ಪಿಎಂ ವಿಶ್ವಕರ್ಮ ನೋಂದಣಿ: ದೇಶದಲ್ಲಿಯೇ ಕರ್ನಾಟಕ ನಂ.1

ಕರಕುಶಲಕರ್ಮಿಗಳನ್ನು ಗುರುತಿಸಿ ಕೌಶಲ್ಯ ಉನ್ನತೀಕರಣಗೊಳಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ.

Karnataka is No.1 in the country on Registration of PM Vishwakarma Yojana grg

ಬಸವರಾಜ ಹಿರೇಮಠ

ಧಾರವಾಡ(ಜ.13):  ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ ಚಂದ್ರಶೇಖರ ಅವರ ಕನಸಿನ ಕೂಸಾದ ‘ಪಿಎಂ ವಿಶ್ವಕರ್ಮ ಯೋಜನೆ’ಯ ನೋಂದಣಿಯಲ್ಲಿ ಸಚಿವ ರಾಜೀವ್‌ ಅವರ ತವರು ರಾಜ್ಯ ಕರ್ನಾಟಕ, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕರಕುಶಲಕರ್ಮಿಗಳನ್ನು ಗುರುತಿಸಿ ಕೌಶಲ್ಯ ಉನ್ನತೀಕರಣಗೊಳಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ.

2023ರ ಸೆಪ್ಟೆಂಬರ್‌ 17ರಂದು ಪ್ರಧಾನಿ ಮೋದಿ ಅವರು ಈ ಯೋಜನೆಗೆ ದೇಶಾದ್ಯಂತ ಚಾಲನೆ ನೀಡಿದ್ದರು. ರಾಜ್ಯದಲ್ಲಿ ಹುಬ್ಬಳ್ಳಿಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ರಾಜೀವ ಚಂದ್ರಶೇಖರ ಯೋಜನೆಗೆ ಹಸಿರು ನಿಶಾನೆ ತೋರಿದ್ದರು. ಜ.11ರ ವರೆಗೆ ಬರೀ ನಾಲ್ಕು ತಿಂಗಳಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 19,18,888 ಕರಕುಶಲಕರ್ಮಿಗಳು ಈ ಯೋಜನೆಗೆ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಇಡೀ ದೇಶದಲ್ಲಿ 62,24,161 ಜನರು ನೋಂದಣಿ ಮಾಡಿಕೊಂಡಿದ್ದು, 2ನೇ ಸ್ಥಾನದಲ್ಲಿ ಆಂಧ್ರಪ್ರದೇಶ (6,42,162), 3ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ (5,61,795) ಇದೆ.
ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಬಡಗಿಗಳು, ಶಿಲ್ಪಿಗಳು, ಬೋಟ್‌ ಮೇಕರ್‌, ದರ್ಜಿಗಳು ಸೇರಿದಂತೆ ಒಟ್ಟು 18 ಕರಕುಶಲ ಚಟುವಟಿಕೆಗಳಲ್ಲಿ ಯಾರು ತೊಡಗಿಕೊಂಡಿರುತ್ತಾರೆಯೋ ಅಂತಹ ಅರ್ಹರಿಗೆ ಮಾತ್ರ ಈ ಯೋಜನೆ ಅಡಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಈ ಯೋಜನೆಗೆ ನೋಂದಣಿ ಮಾಡಿದವರ 62.24 ಲಕ್ಷ ಜನರ ಪೈಕಿ ಅತೀ ಹೆಚ್ಚು 32,24,504 ಜನರು ದರ್ಜಿಗಳಿದ್ದಾರೆ. 11,68,827 ಮೇಸ್ತ್ರಿಗಳು, 4,33,275 ಕಾರ್ಪೆಂಟರ್‌ಗಳಿದ್ದಾರೆ.

ಪ್ರಧಾನಿ ಮೋದಿ ತಬ್ಬಿಕೊಂಡು ಭಾವುಕರಾದ ಮೀನು ಬಲೆ ನೇಯ್ಗೆಕಾರ, ವಿಡಿಯೋ ವೈರಲ್!

