ಕಿಮ್ಸ್‌ನಲ್ಲಿ ದಾದಿಯರನ್ನು ಅವಮಾನಿಸಿದ ರೀಲ್ಸ್‌ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 15ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.

ಹುಬ್ಬಳ್ಳಿ (ಆ.9): ಕಿಮ್ಸ್‌ನಲ್ಲಿ ದಾದಿಯರನ್ನು ಅವಮಾನಿಸಿದ ರೀಲ್ಸ್‌ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 15ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಕಿಮ್ಸ್‌ನಲ್ಲಿ ಆ. 23ರಿಂದ 26ರ ವರೆಗೆ 11ನೇ ಆವೃತ್ತಿಯ ರಾಷ್ಟ್ರಮಟ್ಟದ ಅಂತರ ಕಾಲೇಜುಗಳ ಫೆಸ್ವ್‌ ‘ಮಂಥನ್‌’ ನಡೆಯಲಿದೆ. ಇದರಲ್ಲಿ ಪ್ರದರ್ಶಿಸಲು ವಿದ್ಯಾರ್ಥಿಗಳು ಸ್ಕಿಟ್‌ ಸಿದ್ಧಪಡಿಸಿದ್ದರು. ‘ಭದ್ರ’ ಚಿತ್ರದ ಹಾಡನ್ನು ಬಳಸಿಕೊಂಡು ಸ್ಕಿಟ್‌ ಮಾಡಲಾಗಿತ್ತು. ಇದಕ್ಕೆ ಬೇಕಾದ ಚಿತ್ರೀಕರಣವನ್ನು ವಿದ್ಯಾರ್ಥಿಗಳ ತಂಡ, ಕಿಮ್ಸ್‌ ಆವರಣ ಹಾಗೂ ಆಸ್ಪತ್ರೆಯ ಭಾಗಗಳನ್ನು ಬಳಸಿಕೊಂಡಿತ್ತು. ಈ ಸ್ಕಿಟ್‌ನ್ನು ಕಾಲೇಜಿನ ಪರಿಶೀಲನಾ ಸಮಿತಿ ತಿರಸ್ಕರಿಸಿತ್ತು. ಜತೆಗೆ ಫೆಸ್ಟ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿತ್ತು.

ಅಲ್ಲಿ ತಿರಸ್ಕರಿಸಿದ ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಹರಿಬಿಡಲಾಗಿತ್ತು. ಇದನ್ನು ಶುಶ್ರೂಷಕಿಯರ ಸಂಘದ ಪದಾಧಿಕಾರಿಗಳು, ನರ್ಸಿಂಗ್‌ ಕಾಲೇಜ್‌ ಸೇರಿದಂತೆ ವಿವಿಧ ಸಂಘಟನೆಗಳು ವೀಕ್ಷಿಸಿದ್ದವು.

ತ್ರಿಪುರಾದಲ್ಲೂ ಹಿಜಾಬ್‌ ಗಲಾಟೆ, ಪ್ರಿನ್ಸಿಪಾಲ್‌ ನಿರ್ಬಂಧಿಸಿದ್ದನ್ನು ವಿರೋಧಿಸಿದ ವಿದ್ಯಾರ್ಥಿಗೆ ಥಳಿತ!

ಇದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿ, ಸೋಮವಾರ ಕಿಮ್ಸ್‌ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದವು. ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದವು

ತನಿಖೆಗೆ ಸಮಿತಿ: ಈ ಪ್ರಕರಣದ ತನಿಖೆಗೆ ಕಿಮ್ಸ್‌ ನಿರ್ದೇಶಕರು ಏಳು ಜನರ ಸಮಿತಿಯನ್ನು ರಚಿಸಿದ್ದಾರೆ. ಕಿಮ್ಸ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರ ನೇತೃತ್ವದಲ್ಲಿ ರಚನೆಯಾದ ಈ ಸಮಿತಿಯಲ್ಲಿ ಕಿಮ್ಸ್‌ನ ಸಿಎಒ, ದಾದಿಯರ ಸಂಘದ ಜಿಲ್ಲಾಧ್ಯಕ್ಷೆ ಸುನಿತಾ ನಾಯ್‌್ಕ, ನರ್ಸಿಂಗ್‌ ಕಾಲೇಜ್‌ನ ಪ್ರಾಚಾರ್ಯ, ವಿದ್ಯಾರ್ಥಿ ಮುಖಂಡ ಸೇರಿದಂತೆ ಏಳು ಜನರು ಸಮಿತಿಯಲ್ಲಿದ್ದಾರೆ. ಈ ಸಮಿತಿ ಈಗಾಗಲೇ ತನಿಖೆಯನ್ನೂ ಪ್ರಾರಂಭಿಸಿದೆ. ಎಂಟ್ಹತ್ತು ದಿನಗಳಲ್ಲಿ ಈ ಸಮಿತಿ ವರದಿ ನೀಡಲಿದೆ.

