ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿಯಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾಗಿರುವ ಲೋಕಾಯುಕ್ತ ಮಾಜಿ ಮುಖ್ಯಪೇದೆ ನಿಂಗಪ್ಪ ಸಾವಂತ್‌ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಬೆಂಗಳೂರು (ಜೂ.19): ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿಯಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾಗಿರುವ ಲೋಕಾಯುಕ್ತ ಮಾಜಿ ಮುಖ್ಯಪೇದೆ ನಿಂಗಪ್ಪ ಸಾವಂತ್‌ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಪ್ರಕರಣದ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದು ಕೋರಿ ಹೊಳಲ್ಕೆರೆ ತಾಲೂಕು ತಾಳಿಕಟ್ಟೆಯ ನಿಂಗಪ್ಪ ಸಾವಂತ್‌ (45) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರು ಈ ಆದೇಶ ಮಾಡಿದರು.

ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಲೋಕಾಯುಕ್ತ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜು.15ಕ್ಕೆ ಮುಂದೂಡಿದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ನಡೆಸಲಾಗುವ ದಾಳಿಗಳ ಕುರಿತಂತೆ ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವ ಮತ್ತು ದಾಳಿಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಅರ್ಜಿದಾರ ನಿಂಗಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಇದರಿಂದ ಪ್ರಕರಣ ರದ್ದು ಕೋರಿ ನಿಂಗಪ್ಪ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಹೈಕೋರ್ಟ್‌ಗೆ ಅರ್ಜಿ: ಇನ್ನು ನಿಂಗಪ್ಪ ಬಂಧನ ಪ್ರಶ್ನಿಸಿ ಪತ್ನಿ ಚಂದ್ರಕಲಾ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಲೋಕಾಯುಕ್ತ ಪೊಲೀಸರು ತಮ್ಮ ಪತಿಯನ್ನು 2025ರ ಮೇ 31ರಂದು ಹೊಸದುರ್ಗದಲ್ಲಿ ಬಂಧಿಸಿದ್ದಾರೆ. ಅದರೆ, 2025ರ ಜೂ.2ರಂದು ಬೆಂಗಳೂರಿನ ರಾಜಾಜಿನಗರದ ಮಾರುತಿ ಮೈದಾನದಲ್ಲಿ ಬಂಧಿಸಲಾಗಿದೆ ಎಂಬುದಾಗಿ ದಾಖಲೆಗಳಲ್ಲಿ ತೋರಿಸಲಾಗಿದೆ.

ಪೊಲೀಸರು ಬಂಧನಕ್ಕೂ ಮುನ್ನ ಆರೋಪಿಗೆ ನೀಡಬೇಕಾದ ಸೂಕ್ತ ಕಾರಣ/ಆಧಾರಗಳನ್ನು ಒದಗಿಸಿಲ್ಲ. ಹಾಗಾಗಿ, ಈ ಬಂಧನ ಅಕ್ರಮವೆಂದು ಘೋಷಿಸಬೇಕು. ಪತಿಯನ್ನು ಕೂಡಲೇ ಬಿಡುಗಡೆಗೊಳಿಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಚಂದ್ರಕಲಾ ಕೋರಿದ್ದಾರೆ. ಈ ಅರ್ಜಿ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.