Asianet Suvarna News Asianet Suvarna News

11 ಭೂಮಾಪನ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಭೂಮಾಪನ ಇಲಾಖೆಯ ಕಚೇರಿಗಳಲ್ಲಿ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 11 ಭೂಮಾಪನ ಕಚೇರಿಗಳ ಮೇಲೆ ಸೋಮವಾರ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

Karnataka Lokayukta raids on 11 land survey offices at bengaluru rav
Author
First Published Nov 21, 2023, 7:02 AM IST

ಬೆಂಗಳೂರು (ನ.21) :  ಭೂಮಾಪನ ಇಲಾಖೆಯ ಕಚೇರಿಗಳಲ್ಲಿ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 11 ಭೂಮಾಪನ ಕಚೇರಿಗಳ ಮೇಲೆ ಸೋಮವಾರ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರ ಆದೇಶದ ಮೇರೆಗೆ ಲೋಕಾಯುಕ್ತ ಸಂಸ್ಥೆಯ ನ್ಯಾಯಾಂಗ ಮತ್ತು ಪೊಲೀಸ್ ವಿಭಾಗಗಳ ಅಧಿಕಾರಿಗಳ ತಂಡ ಎರಡೂ ಜಿಲ್ಲೆಗಳ ವ್ಯಾಪ್ತಿಯ 11 ಭೂಮಾಪನ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಭೂಮಾಪನ, ದುರಸ್ತಿ, ನಕ್ಷೆ ಸೇರಿದಂತೆ ಇತರೆ ಅರ್ಜಿಗಳ ವಿಲೇವಾರಿ, ಭ್ರಷ್ಟಾಚಾರ, ಅಧಿಕಾರಿ ದುರುಪಯೋಗ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಶೋಧಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು: ಕಾರಣವೇನು?

ಖುದ್ದು ಫೀಲ್ಡ್‌ಗೆ ಇಳಿದ ಲೋಕಾಯುಕ್ತರು:

ಈ ನಡುವೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಸೋಮವಾರ ಸಂಜೆ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ಉತ್ತ ಮತ್ತು ದಕ್ಷಿಣ ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿ (ಡಿಡಿಎಲ್‌ಆರ್‌) ಹಾಗೂ ಕೆ.ಆರ್‌.ಪುರ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ (ಎಡಿಎಲ್‌ಆರ್‌)ಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಬಾಕ್ಸ್...

ಕಚೇರಿ ವ್ಯವಸ್ಥೆ ಸರಿಯಿಲ್ಲ: ನ್ಯಾ.ಪಾಟೀಲ್‌

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌, ನಗರದ ಎಲ್ಲಾ ಭೂ ದಾಖಲೆಗಳ ಸಹಾಯ ನಿರ್ದೇಶಕರ ಕಚೇರಿ(ಎಡಿಎಲ್‌ಆರ್‌)ಗಳಿಗೆ ದಿಢೀರ್‌ ಭೇಟಿ ನೀಡಲಾಗುತ್ತಿದೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದಿದ್ದೇವೆ. ಸಾರ್ವಜನಿಕರ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಿದ್ದಾರೆ. ನಿಜವಾಗಲೂ ಸಮಸ್ಯೆ ಇದ್ದಲ್ಲಿ ಅರ್ಜಿ ತಿರಸ್ಕರಿಸಬಹುದು. ಈ ಕಚೇರಿಗಳಲ್ಲಿ ರಿಜಿಸ್ಟರ್‌ ಸಹ ಸರಿಯಾಗಿ ಇಲ್ಲ. ನಗರಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತೇವೆ ಎಂದರು.

