'ರಸ್ತೆ ಸಂಪರ್ಕದಲ್ಲಿ ದೇಶಕ್ಕೇ ಕರ್ನಾಟಕ ಮಾದರಿ'
* ಸುಸಜ್ಜಿತ ಹೆದ್ದಾರಿ, ಹೆಚ್ಚಿನ ಮೂಲಸೌಲಭ್ಯಗಳಿಂದಾಗಿ ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿ
* ಸಚಿವ ಸಿ.ಸಿ.ಪಾಟೀಲ ಭೇಟಿಯಾದ ಬಿಹಾರದ ರಸ್ತೆ ನಿರ್ಮಾಣ ಸಚಿವ ನಿತಿನ್ ನಬಿನ್
* ರಸ್ತೆಗಳ ನಿರ್ವಹಣೆಯಲ್ಲಿ ವಾಹನಗಳ ಸುರಕ್ಷತೆಗೂ ಆದ್ಯತೆ
ಬೆಂಗಳೂರು(ಆ.28): ಕರ್ನಾಟಕ ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿಗೆ ಇಲ್ಲಿನ ಸುಸಜ್ಜಿತ ಹೆದ್ದಾರಿಗಳು ಮತ್ತು ಹೆಚ್ಚಿನ ಮೂಲ ಸೌಲಭ್ಯಗಳು ಕಾರಣ ಎಂದು ಬಿಹಾರದ ರಸ್ತೆ ನಿರ್ಮಾಣ ಸಚಿವ ನಿತಿನ್ ನಬಿನ್ ಶ್ಲಾಘಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಕೈಗೊಳ್ಳುತ್ತಿರುವ ಹೆದ್ದಾರಿ ಮತ್ತು ರಸ್ತೆ ನಿರ್ಮಾಣ ಯೋಜನೆಗಳ ಕುರಿತು ಮಾಹಿತಿ ಪಡೆದ ಬಳಿಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಅವರು, ಕರ್ನಾಟಕದಲ್ಲಿ ಮೂಲೆ ಮೂಲೆಗೂ ಅಳವಡಿಸಿರುವ ರಸ್ತೆ ಸಂಪರ್ಕವು ಇಡೀ ದೇಶದಲ್ಲಿಯೇ ಮಾದರಿ. ಕರ್ನಾಟಕ ಸಂಪರ್ಕ ಕ್ರಾಂತಿಯಲ್ಲಿ ಕೈಗೊಳ್ಳಲಾಗಿರುವ ಈ ಉತ್ತಮ ಸಾಧನೆಗಳ ಅಂಶಗಳನ್ನು ಬಿಹಾರವು ಭವಿಷ್ಯದಲ್ಲಿ ಅ ವಡಿಸಿಕೊಳ್ಳಲು ಪ್ರಯತ್ನಿಸಲಿದೆ ಎಂದರು.
ಹೆದ್ದಾರಿ ಪಕ್ಕ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಜೋಕೆ! ಹೈಕೋರ್ಟ್ ಆದೇಶ ಕೇಳಿ
ಕರ್ನಾಟಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಇತರ ರಸ್ತೆಗಳ ನಿರ್ವಹಣೆಯ ಕುರಿತು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ವಿವರಿಸಿದರು. ಹೆದ್ದಾರಿ ಮತ್ತು ರಸ್ತೆಗಳ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಆಧುನಿಕ ತಂತ್ರಜ್ಞಾನಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ರಾಜ್ಯದಲ್ಲಿ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ರಸ್ತೆಗಳ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಲಾಗಿದೆ. ರಸ್ತೆಗಳ ನಿರ್ವಹಣೆಯಲ್ಲಿ ವಾಹನಗಳ ಸುರಕ್ಷತೆಗೂ ಆದ್ಯತೆ ಇದೆ ಎಂದರು.
ವಿಶ್ವಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಹಾಗೂ ಕರ್ನಾಟಕದ ರಸ್ತೆ ಮತ್ತು ಹೆದ್ದಾರಿಗಳ ಸಂಪರ್ಕ ಜಾಲದ ನಿರ್ಮಾಣ ಹಾಗೂ ನಿರ್ವಹಣೆ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಗುರುಪ್ರಸಾದ್, ರಾಷ್ಟ್ರೀಯ ಹೆದ್ದಾರಿ ಮುಖ್ಯ ಎಂಜಿನಿಯರ್ ಗೋವಿಂದರಾಜು ಇದ್ದರು.