ಸಮಿತಿ ವರದಿ ನೀಡುವವರೆಗೂ ಆ ಸ್ಕಿಟ್‌ನಲ್ಲಿ ಆ್ಯಕ್ಟ್ ಮಾಡಿದ ಹಾಗೂ ಆ ಕಲ್ಪನೆ ಸಿದ್ಧಪಡಿಸಿದ 15 ವಿದ್ಯಾರ್ಥಿಗಳನ್ನು ಅಮಾನತು ಮಾಡಿ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಆದೇಶಿಸಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿಗಳ ಇನ್‌ಸ್ಟಾಗ್ರಾಮ್ ಹುಚ್ಚಾಟ: ಕಿಮ್ಸ್ ಆಸ್ಪತ್ರೆ ನರ್ಸ್‌ಗಳ ಬಗ್ಗೆ ರೀಲ್ಸ್‌

ಈ ನಡುವೆ ವಿದ್ಯಾರ್ಥಿಗಳ ತಂಡ ಕ್ಷಮೆ ಕೋರಿ ವಿಡಿಯೋ ಮಾಡಿ ಅದನ್ನು ಹರಿಬಿಟ್ಟಿದೆ. ಜತೆಗೆ ದಾದಿಯರಿಗೂ ಬಹಿರಂಗವಾಗಿಯೇ ಕ್ಷಮೆ ಕೇಳಿದೆ. ಒಟ್ಟಿನಲ್ಲಿ ಕಿಮ್ಸ್‌ನಲ್ಲೀಗ ಇನ್‌ಸ್ಟಾಗ್ರಾಮನಲ್ಲಿನ ರೀಲ್ಸ್‌ದ್ದು ಬಹುಚರ್ಚಿತ ವಿಷಯವಾದಂತಾಗಿದೆ.

ಕಿಮ್ಸ್‌ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ವರ್ತನೆ ವಿರುದ್ಧ ಪ್ರತಿಭಟನೆ
ಕೋಲಾರ: ನರ್ಸ್‌ಗಳನ್ನು ಕುರಿತು ಕನ್ನಡ ಚಿತ್ರವೊಂದರ ಹಾಡಿಗೆ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ನರ್ಸ್‌ಗಳಿಗೆ ಅಪಮಾನ ಮಾಡಿರುವ ಹುಬ್ಬಳ್ಳಿಯ ಕಿಮ್ಸ್‌ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ಶುಶ್ರೂಷಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್‌ ಕುಮಾರ್‌ ಮೂಲಕ ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿತು.

ಸಂಘದ ಜಿಲ್ಲಾಧ್ಯಕ್ಷೆ ಎಸ್‌.ವಿಜಯಲಕ್ಷ್ಮಿ ಮಾತನಾಡಿ, ವಿಡಿಯೋದಲ್ಲಿ ನರ್ಸ್‌ಗಳನ್ನು ಅಸಭ್ಯವಾಗಿ, ಅಗೌರವಿಸುವ ರೀತಿಯಲ್ಲಿ ಮಾಡಲಾಗಿದೆ. ಈ ಮೂಲಕ ನರ್ಸ್‌ಗಳಿಗೆ ಅವಮಾನ ಮಾಡಲಾಗಿದ್ದು, ರಾಜ್ಯದೆಲ್ಲೆಡೆ ವಿಡಿಯೋ ವೈರಲ್‌ ಆಗಿದೆ. ಕೂಡಲೇ ಅವಮಾನ ಮಾಡಿದ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದರು.

ದಾದಿಯರಿಗೆ ಅಪಮಾನ:
ದಾದಿಯರು ಪ್ರತಿ ರೋಗಿಯನ್ನು ತಮ್ಮ ಸ್ವಂತ ಕುಟುಂಬದ ವ್ಯಕ್ತಿಯಂತೆ ಭಾವಿಸಿ ಆರೈಕೆ ಮಾಡುತ್ತಾರೆ. ಅಂತಹವರ ಕರ್ತವ್ಯ ಹೀಯಾಳಿಸುವ ರೀತಿ ವೈದ್ಯಕೀಯ ವಿದ್ಯಾರ್ಥಿಗಳು ರೀಲ್ಸ್‌ ಮಾಡಿರುವುದು ಖಂಡನೀಯ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಶ್ರೂಷಾಧಿಕಾರಿಗಳು ಚುಚ್ಚುಮದ್ದು ನೀಡುವುದು ಹೇಗೆ ಎಂದು ಕಲಿಸಿರುತ್ತಾರೆ. ವಿದ್ಯೆ ಕಲಿಸಿಕೊಟ್ಟನರ್ಸ್‌ಗಳ ಘನತೆಗೆ ಕುಂದು ತರುವ ಕೆಲಸವನ್ನು ಮಾಡಿರುವುದು ವಿಷಾದನೀಯ ಎಂದರು. ಈ ಸಂದರ್ಭದಲ್ಲಿ ಶುಶ್ರೂಷಾಧಿಕಾರಿಗಳಾದ ಎಂ.ಸುಮತಿ, ಬಿ.ಕೆ.ಚಂದ್ರಕಲಾ, ಮಹೇಶ್‌, ಸದಾನಂದ, ಶಿವಾರೆಡ್ಡಿ, ನಾರಾಯಣಪ್ಪ, ಮಂಜುನಾಥ್‌ ಇದ್ದರು.