‘ಭಾರತ ಜಾಗತಿಕ ಮಟ್ಟದಲ್ಲಿ ನಾಯಕತ್ವ ಸ್ಥಾನ ಪಡೆಯಲು ಕರ್ನಾಟಕ ಅತ್ಯಂತ ದೊಡ್ಡ ಕೊಡುಗೆ ನೀಡಲಿದೆ. ದೇಶವನ್ನು ವಿಶ್ವಗುರು ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯಕ್ಕೆ ಕರ್ನಾಟಕ ಆರ್ಥಿಕ, ಸಾಮಾಜಿಕ ಹಾಗೂ ರಕ್ಷಣಾ ವಲಯದಲ್ಲಿನ ಸಾಧನೆ ಮೂಲಕ ಕೊಡುಗೆ ನೀಡಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಫೆ.14): ‘ಭಾರತ ಜಾಗತಿಕ ಮಟ್ಟದಲ್ಲಿ ನಾಯಕತ್ವ ಸ್ಥಾನ ಪಡೆಯಲು ಕರ್ನಾಟಕ ಅತ್ಯಂತ ದೊಡ್ಡ ಕೊಡುಗೆ ನೀಡಲಿದೆ. ದೇಶವನ್ನು ವಿಶ್ವಗುರು ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯಕ್ಕೆ ಕರ್ನಾಟಕ ಆರ್ಥಿಕ, ಸಾಮಾಜಿಕ ಹಾಗೂ ರಕ್ಷಣಾ ವಲಯದಲ್ಲಿನ ಸಾಧನೆ ಮೂಲಕ ಕೊಡುಗೆ ನೀಡಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಮವಾರ ಯಲಹಂಕ ವಾಯುನೆಲೆಯಲ್ಲಿ ನಡೆದ 14ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ಜಾಗತಿಕ ನಾಯಕ ಸ್ಥಾನದಲ್ಲಿ ನಿಲ್ಲಿಸಲು ಶ್ರಮಿಸುತ್ತಿದ್ದಾರೆ. ಈ ಕಾರ್ಯ ಸಾಧನೆಗೆ ಪ್ರಧಾನಿಗಳ ಆಶಯದಂತೆ ಕರ್ನಾಟಕವು ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಹಾಗೂ ರಕ್ಷಣಾ ವಲಯದಲ್ಲಿ ಕೊಡುಗೆ ನೀಡಲಿದೆ. ಈ ನಿಟ್ಟಿನಲ್ಲಿ 1940ರಲ್ಲಿ ಬೆಂಗಳೂರಿನಲ್ಲಿ ಎಚ್‌ಎಎಲ್ ನಿರ್ಮಾಣದ ಸಮಯದಿಂದಲೂ ವಿವಿಧ ಸಂಸ್ಥೆಗಳ ಸ್ಥಾಪನೆ ಮೂಲಕ ಹಿಂದಿನವರು ಮಾಡಿರುವಂತಹ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುತ್ತೇವೆ ಎಂದೂ ಅವರು ಭರವಸೆ ನೀಡಿದ್ದಾರೆ.
ರಕ್ಷಣಾ ರಫ್ತು 25000 ಕೋಟಿಗೆ ಹೆಚ್ಚಿಸುವ ಗುರಿ: ಕೇಂದ್ರ ಸಚಿವ ರಾಜನಾಥ್ ಸಿಂಗ್
ಏರೋಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತಿದೆ. ಕರ್ನಾಟಕದಲ್ಲಿ 1940ರಲ್ಲಿ ಎಚ್‌ಎಎಲ್ ಸ್ಥಾಪನೆಯಾಯಿತು. ಬಳಿಕ 1950ರಲ್ಲಿ ಎನ್‌ಎಎಲ್, ಬಿಎಚ್‌ಇಎಲ್, ಡಿಆರ್‌ಡಿಒ ಎಲ್ಲಾ ಸಂಸ್ಥೆಗಳೂ ಸೇರಿ ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಿದವು. 1960ರಲ್ಲಿ ಬೆಂಗಳೂರಿನಲ್ಲೇ ಇಸ್ರೋ ಪ್ರಾರಂಭವಾಯಿತು. 1970ರ ದಶಕದಲ್ಲಿ ಮೊದಲ ಆರ್ಯಭಟ ಉಪಗ್ರಹ ನಮ್ಮಿಂದಲೇ ಉಡಾವಣೆಯಾಯಿತು. ಇದೀಗ ದೇಶದ ಒಟ್ಟು ಏರೋಸ್ಪೇಸ್ ಉತ್ಪಾದನೆಯಲ್ಲಿ ಶೇ.67ರಷ್ಟುರಾಜ್ಯದಲ್ಲೇ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.
