ಜನತಾ ಕರ್ಫ್ಯೂ, 4 ಲಕ್ಷಕ್ಕೂ ಅಧಿಕ ಮಂದಿ ಗ್ರಾಮಗಳಿಗೆ ದೌಡು: ಹಳ್ಳಿಗೂ ಸೋಂಕು ವಲಸೆ?
ನಗರಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರ ಗುಳೆ| ಹಳ್ಳಿಗೂ ಸೋಂಕು ವಲಸೆ?| 14 ದಿನ ಜನತಾ ಕರ್ಫ್ಯೂಗೂ ಮುನ್ನ 4 ಲಕ್ಷಕ್ಕೂ ಅಧಿಕ ಜನರು ಗ್ರಾಮಗಳಿಗೆ ದೌಡು| ರಾಜ್ಯದ ವಿವಿಧ ನಗರಗಳಿಂದ ಪ್ರಯಾಣ| ಕಳೆದ ವರ್ಷದ ರೀತಿ ಸೋಂಕಿನ ಆತಂಕ
ಬೆಂಗಳೂರು(ಏ.28): ತೀವ್ರವಾಗಿ ಬಾಧಿಸುತ್ತಿರುವ ಕೊರೋನಾ ಸೋಂಕಿನ 2ನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 14 ದಿನಗಳ ಜನತಾ ಕಫä್ರ್ಯ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಿಂದ ಸುಮಾರು 4 ಲಕ್ಷಕ್ಕೂ ಅಧಿಕ ಸಂಖ್ಯೆಯ ಕಾರ್ಮಿಕರು, ಉದ್ಯೋಗಿಗಳು ಕುಟುಂಬಸಮೇತರಾಗಿ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಹಳ್ಳಿಗಳತ್ತ ವಾಪಸಾಗಿರುವುದು ಇದೀಗ ಅಪಾಯ ಮತ್ತು ಆತಂಕಕ್ಕೆ ಕಾರಣವಾಗಿದೆ.
ಇದರಿಂದ ಕಳೆದ ವರ್ಷದಂತೆ ನಗರದಿಂದ ಹಳ್ಳಿಗಳಿಗೆ ಸೋಂಕು ಹರಡುವ ಭೀತಿ ಒಂದೆಡೆಯಾದರೆ, ಈಗ ಕಂಡುಬಂದಿರುವ ಡಬಲ್ ಮ್ಯುಟೆಂಟ್ ವೈರಾಣು ತೀವ್ರ ವೇಗವಾಗಿ ಹಬ್ಬುತ್ತಿರುವುದು ಮತ್ತೊಂದು ಬಗೆಯಲ್ಲಿ ತಲೆನೋವಾಗಿ ಪರಿಣಮಿಸಿದೆ. ಏತನ್ಮಧ್ಯೆ ಬೆಂಗಳೂರಿನಿಂದ ವಲಸೆ ಬಂದ ಆರು ಕಾರ್ಮಿಕರಲ್ಲಿ ಕೊರೋನಾ ದೃಢಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿರುವುದು ಈ ಆತಂಕವನ್ನು ಮತ್ತಷ್ಟುಹೆಚ್ಚಿಸಿದೆ.
ಕಳೆದ ವರ್ಷ ದೇಶಾದ್ಯಂತ ಕೊರೋನಾ ಲಾಕ್‌ಡೌನ್ ಆದ ವೇಳೆ ಜನ ನಗರ ಪ್ರದೇಶಗಳಿಂದ ಸಾಮೂಹಿಕ ಗುಳೆ ಹೋಗಿದ್ದರಿಂದ ಸೋಂಕು ಹಳ್ಳಿಗಳಿಗೆ ಪಸರಿಸಿತ್ತು. ಇದೀಗ ಹೊಸದಾಗಿ ಕಂಡುಬಂದಿರುವ ಡಬಲ್ ಮ್ಯುಟೆಂಟ್ ವೈರಾಣು ಹಿಂದಿನ ವರ್ಷಕ್ಕಿಂತಲೂ ಅತಿ ವೇಗವಾಗಿ ಹಬ್ಬುತ್ತಿದೆ. ಹೀಗಾಗಿ ಸಾಮೂಹಿಕ ಗುಳೆಯಿಂದ ನಗರ ಪ್ರದೇಶಗಳಲ್ಲಷ್ಟೇ ಹೆಚ್ಚಿನ ಸಂಖ್ಯೆಯಲ್ಲಿರುವ ಸೋಂಕು ಹಳ್ಳಿಗಳಿಗೂ ವ್ಯಾಪಿಸುವುದು ಮಾತ್ರವಲ್ಲದೆ ದುಪ್ಪಟ್ಟು ವೇಗದಲ್ಲಿ ಹರಡುವ ಆತಂಕ ಸೃಷ್ಟಿಯಾಗಿದೆ. ಜೊತೆಗೆ ವಲಸಿಗರು ಯಾವುದೇ ಕೊರೋನಾ ಟೆಸ್ಟ್ ಇಲ್ಲದೆ ಹಳ್ಳಿಗಳನ್ನು ಪ್ರವೇಶಿಸುತ್ತಿರುವುದು ಮತ್ತು ಇದನ್ನು ತಡೆಯುವಲ್ಲಿ ಸರ್ಕಾರವೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಕಿಡಿಯಾಗಿದ್ದಾರೆ.
