಅವರು 2ನೇ ಅಂಬೇಡ್ಕರ್. ಅವರು ನಿಮ್ಮನ್ನು ಉದ್ಧಾರ ಮಾಡಲಿದ್ದಾರೆ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ನಿಜವಾದ ಅಂಬೇಡ್ಕರ್ ಅವರನ್ನು ಗೌರವಿಸಿದ ಕಾಂಗ್ರೆಸ್ ಈಗ 2ನೇ ಅಂಬೇಡ್ಕರ್ ಆಗಿ ರಾಹುಲ್ ಗಾಂಧಿ ಅವರನ್ನು ಪ್ರತಿಬಿಂಬಿಸುತ್ತಿದೆ. ಇದು ದಲಿತರಿಗೆ, ಸಂವಿಧಾನಕ್ಕೆ ಮಾಡಿದ ಅವಮಾನ’ ಎಂದಿದ್ದಾರೆ.
ಶನಿವಾರ 'X' ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್, ಇತಿಹಾಸವು ಪ್ರಗತಿಗೆ ಮತ್ತೆ ಮತ್ತೆ ಅವಕಾಶಗಳನ್ನು ನೀಡುವುದಿಲ್ಲ ಎಂದು ಒಬಿಸಿಗಳು (ಇತರ ಹಿಂದುಳಿದ ವರ್ಗಗಳು) ಯೋಚಿಸಬೇಕಾಗುತ್ತದೆ. ಟಾಲ್ಕಟೋರಾ ಕ್ರೀಡಾಂಗಣದ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಹೇಳಿದ್ದನ್ನು ಅವರು ಅನುಸರಿಸಬೇಕು ಮತ್ತು ಬೆಂಬಲಿಸಬೇಕು. ಅವರು ಹಾಗೆ ಮಾಡಿದರೆ, ರಾಹುಲ್ ಗಾಂಧಿ ಅವರಿಗೆ ಎರಡನೇ ಅಂಬೇಡ್ಕರ್ ಎಂದು ಸಾಬೀತುಪಡಿಸುತ್ತಾರೆ ಎಂದು ಬರೆದಿದ್ದಾರೆ.
ಶುಕ್ರವಾರ, ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಜಾತಿ ಜನಗಣತಿ ನಡೆಸದಿರುವುದು ನಮ್ಮ ತಪ್ಪು ಮತ್ತು ಅದನ್ನು ಸರಿಪಡಿಸಲು ತಾನು ದೃಢನಿಶ್ಚಯ ಮಾಡಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಉದಿತ್ ರಾಜ್ ಹೇಳಿಕೆಗೆ ಬಿಜೆಪಿ ಕಿಡಿ:
ಉದಿತ್ ರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ್ಲಾ, ಮೂಲ ಅಂಬೇಡ್ಕರ್ ಅವರನ್ನು ಎಂದಿಗೂ ಗೌರವಿಸದ ಕಾಂಗ್ರೆಸ್ ಎರಡನೇ ಬಿಆರ್ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.
ದಲಿತರು ಮತ್ತು ಬಿ.ಆರ್. ಅಂಬೇಡ್ಕರ್ ಕಾಂಗ್ರೆಸ್ ಮೊದಲಿನಿಂದಲೂ ಅವಮಾನಿಸುತ್ತ ಬಂದಿದೆ. ಅಂಬೇಡ್ಕರ್ ಬದುಕಿದ್ದಾಗಲೂ, ಮೃತಪಟ್ಟಾಗಲೂ ಅವರನ್ನು ಅವಮಾನಿಸಿದವರು ಯಾರು? ಅವರಿಗೆ ಭಾರತ ರತ್ನವನ್ನು ಯಾರು ನೀಡಲಿಲ್ಲ? ಜಮ್ಮು ಮತ್ತು ಕಾಶ್ಮೀರದಲ್ಲಿ ಅವರ ಸಂವಿಧಾನವನ್ನು ಜಾರಿಗೆ ತರಲು ಯಾರು ಬಿಡಲಿಲ್ಲ? ಮುಸ್ಲಿಂ ಮೀಸಲಾತಿ ಬಗ್ಗೆ ಯಾರು ಮಾತನಾಡಿದರು? ಮೀಸಲಾತಿ ಕೆಟ್ಟದು ಎಂದು ಯಾರು ಹೇಳಿದರು? ಜವಾಹರಲಾಲ್ ನೆಹರು, ಎಂದು ಶ್ರೀ ಪೂನವಾಲಾ ತಿರುಗೇಟು ನೀಡಿದ್ದಾರೆ.
ಈಗ ಅವರು ನೆಹರೂ ಅಥವಾ ಇಂದಿರಾ ಗಾಂಧಿ ಅಲ್ಲ, ಎರಡನೇ ಅಂಬೇಡ್ಕರ್ ಆಗಲು ಬಯಸುತ್ತಿದ್ದಾರೆಯೇ? ಇದರರ್ಥ ಗಾಂಧಿ ಕುಟುಂಬವು ನೆಹರೂ ಮತ್ತು ಇಂದಿರಾ ಗಾಂಧಿ ತಪ್ಪು ಹಾದಿಯಲ್ಲಿದ್ದರು ಎಂದು ಒಪ್ಪಿಕೊಳ್ಳುತ್ತಿದೆ. ಕಾಂಗ್ರೆಸ್ ಒಂದೇ ಕುಟುಂಬವನ್ನು ಪೂಜಿಸುವುದರಲ್ಲಿ ಮಾತ್ರ ನಂಬಿಕೆ ಇಡುತ್ತದೆ ಎಂದು ಟೀಕಿಸಿದ್ದಾರೆ.