ಇದೇ ರೀತಿ ರಕ್ಷಣಾ ಕ್ಷೇತ್ರ, ಏರೋಸ್ಪೇಸ್ ಕ್ಷೇತ್ರವನ್ನು ಬಲಪಡಿಸಲು ಎಲ್ಲಾ ರೀತಿಯ ಕೆಲಸಗಳನ್ನೂ ಮುಂದುವರೆಸಿದ್ದೇವೆ. ಏರೋಸ್ಪೇಸ್ ನೀತಿಯನ್ನು ರೂಪಿಸಿದ್ದೇವೆ. ಡಿಫೆನ್ಸ್ ಪಾರ್ಕ್ನ ಮೊದಲ ಹಂತ ಪೂರ್ಣಗೊಂಡು ಹಲವಾರು ಸುಪ್ರಸಿದ್ಧ ಕಂಪನಿಗಳು ಕಾರ್ಯಾರಂಭ ಮಾಡಿವೆ. ಸದ್ಯದಲ್ಲೇ 2ನೇ ಹಂತದ ಕೈಗಾರಿಕಾ ಪಾರ್ಕನ್ನೂ ನಿರ್ಮಾಣ ಮಾಡುತ್ತೇವೆ. ಈ ಹಿಂದೆ ರಕ್ಷಣಾ ಉಪಕರಣಗಳಲ್ಲಿ ಶೇ.75ರಷ್ಟುಆಮದು ಮಾಡಿಕೊಳ್ಳುತ್ತಿದ್ದೆವು. ಇದೀಗ ಶೇ.60ರಷ್ಟು ಉಪಕರಣ ನಮ್ಮಲ್ಲೇ ಉತ್ಪಾದನೆ ಮಾಡುವುದಲ್ಲದೆ ರಫ್ತನ್ನೂ ಮಾಡುತ್ತಿದ್ದೇವೆ ಎಂದು ಹೇಳಿದರು.
ಏರೋ ಇಂಡಿಯಾ ಯಶಸ್ವಿ ಆತಿಥ್ಯ: ಕಳೆದ 14 ಬಾರಿಯಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಕೊರೋನಾ ಸಂದರ್ಭದಲ್ಲಿ ಪ್ಯಾರಿಸ್ ಏರ್ ಶೋ ನಡೆಯದಿದ್ದರೂ ನಾವು ಯಶಸ್ವಿಯಾಗಿ ನಡೆಸಿದ್ದೆವು. ಪ್ರಸಕ್ತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಗಾತ್ರ, ಪ್ರದರ್ಶನ ವ್ಯಾಪ್ತಿ ಹೆಚ್ಚಾಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿ ರೂಪುಗೊಂಡಿದೆ ಎಂದರು.
Aero India 2023: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಪ್ರಧಾನಿ ಮೋದಿ ಚಾಲನೆ
ರಾಜ್ಯದಲ್ಲಿ ಏರೋಸ್ಪೇಸ್ ಹಾಗೂ ರಕ್ಷಣಾ ನೀತಿಯು ಜಾರಿಯಲ್ಲಿದ್ದು, ರಕ್ಷಣಾ ಹಾಗೂ ಏರೋಸ್ಪೇಸ್ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು 45 ಸಾವಿರಕ್ಕೂ ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳಲಾಗುವುದು. ತನ್ಮೂಲಕ ಉದ್ಯೋಗ ಸೃಷ್ಟಿಯನ್ನೂ ಮಾಡಲಾಗುವುದು ಎಂದು ಹೇಳಿದರು.
