ಭಾರತ ಸರ್ಕಾರದ ಮಾಧ್ಯಮ ಪ್ರವಾಸದ ಭಾಗವಾಗಿ ಕರ್ನಾಟಕ ಮಾಧ್ಯಮ ತಂಡವು ಈಶಾನ್ಯದ ಪ್ರತಿಷ್ಠಿತ ಅರೆಸೇನಾ ಪಡೆಯಾದ ಅಸ್ಸಾಂ ರೈಫಲ್ಸ್‌ಗೆ ಭೇಟಿ ನೀಡಿತು. 1835ರಲ್ಲಿ ಸ್ಥಾಪನೆಯಾದ ಈ ಪಡೆಯು ಈಶಾನ್ಯ ರಾಜ್ಯಗಳ ರಕ್ಷಣೆ, ಭಾರತ-ಮಯನ್ಮಾರ್ ಗಡಿ ಕಾವಲು ಸ್ಥಳೀಯ ಸಮುದಾಯಗಳ ಅಭಿವೃದ್ಧಿ ಮಹತ್ವದ ಪಾತ್ರ ವಹಿಸುತ್ತಿದೆ.

ಬೆಂಗಳೂರು (ಫೆ.5): ಭಾರತ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆಯು ಮೇಘಾಲಯಕ್ಕೆ ಆಯೋಜಿಸಿದ್ದ ಮಾಧ್ಯಮ ಪ್ರವಾಸದ ಭಾಗವಾಗಿ, ಕರ್ನಾಟಕ ಮಾಧ್ಯಮ ತಂಡವು ಇಂದು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಅರೆಸೇನಾ ಪಡೆಯಾದ ಅಸ್ಸಾಂ ರೈಫಲ್ಸ್ ಗೆ ಭೇಟಿ ನೀಡಿತು. ಅಸ್ಸಾಂ ರೈಫಲ್ಸ್ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಶಾನ್ಯದ ಏಳು ರಾಜ್ಯಗಳನ್ನು ಬೆಸೆಯುವಲ್ಲಿ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಸಂದೀಪ್ ಚಟರ್ಜಿ ಅವರು ಮಾಧ್ಯಮ ತಂಡಕ್ಕೆ ಅಸ್ಸಾಂ ರೈಫಲ್ಸ್ ಕಾರ್ಯ ವೈಖರಿಯ ಕುರಿತು ಮಾಹಿತಿ ನೀಡಿದರು.

ಎರಡು ಮಹಾಯುದ್ಧಗಳಲ್ಲಿ ಭಾಗಿಯಾಗಿ ಅಸ್ಸಾಂ ರೈಫಲ್ಸ್!

ಅಸ್ಸಾಂ ರೈಫಲ್ಸ್ , ಈಶಾನ್ಯ ರಾಜ್ಯಗಳ ರಕ್ಷಣೆ ಮತ್ತು ಸಾಮರಸ್ಯದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, 1835ರಲ್ಲಿ ಸ್ಥಾಪನೆಯಾದ ಈ ಪಡೆಯು ತನ್ನ ಸುದೀರ್ಘ ಇತಿಹಾಸದಲ್ಲಿ ದೇಶದ ಭದ್ರತೆಗೆ ಮೌಲ್ಯಯುತ ಕೊಡುಗೆ ನೀಡುತ್ತಾ ಬಂದಿದೆ. ಅಸ್ಸಾಂ ರೈಫಲ್ಸ್ ಮೊದಲನೇ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಗ್ಗಳಿಕೆ ಹೊಂದಿದೆ. ಅಷ್ಟೇ ಅಲ್ಲದೆ, ಸ್ವಾತಂತ್ರ್ಯಾ ನಂತರದ 1962ರ ಚೀನಾ ಯುದ್ಧ, 1965 ಮತ್ತು 1971ರ ಪಾಕಿಸ್ತಾನದ ವಿರುದ್ಧದ ಯುದ್ಧಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಗಡಿಗಳನ್ನು ರಕ್ಷಿಸಿದ ಹೆಗ್ಗಳಿಕೆ ಹೊಂದಿದೆ.

ಸುಮಾರು 66,000 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಂದಿರುವ ಅಸ್ಸಾಂ ರೈಫಲ್ಸ್ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪಿಸುವುದು, ಆಂತರಿಕ ದಂಗೆಗಳನ್ನು ದಮನ ಮಾಡುವುದು ಮತ್ತು ಕಳ್ಳ ಸಾಗಾಣಿಕೆಯಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತಿದೆ. 2015 ರಿಂದ ಮಹಿಳೆಯರು ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತ ಮತ್ತು ಮಯನ್ಮಾರ್ ಗಡಿಯ ವ್ಯಾಪ್ತಿಯಲ್ಲಿ ಅಸ್ಸಾಂ ರೈಫಲ್ಸ್ ಕಾರ್ಯನಿರ್ವಹಿಸುತ್ತಿದೆ. ಇದು ಈ ಗಡಿ ಭಾಗದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಸ್ಥಾಪಿಸಲು ಕಾರಣವಾಗಿದೆ. ಗಡಿ ಭಾಗದ ಜನರ ಸಾಂಸ್ಕೃತಿಕ ಸಂಬಂಧಗಳನ್ನು ಗೌರವಿಸುತ್ತಾ, ಭದ್ರತೆಯ ದೃಷ್ಟಿಯಿಂದ ಈಗ ಪಾರದರ್ಶಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಯನ್ಮಾರ್ ನಿಂದ ಬರುವವರಿಗೆ 10 ಕಿ.ಮೀ. ವ್ಯಾಪ್ತಿಯಲ್ಲಿ ಭೇಟಿ ನೀಡಲು ಅವಕಾಶವಿದ್ದು, ಅವರ ಮೇಲೆ ಸೂಕ್ತ ನಿಗಾ ವಹಿಸಲಾಗುತ್ತಿದೆ. ಇದರಲ್ಲಿ ‌ಪಾರದರ್ಶಕ ಕ್ರಮಗಳನ್ನು ಕೈಗೊಳ್ಳಾಗಿದೆ ಎಂದು ಬಿಗ್ರೇಡಿಯರ್ ಸಂದೀಪ್ ಚಟರ್ಜಿ ವಿವರಿಸಿದರು.

ರಕ್ಷಣೆ ಮತ್ತು ಬುಡಕಟ್ಟು ಸಮುದಾಯಗಳ ಏಳಿಗೆಗೆ ಅಸ್ಸಾಂ ರೈಫಲ್ಸ್ ಶ್ರಮ

ಕೇವಲ ರಕ್ಷಣೆಗೆ, ಆಂತರಿಕ ದಂಗೆಯ ದಮನಕ್ಕೆ ಮಾತ್ರ ಸೀಮಿತವಾಗದ ಈ ಪಡೆಯು, ಗಡಿ ಭಾಗದ ಬುಡಕಟ್ಟು ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದೆ. ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೆರವಾಗುವುದು, ಆರೋಗ್ಯ ಸೇವೆ ಒದಗಿಸುವುದು ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದು ಅಸ್ಸಾಂ ರೈಫಲ್ಸ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ವಿಕಾಸ್ ಅವರು ಹೇಳಿದರು.

ಈ ಸಂದರ್ಭದಲ್ಲಿ ಪಿಐಬಿ ಶಿಲ್ಲಾಂಗ್ ನ ಸಹಾಯಕ ನಿರ್ದೇಶಕರಾದ ಶ್ರೀ ಗೋಪಾಜಿತ್ ದಾಸ್ ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕರಾದ ಎಂ ಮಧು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.