ಬೆಂಗಳೂರು(ಮೇ.12): ಕೋವಿಡ್‌-19’ ಪರಿಣಾಮ ಚೀನಾದಲ್ಲಿರುವ ತಮ್ಮ ಕಂಪನಿಗಳನ್ನು ಮುಚ್ಚಿ ಭಾರತದಲ್ಲಿ ಸ್ಥಾಪಿಸಲು ಚಿಂತನೆ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ರಾಜ್ಯದಲ್ಲಿ ಬಂಡವಾಳ ಹೂಡಲು ಮನವೊಲಿಸುವ ಸಂಬಂಧ ‘ವಿಶೇಷ ಬಂಡವಾಳ ಉತ್ತೇಜನಾ ಕಾರ್ಯಪಡೆ’ ರಚಿಸಿದೆ.

ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರ ಮಾರ್ಗದರ್ಶನದಲ್ಲಿ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!

ಚೀನಾದಲ್ಲಿರುವ ಜಪಾನ್‌ ಕಂಪನಿಗಳನ್ನು ಮುಚ್ಚುವ ಸಂಬಂಧ ಜಪಾನ್‌ ಸರ್ಕಾರವೇ ಹಣ ನೀಡುತ್ತಿದೆ. ಅಮೆರಿಕ ಸಹ ಚೀನಾದಲ್ಲಿರುವ ಕಂಪನಿಗಳನ್ನು ಮುಚ್ಚಲು ಚಿಂತನೆ ಮಾಡುತ್ತಿದೆ. ಅದೇ ರೀತಿ ದಕ್ಷಿಣ ಕೊರಿಯಾ, ತೈವಾನ್‌, ಸಿಂಗಾಪುರ ಮತ್ತಿತರ ದೇಶಗಳು ಘಟಕಗಳನ್ನು ಮುಚ್ಚಿ ಭಾರತದಲ್ಲಿ ಸ್ಥಾಪಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ವಿದೇಶಿ ಕಂಪನಿಗಳಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಮನವೊಲಿಸಲು ಕಾರ್ಯಪಡೆ ರಚಿಸಿದೆ.

ಕಾರ್ಯಪಡೆ ವಿವರ:

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕಾರ್ಯಪಡೆಯ ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಂಎಸ್‌ಎಂಇ ಮತ್ತು ಗಣಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಸೇರಿದಂತೆ ಜಪಾನ, ತೈವಾನ್‌, ಕೊರಿಯನ್‌, ಅಮೆರಿಕ ವ್ಯಾಪಾರ ಸಂಸ್ಥೆಗಳ ಪ್ರತಿನಿಧಿಗಳು, ಕೈಗಾರಿಕೆಗಳ ಪ್ರತಿನಿಧಿಗಳು ಕಾರ್ಯನಿರ್ವಹಿಸಲಿದ್ದಾರೆ.

ಚೀನಾದಿಂದ ಹೊರಬರಲು ಮುಂದಾದ MNC ಕಂಪನಿಗಳು: ಕರ್ನಾಟಕದತ್ತ ಸೆಳೆಯಲು ಕಾರ್ಯಪಡೆ

ಕಾರ್ಯಪಡೆಯ ಜವಾಬ್ದಾರಿ:

ಕೋವಿಡ್‌-19 ಹಿನ್ನೆಲೆಯಲ್ಲಿ ಯಾವ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಆಕರ್ಷಿಸಬಹುದು ಎಂಬುದನ್ನು ಗುರುತಿಸುವುದು. ಬಂಡವಾಳ ಹೂಡಲು ಯಾವ ರೀತಿಯ ಪ್ರೋತ್ಸಾಹ ಹಾಗೂ ಸೌಲಭ್ಯಗಳನ್ನು ಕಲ್ಪಿಸಬಹುದು ಎಂಬುದನ್ನು ನಿಗದಿಗೊಳಿಸುವುದು. ಬಂಡವಾಳ ಆಕರ್ಷಿಸಲು ನಿರ್ದಿಷ್ಟಉದ್ದೇಶದ ಕೈಗಾರಿಕಾ ವಲಯ ಸ್ಥಾಪನೆ ಹಾಗೂ ಸೇರಿದಂತೆ ಪ್ರಮುಖ ಮೂಲಭೂತ ಸೌಲಭ್ಯ ಕಲ್ಪಿಸುವುದು, ಬಂಡವಾಳ ಹೂಡಿಕೆಗೆ ಪೂರಕವಾಗಿ ತ್ವರಿತಗತಿಯಲ್ಲಿ ಒಪ್ಪಿಗೆ ನೀಡುವುದು ಹಾಗೂ ಕರ್ನಾಟಕ ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿದೆ ಎಂಬುದನ್ನು ತಿಳಿಸುವ ಕೆಲಸ ಮಾಡುವುದು ಈ ಕಾರ್ಯಪಡೆಯ ಜವಾಬ್ದಾರಿಯಾಗಿದೆ.