ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಹಲವಾರು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಗಳು ಭ್ರಷ್ಟಾಚಾರದ ಆರೋಪಗಳ ತನಿಖೆಯ ಭಾಗವಾಗಿದ್ದು, ಸರ್ಕಾರಿ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.
ಬೆಂಗಳೂರು (ಜೂ.24) ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆಯೇ ಹಲವಾರು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಅರ್ಗ್ಯಾನಿಕ್ ಫಾರ್ಮಿಂಗ್ ಸಹಾಯಕ ಸಂಶೋಧನಾ ನಿರ್ದೇಶಕ ಡಾ. ಎಸ್. ಪ್ರದೀಪ್, ಚಿಕ್ಕಮಗಳೂರು ನಗರಸಭೆಯ ಖಾತೆ ಅಧಿಕಾರಿ ಲತಾಮಣಿ, ಆನೇಕಲ್ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೆ.ಜಿ. ಅಮರನಾಥ್, ಗದಗದ ಪಟ್ಟಣ ಪೊಲೀಸ್ ನಿರೀಕ್ಷಕ ಧ್ರುವರಾಜ್, ಧಾರವಾಡದ ಮಲಪ್ರಭಾ ಯೋಜನೆಯ ಇಂಜಿನಿಯರ್ ಅಶೋಕ್ ವಾಲ್ಸಂದ್, ಕಲಬುರಗಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಭಾಗದ ಮಾಜಿ ಇಂಜಿನಿಯರ್ ಮಲ್ಲಿಕಾರ್ಜುನ ಅಲಿಪುರ, ಹಾಗೂ ಸಣ್ಣೂರು ಗ್ರಾಮ ಪಂಚಾಯಿತಿಯ ಪಿಡಿಒ ರಾಮಚಂದ್ರ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ. ಈ ದಾಳಿಗಳ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರದ ಬಿಬಿಎಂಪಿಯ ಸಹಾಯಕ ಇಂಜಿನಿಯರ್ ಪ್ರಕಾಶ್ ಅವರ ಮೇಲೂ ದಾಳಿ ನಡೆದಿದ್ದು, ರಾಜ್ಯದ ರಾಜಧಾನಿಯಲ್ಲಿಯೂ ಲೋಕಾಯುಕ್ತದ ಕಾರ್ಯಾಚರಣೆ ಗಮನ ಸೆಳೆದಿದೆ.
ಗದಗದಲ್ಲಿ ಲೋಕಾಯುಕ್ತದಿಂದ ಭರ್ಜರಿ ಕಾರ್ಯಾಚರಣೆ: ಗದಗ ಶಹರ ಠಾಣೆಯ ಸಿಪಿಐ ಡಿಬಿ ಪಾಟೀಲ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ತೀವ್ರ ಆಘಾತ ನೀಡಿದ್ದಾರೆ. ಪಾಟೀಲ್ ಅವರ ಗದಗದ ಶಿವಾನಂದ ನಗರದ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಇದರ ಜೊತೆಗೆ, ಅವರ ಬಾಗಲಕೋಟೆ ಮತ್ತು ಮಖಂಡಿಯಲ್ಲಿರುವ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಅಲ್ಲದೆ, ಕೆರೂರಿನಲ್ಲಿರುವ ಅವರ ಮತ್ತೊಂದು ನಿವಾಸದ ಮೇಲೂ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಈ ಕಾರ್ಯಾಚರಣೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಭ್ರಷ್ಟಾಚಾರದ ಆರೋಪಗಳ ಮೇಲೆ ನಡೆಯುತ್ತಿರುವ ತನಿಖೆಯ ಭಾಗವಾಗಿದ್ದು, ಲೋಕಾಯುಕ್ತದ ಈ ಕ್ರಮಗಳು ಸರ್ಕಾರಿ ಅಧಿಕಾರಿಗಳಲ್ಲಿ ನುಡುಕು ಹುಟ್ಟಿಸಿದೆ.