ರಾಜ್ಯದಲ್ಲಿ ಬೆಳಗಾವಿ ಫಸ್ಟ್‌: 

ಕರ್ನಾಟಕದ ಪೈಕಿ ಬೆಳಗಾವಿ ಮೊದಲ ಸ್ಥಾನದಲ್ಲಿದ್ದು, ಬರೋಬ್ಬರಿ 1,94,381 ಕುಶಲಕರ್ಮಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ನಂತರದಲ್ಲಿ ತುಮಕೂರು 1,61,287, ಬೀದರ್‌ 1,38,635 ಜನರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು, ಕೊನೆ ಸ್ಥಾನವನ್ನು ಕೊಡಗು ಪಡೆದಿದ್ದು, 2410 ಕುಶಲಕರ್ಮಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 89,376 ಜನರು ನೋಂದಣಿ ಮಾಡಿದ್ದು, 8ನೇ ಸ್ಥಾನದಲ್ಲಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ ಈ ಕುರಿತು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಅರ್ಜಿ ಸಲ್ಲಿಸಿದ ಕರಕುಶಲಕರ್ಮಿಗಳನ್ನು ಮೂರು ಹಂತದಲ್ಲಿ ಪರಿಶೀಲನೆ ಮಾಡಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗುತ್ತದೆ. ಅವರಿಗೆ ಉತ್ತಮ ಮತ್ತು ಆಧುನಿಕ ಉಪಕರಣಗಳಿಗೆ (₹15 ಸಾವಿರ ಮೊತ್ತದ ಕಿಟ್‌) ಬೆಂಬಲ ಒದಗಿಸುವುದು, ಸುಲಭವಾದ ಸಾಲ (ಮೊದಲ ಹಂತದಲ್ಲಿ ₹1 ಲಕ್ಷ, 2ನೇ ಹಂತದಲ್ಲಿ ₹2 ಲಕ್ಷ ಕಡಿಮೆ ಬಡ್ಡಿದರದಲ್ಲಿ ಸಾಲ) ಸೌಲಭ್ಯ, ವಿಶ್ವಕರ್ಮ ಡಿಜಿಟಲ್‌ ಸಬಲೀಕರಣ ಹಾಗೂ ಅವರ ವಸ್ತುಗಳಿಗೆ ಬ್ರ್ಯಾಂಡ್‌ ಪ್ರಚಾರ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸುವುದೇ ಯೋಜನೆಯ ಉದ್ದೇಶವಾಗಿದೆ.

ನೋಂದಣಿಗೆ ಪ್ರೋತ್ಸಾಹ: 

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಸರ್ಕಾರದ ಮಾರ್ಗದರ್ಶನದಡಿ ಇಲಾಖೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಆಯಾ ಕರಕುಶಲ ಕರ್ಮಿಗಳ ಸಂಘಗಳ ಸಭೆ ನಡೆಸಿ ಹೆಚ್ಚೆಚ್ಚು ಕರಕುಶಲಕರ್ಮಿಗಳು ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹ ನೀಡಿದ್ದರ ಫಲವಾಗಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕ ಭೀಮಪ್ಪ ಎನ್‌. ಪತ್ರಿಕೆಗೆ ತಿಳಿಸಿದರು.

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ 2 ವಿಶೇಷ ಗಿಫ್ಟ್‌: 2 ಪ್ರಮುಖ ಯೋಜನೆಗಳಿಗೆ 'ನಮೋ' ಚಾಲನೆ

ದೇಶದ ವಿವಿಧ ರಾಜ್ಯಗಳಲ್ಲಿ ಪಿಎಂ ವಿಶ್ವಕರ್ಮ ನೋಂದಣಿ:

ಸ್ಥಾನ ರಾಜ್ಯ ನೋಂದಣಿ

1 ಕರ್ನಾಟಕ - 19,18,888
2 ಆಂಧ್ರ ಪ್ರದೇಶ - 6,42,164
3 ಪಶ್ಚಿಮ ಬಂಗಾಳ - 5,61,795
4 ಉತ್ತರ ಪ್ರದೇಶ - 4,60,049
5 ಅಸ್ಸಾಂ - 4,41,634
6 ತಮಿಳುನಾಡು- 3,67,719
7 ಬಿಹಾರ - 2,78,268
8 ಒಡಿಶ್ಶಾ - 2,35,845
9 ಗುಜರಾತ್‌ - 2,04,722
10 ರಾಜಸ್ಥಾನ - 1,52,061

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೋಂದಣಿ ಸಂಖ್ಯೆ:

1 ಬೆಳಗಾವಿ - 1,94,381
2 ತುಮಕೂರು - 1,61,287
3 ಬೀದರ್ - 1,38,635
4 ಬೆಂಗಳೂರು ನಗರ - 1,36,007
5 ಚಿತ್ರದುರ್ಗ - 94,9016
6 ಬಳ್ಳಾರಿ - 91,835
7 ಮೈಸೂರು - 91462
8 ಧಾರವಾಡ - 89,376
9 ಚಿಕ್ಕಬಳ್ಳಾಪೂರ - 87,603
10 ಕಲಬುರಗಿ- 77,956

Latest Videos
Follow Us:
Download App:
  • android
  • ios