ಕಚೇರಿ ನಿರ್ವಹಣೆ ಬಗ್ಗೆ ಅಸಮಾಧಾನ:

ಇಲ್ಲಿನ ಕಚೇರಿಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಕಚೇರಿಯಲ್ಲಿ ಸರಿಯಾಗಿ ಕೆಲಸವಾಗುತ್ತಿಲ್ಲ. ಕಚೇರಿ ಒಳಗೆ ಖಾಸಗಿ ವ್ಯಕ್ತಿ ಜೆರಾಕ್ಸ್‌ ಮಷನ್‌ ಇಟ್ಟಿದ್ದಾರೆ. ಅದಕ್ಕೆ ಅನುಮತಿ ನೀಡಿದವರು ಯಾರು? ಅದಕ್ಕೆ ಮುಖಿಯ ಅನುಮತಿ ನೀಡಿದ್ದಾರೆ. ಆದರೆ, ಇದು ಕಚೇರಿ ನಡೆಸುವ ಸರಿಯಾದ ರೀತಿಯಲ್ಲ. ಶೌಚಾಲಯದ ರೀತಿ ಕಚೇರಿ ನಿರ್ವಹಿಸಿದ್ದಾರೆ. ಪರಿಶೀಲನೆ ಮುಂದುವರೆದಿದ್ದು, ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಎಲ್ಲೆಲ್ಲಿ ಲೋಕಾಯುಕ್ತ ದಾಳಿ?

ದೊಡ್ಡಬಳ್ಳಾಪುರದ ಎಡಿಎಲ್‌ಆರ್‌ ಕಚೇರಿ, ಬೆಂಗಳೂರು ಗ್ರಾಮಾಂತರ ಡಿಡಿಎಲ್‌ಆರ್‌, ದೇವನಹಳ್ಳಿ ಎಡಿಎಲ್‌ಆರ್‌, ಕೆ.ಆರ್‌.ಪುರ ಎಡಿಎಲ್‌ಆರ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ಎಡಿಎಲ್‌ಆರ್‌, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಡಿಡಿಎಲ್‌ಆರ್‌, ನೆಲಮಂಗಲ ಎಡಿಎಲ್‌ಆರ್‌, ಹೊಸಕೋಟೆ ಎಡಿಎಲ್‌ಆರ್‌, ಯಲಹಂಕ, ಆನೇಕಲ್‌ ಎಡಿಎಲ್‌ಆರ್‌ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

 

ಸಿಸಿ ಕ್ಲಿಯರೆನ್ಸ್ ಮಾಡಲು ಹಣಕ್ಕೆ ಬೇಡಿಕೆ ಭ್ರಷ್ಟಾಚಾರದ ಕೂಪವಾಗಿರೋ ಬಳ್ಳಾರಿ ಆರ್‌ಟಿಒ ಕಚೇರಿ!

₹43 ಸಾವಿರ ನಗದು ಪತ್ತೆ

ಕೆ.ಜಿ.ರಸ್ತೆಯ ಕಂದಾಯ ಭವನದಲ್ಲಿರುವ ಭೂಮಾಪನ ಕಚೇರಿಗೆ ಲೋಕಾಯುಕ್ತರು ಭೇಟಿ ನೀಡಿದ್ದ ವೇಳೆ ಸಿಬ್ಬಂದಿಯೊಬ್ಬರ ಬಳಿ 43 ಸಾವಿರ ರು. ನಗದು ಪತ್ತೆಯಾಗಿದೆ. ಈ ಬಗ್ಗೆ ಆತನನ್ನು ವಿಚಾರಣೆ ಮಾಡಿದಾಗ, ಮಕ್ಕಳ ಶಾಲಾ ಶುಲ್ಕ ಪಾವತಿಗೆ ಈ ಹಣ ಇರಿಸಿಕೊಂಡಿದ್ದಾಗಿ ಹೇಳಿದ್ದಾನೆ. ಆಗ ಲೋಕಾಯುಕ್ತರು ಈ ಹಣದ ಬಗ್ಗೆ ಏಕೆ ಕಚೇರಿಯ ರಿಜಿಸ್ಟರ್‌ನಲ್ಲಿ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದಾಗ ಆತ ನಿರುತ್ತರನಾಗಿದ್ದಾನೆ. ಬಳಿಕ ಲೋಕಾಯುಕ್ತ ಅಧಿಕಾರಿಗಳು ಆ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ ಲೋಕಾಯುಕ್ತ ಮೂಲಗಳು ತಿಳಿಸಿವೆ.

Follow Us:
Download App:
  • android
  • ios