ಮೈಸೂರಿನಲ್ಲಿ ಚೆಸ್ಕಾಂನ ಎಇಇ ದೀಪಕ್ 3 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅನಧಿಕೃತ ವಿದ್ಯುತ್ ಸಂಪರ್ಕ ದಂಡ ಕಡಿಮೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮೈಸೂರು (ಜೂ.18): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ)ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎ.ಇ.ಇ.) ಹಾಗೂ ವಿಜಿಲೆನ್ಸ್ ಅಧಿಕಾರಿ ದೀಪಕ್, 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಮೈಸೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಲಂಚ ಪಡೆಯುವಾಗ ಈ ಕಾರ್ಯಾಚರಣೆ ನಡೆದಿದ್ದು, ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಮ್ಯಾಥ್ಯು ಥಾಮಸ್ ಮತ್ತು ಇನ್ಸ್‌ಪೆಕ್ಟರ್ ರವಿಕುಮಾರ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಕರಣದ ವಿವರ:
ಅನಧಿಕೃತ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ದಂಡದ ಮೊತ್ತವನ್ನು ಕಡಿಮೆ ಮಾಡಲು ಆರೋಪಿ ದೀಪಕ್ ವ್ಯಕ್ತಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಯೋಜಿತ ಕಾರ್ಯಾಚರಣೆ ನಡೆಸಿ, ದೀಪಕ್‌ನನ್ನು 3 ಲಕ್ಷ ರೂಪಾಯಿ ನಗದು ಸ್ವೀಕರಿಸುವ ವೇಳೆಯೇ ಬಂಧಿಸಿ, ಸ್ವೀಕರಿಸಿದ ಮೂರು ಲಕ್ಷ ರೂ. ನಗದನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದಿದ್ದು, ಮುಂದಿನ ಕ್ರಮ ಜರುಗಿಸಲಾಗುತ್ತಿದೆ.
