ಮುಂದಿನ ಎರಡು ತಿಂಗಳು ಭಾರೀ ಮಳೆಯಾಗುವ ಸಾಧ್ಯತೆ ಇದ್ದರಿಂದ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಹೈ ಅಲರ್ಟ್ ಆಗಿರಬೇಕು ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.
ಚಿಕ್ಕಮಗಳೂರು (ಜೂ.27): ಮುಂದಿನ ಎರಡು ತಿಂಗಳು ಭಾರೀ ಮಳೆಯಾಗುವ ಸಾಧ್ಯತೆ ಇದ್ದರಿಂದ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಹೈ ಅಲರ್ಟ್ ಆಗಿರಬೇಕು ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದೇ ಪದೇ ಭೂ ಕುಸಿತ ಉಂಟಾಗುವ ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕು. ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳ ಕಟ್ಟಡಗಳ ಫಿಟ್‌ನೆಸ್ ಪರಿಶೀಲನೆ ನಡೆಸಬೇಕು ಎಂದರು.
ಮುಂಗಾರು ಮಳೆ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಪ್ರತಿ ವರ್ಷ ಮಳೆಗಾಲದ ಸಂದರ್ಭ ದಲ್ಲಿ ಭೂ ಕುಸಿತ ಉಂಟಾಗುವ ಸ್ಥಳಗಳಿಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ತಂಡ ಭೇಟಿ ನೀಡಿತ್ತು. ಇದರ ಜತೆಗೆ ಹೊಸದಾಗಿ ಕೆಲವೆಡೆ ಭೂ ಕುಸಿತ ಉಂಟಾಗಿದೆ. ಅಂತಹ ಪ್ರದೇಶಗಳನ್ನು ಗುರುತು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ, ಪಂಚಾಯತ್ ಇಲಾಖೆಗೆ ಒಳಪಡುವ ರಸ್ತೆ ಹಾಗೂ ಸಂಪರ್ಕ ರಸ್ತೆಗಳ ಮಾಹಿತಿ ಕ್ರೋಡಿಕರಿಸಿ ಮೊದಲ ಆದ್ಯತೆ ಮೇಲೆ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಭೂ ಕುಸಿತ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಿವರಿಸಿದರು.
ಎಲ್ಲಲ್ಲಿ ರಸ್ತೆ ಹಾಳಾಗಿದೆಯೋ ಅದರ ವರದಿಯನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟರೆ ಒಂದು ತಿಂಗಳೊಳಗೆ ಮಂಜೂರಾತಿ ನೀಡಲಾಗುವುದು. ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ನಂತರ ಹಣ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಬೇಕು. ಇದಕ್ಕೆ ರಾಜ್ಯದ 6 ಜಿಲ್ಲೆಗಳಿಗೆ ₹400 ಕೋಟಿ ರು. ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ವಿಪತ್ತು ನಿರ್ವಹಣೆಗೆ ಕೊಡುತ್ತಿರುವ ಹಣವನ್ನು ಅದೇ ವರ್ಷದಲ್ಲೇ ಬಳಕೆ ಮಾಡಬೇಕು. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್) ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ರಸ್ತೆಗಳ ಗುಂಡಿ ಮುಚ್ಚಲು ಕೊಟ್ಟ ಹಣ ಅದೇ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೋಡಿಗೆ ಹಿನ್ನಡೆ: ಜಿಲ್ಲೆಯಲ್ಲಿ ಹಲವು ಪೋಡಿ ಪ್ರಕರಣಗಳು ನನೆಗುದಿಗೆ ಬಿದ್ದಿವೆ. ಅವುಗಳನ್ನು ಇತ್ಯರ್ಥಪಡಿಸಲು ಆಗುತ್ತಿಲ್ಲ ಎಂಬ ವಿಷಯ ಚರ್ಚೆಗೆ ಬಂದಾಗ ಚಿಕ್ಕಮಗಳೂರು ಡಿಎಫ್‌ಒ ರಮೇಶ್‌ಬಾಬು ಮಾತನಾಡಿ, ಮೀಸಲು ಅರಣ್ಯದಿಂದ 100 ಮೀ. ವ್ಯಾಪ್ತಿ ಯೊಳಗೆ ಕಂದಾಯ ಭೂಮಿ ಇದ್ದರೂ ಪೋಡಿಗೆ ಅವಕಾಶ ಇರುವುದಿಲ್ಲ. ಒಂದು ಎಕರೆ ಪ್ರದೇಶದಲ್ಲಿ 10ಕ್ಕಿಂತ ಹೆಚ್ಚು ಮರಗಳು ಇದ್ದರೆ ಆ ಜಮೀನು ಕೂಡ ಪೋಡಿ ಮಾಡಲು ಅವಕಾಶ ಇಲ್ಲ ಎಂದು ಹೇಳುತ್ತಿದ್ದಂತೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡೆ ನಕ್ಷೆ ಸಿದ್ಧಪಡಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ, ಸರ್ಕಾರದಿಂದ ಮಂಜೂರಾದ ಜಮೀನು ಹಲವು ಮಂದಿ ಸಾಗುವಳಿ ಮಾಡುತ್ತಿಲ್ಲ ಎಂತಹ ಜಮೀನುಗಳನ್ನು ಪತ್ತೆ ಹಚ್ಚಿ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಲು ಮೀಸಲಿಡಬೇಕೆಂದು ಹೇಳಿದಾಗ ಸಚಿವರು ಒಪ್ಪಿಗೆ ಸೂಚಿಸಿದರು. ಅಜ್ಜಂಪುರ ಪಟ್ಟಣದ ಸಮೀಪದಲ್ಲಿ ವ್ಯಕ್ತಿಯೋರ್ವರು 4 ಎಕರೆ ಬಿ ಖರಾಬ್ ಜಾಗ ಸೇರಿಸಿಕೊಂಡು ಲೇಔಟ್ ಮಾಡಿ ಸೈಟ್‌ಗಳನ್ನು ಮಾರಾಟ ಮಾಡಿದ್ದಾರೆ. ಸರ್ಕಾರಿ ಜಾಗವನ್ನು ಪೋಡ್ ಮಾಡಿ ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ್ ಸಭೆ ಗಮನಕ್ಕೆ ತಂದಾಗ, ಭೂ ಪರಿವರ್ತನೆ ರದ್ದುಪಡಿಸಿ, ಖರಾಬ್ ಜಾಗವನ್ನು ಸರ್ಕಾರದ ವಶಕ್ಕೆ ತೆಗೆದು ಕೊಳ್ಳಬೇಕೆಂದು ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.
ಹಲವು ವರ್ಷಗಳ ಹಿಂದೆ ಸರ್ಕಾರ ಭೂಹೀನರಿಗೆ ಜಮೀನು ಮಂಜೂರು ಮಾಡಿದೆ. ಕಾಲ ಕ್ರಮೇಣ ಅದು ಪೋಡ್ ಆಗಿಲ್ಲ. ಇದರಿಂದ ಬಹಳಷ್ಟು ಜನರಿಗೆ ತೊಂದರೆಯಾಗಿದೆ. ಕಷ್ಟ ಕಾಲದಲ್ಲಿ ಜಮೀನು ಮಾರಾಟ ಮಾಡಲು ಆಗುತ್ತಿಲ್ಲ. ಹಾಗಾಗಿ ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಪೋಡ್ ಮಾಡಬೇಕು ಎಂದು ಹೇಳಿದರು. ಸಭೆಯಲ್ಲಿ ಕಡೂರು ಶಾಸಕ ಆನಂದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಜಿಪಂ ಸಿಇಓ ಕೀರ್ತನಾ, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಇದ್ದರು.
ಕಂದಾಯ ಗ್ರಾಮ ಗುರುತಿಗೆ ಹಿನ್ನೆಡೆ: ಮಲೆನಾಡಿನ ತಾಲೂಕುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಂದಾಯ ಗ್ರಾಮಗಳ ಗುರುತಿಸುವಿಕೆ ಕೆಲಸ ಆಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರ ಹಾಕಿದರು. ಬಡವರ ಕೆಲಸ ಮಾಡಲು ನಿಮಗೆ ಇಷ್ಟ ಇಲ್ಲ. ಹಾಗಾಗಿ ಕಂದಾಯ ಗ್ರಾಮಗಳ ಗುರುತಿಸುವ ಕೆಲಸ ಸಕಾಲದಲ್ಲಿ ನಿಮ್ಮಿಂದ ಆಗಿಲ್ಲ ಎಂದು ತಹಸೀಲ್ದಾರ್ ರನ್ನು ತರಾಟೆ ತೆಗೆದುಕೊಂಡರು. ಕೆಲವು ಸರ್ವೆ ನಂಬರ್‌ಗಳು ಸೊಪ್ಪಿನಬೆಟ್ಟ, ಅರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಶೃಂಗೇರಿ ತಹಸೀಲ್ದಾರ್ ಅನೂಪ್ ಹೇಳಿದರು. ಇ- ಆಫೀಸ್ ಕಡ್ಡಾಯವಾಗಿ ಮಾಡಲೇಬೇಕು, ಅದ್ದರಿಂದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕು ಎಂದು ಹೇಳಿದ ಸಚಿವರು, ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗಿಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಧೋರಣೆ ಮುಂದುವರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
