ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರು 33 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿ ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ’ ಎಂಬ ವಿಶೇಷ ಕಾರ್ಯಕ್ರಮ  ಆಯೋಜಿಸಿದ್ದಾರೆ.

ವರದಿ: ಮಮತಾ ಮರ್ದಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಧರ್ಮಸ್ಥಳ:(ಜ.30): ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ ಅವರಿಗೆ ನಿವೃತ್ತಿಯ ಸಮಯ. ಕಳೆದ 33 ವರ್ಷಗಳ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆ, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿ ಬಳಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ 31ರದು ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ’ ಎಂಬ ವಿಶೇಷ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಭಾಸ್ಕರ ಪರ್ವ

ಸಾವಿರಾರು ವಿದ್ಯಾರ್ಥಿಗಳ ಬದುಕು ಬೆಳಗಿದವರು ಡಾ ಭಾಸ್ಕರ ಹೆಗ್ಡೆ. ಸುಮಾರು ಮೂರೂವರೆ ದಶಕದಿಂದ ಪತ್ರಿಕೋದ್ಯಮ ಪಾಠ ಹೇಳ್ತಿರುವ ಪ್ರಾಧ್ಯಾಪಕರಿಗೆ ಈಗ ನಿವೃತ್ತಿಯ ಪರ್ವ. ಡಾ ಭಾಸ್ಕರ್ ಹೆಗ್ಡೆ ಕೇವಲ ಪಾಠ ಮಾಡಿಲ್ಲ ಪಾಠದ ಜೊತೆಗೆ ಪತ್ರಿಕೋದ್ಯಮದ ಸವಾಲುಗಳ ಬಗ್ಗೆಯೂ ಪುಸ್ತಕಕ್ಕಿಂತ ಹೆಚ್ಚು ಪ್ರ್ಯಾಕ್ಟಿಕಲ್ ಆಗಿ ಹೇಳಿ ತಿದ್ದಿ ತೀಡಿದವರು. ಜೀವನಕ್ಕೆ ದಾರಿದೀಪವಾದ ಗುರುಗಳನ್ನು ಸ್ಮರಿಸಲು ಈಗ ಹಿರಿಯ ಕಿರಿಯ ವಿದ್ಯಾರ್ಥಿಗಳು ಮುಂದಾಗಿದ್ದು ಶನಿವಾರ ಜನವರಿ 31 ರಂದು ಭಾಸ್ಕರ ಪರ್ವ ಕಾರ್ಯಕ್ರಮ ಆಯೋಜಿಸಿದ್ದು ಸಾವಿರಾರು ಸಂಖ್ಯೆಯಲ್ಲಿ ನೆಚ್ಚಿನ ಗುರುಗಳ ಜೊತೆ ಭಾಗಿಯಾಗಲಿದ್ದಾರೆ.

ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾರ್ಯಕ್ರಮ

ಶನಿವಾರ ಬೆಳಗ್ಗೆ 10 ಗಂಟೆಗೆ ಉಜಿರೆಯ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದ ಉದ್ಘಾಟನೆ ಹಾಗೂ ಅಭಿನಂದನಾ ಗ್ರಂಥದ ಬಿಡುಗಡೆಯನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ ಚಂದ್ರ ಎಸ್. ಅವರು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕ್ಷೇಮವನ ಕಾರ್ಯನಿರ್ವಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಸಾಕ್ಷ್ಯ ಚಿತ್ರದ ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ .ಪಿ ಅವರು ವಹಿಸಲಿದ್ದು, ಸಮಾರಂಭದಲ್ಲಿ ಉಜಿರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ ಅವರು ಉಪಸ್ಥಿತರಿರುವರು. ಜೊತೆಗೆ ಭಾಸ್ಕರ ಪರ್ವ ಅಪರೂಪದ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.