ಬೆಂಗಳೂರಿಂದಲೇ 3 ಲಕ್ಷ ಮಂದಿ:
ರಾಜ್ಯ ಸರ್ಕಾರ ಸೋಮವಾರ ಜನತಾ ಕಫä್ರ್ಯ ಘೋಷಿಸುತ್ತಿದ್ದಂತೆ ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಬಸ್, ರೈಲು, ಕಾರು, ಮ್ಯಾಕ್ಸಿಕ್ಯಾಬ್, ಟೆಂಪೋ, ಕ್ಯಾಂಟರ್, ಟ್ರ್ಯಾಕ್ಟರ್, ದ್ವಿಚಕ್ರವಾಹನ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ತಮ್ಮ ಊರುಗಳತ್ತ ಪ್ರಯಾಣಿಸಿದ್ದರು. ಮಂಗಳವಾರವಂತೂ ರಾಜ್ಯ ಸರ್ಕಾರ ಬೆಂಗಳೂರಿನಿಂದ ವಿವಿಧೆಡೆಗೆ ಬಸ್‌ಗಳ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಮತ್ತೆ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಮಿಕರು, ಉದ್ಯೋಗಿಗಳು ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಗದಗ, ಧಾರವಾಡ, ಚಿತ್ರದುರ್ಗ, ದಾವಣಗೆರೆ ಮುಂತಾದೆಡೆಗಳಿಗೆ ತೆರಳಿದ್ದಾರೆ.
ಇಷ್ಟುಮಾತ್ರವಲ್ಲದೆ ಮೈಸೂರು, ಮಂಗಳೂರು, ಪುತ್ತೂರು, ಉಡುಪಿ ಮೊದಲಾದೆಡೆಗಳಿಂದ ಕಟ್ಟಡ ನಿರ್ಮಾಣ ಕಾರ್ಮಿಕರು, ಗಾರ್ಮೆಂಟ್ಸ್ ಉದ್ಯೋಗಿಗಳು, ರಸ್ತೆ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೋಟೆಲ್ ಕೆಲಸಗಾರರು ಸೇರಿದಂತೆ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ಗಂಟುಮೂಟೆ ಕಟ್ಟಿಕೊಂಡು ಕುಟುಂಬ ಸಮೇತ ಉತ್ತರ ಕರ್ನಾಟಕದ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಜಿಲ್ಲಾಕೇಂದ್ರಗಳಲ್ಲಿನ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ತರಗತಿಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ಮರಳಿದ್ದಾರೆ. ಹೀಗೆ ಒಟ್ಟಾರೆ ರಾಜ್ಯದಲ್ಲಿ ನಗರ ಪ್ರದೇಶಗಳಿಂದ ಗ್ರಾಮಗಳಿಗೆ ವಲಸೆ ತೆರಳಿರುವವರ ಸಂಖ್ಯೆ 4 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಕೋವಿಡ್ ಪರೀಕ್ಷೆಗೆ ವ್ಯವಸ್ಥೆಯಿಲ್ಲ:
ವಲಸೆ ಹೋಗುತ್ತಿರುವ ಜನರಿಗೆ ನಗರ ಪ್ರದೇಶಗಳಿಂದ ಹೊರಡುವಾಗ ಆಗಲಿ, ತಲುಪಿದ ಮೇಲೆ ಆಗಲಿ ಯಾವುದೇ ಕೋವಿಡ್ ಪರೀಕ್ಷೆ ನಡೆಸಲು ಆಡಳಿತ ಯಂತ್ರ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ. ಮಾತ್ರವಲ್ಲದೆ ಯಾವುದೇ ತಿಳಿವಳಿಕೆಯನ್ನೂ ನೀಡಿಲ್ಲ. ಹುಬ್ಬಳ್ಳಿ, ಬಳ್ಳಾರಿ, ಗದಗ ಬಸ್‌ನಿಲ್ದಾಣ, ರೈಲು ನಿಲ್ದಾಣಗಳಿಗೆ ಬಂದವರು ಅದೇ ಸ್ಥಿತಿಯಲ್ಲಿ ತಮ್ಮ ಊರುಗಳಿಗೆ ತೆರಳಿದರು. ಹೀಗೆ ಎಲ್ಲರೂ ತಮ್ಮಿಷ್ಟದ ಪ್ರಕಾರ ಊರು ತಲುಪುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ನಗರದ ಮಾತ್ರ ರಾರಯಪಿಡ್ ಹಾಗೂ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗಿದ್ದು ಆರು ಪ್ರಯಾಣಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈಗಾಗಲೇ ಚಿತ್ರದುರ್ಗ, ವಿಜಯಪುರ ಜಿಲ್ಲೆಯ ಕೆಲ ಗ್ರಾಮಸ್ಥರು ಪಟ್ಟಣ ಪ್ರದೇಶಗಳಿಂದ ತಮ್ಮ ಊರುಗಳಿಗೆ ಜನ ಬರುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಗ್ರಾಮ ಪ್ರವೇಶಿಸುವ ರಸ್ತೆಗಳ ಮೇಲೆ ಮಣ್ಣು ಸುರಿದು, ಗಿಡಗಂಟಿಗಳನ್ನು ಅಡ್ಡ ಇಟ್ಟು ಬಂದ್ ಮಾಡಿರುವ ಘಟನೆಗಳೂ ನಡೆದಿವೆ.