ನ.1ರಂದು ನಾಡಿನ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪನೆ ಡೌಟು!

ನಾಡಿನ ಶಕ್ತಿಕೇಂದ್ರ ವಿಧಾನಸೌಧದ ಆವರಣದಲ್ಲಿ ನ.1ಕ್ಕೆ ನಾಡದೇವಿ ಭುವನೇಶ್ವರಿಯ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹಾತ್ವಾಕಾಂಕ್ಷೆ ಯೋಜನೆ ಇನ್ನಷ್ಟು ವಿಳಂಬವಾಗಲಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.

Karnataka installation of the Goddess Bhuvaneshwari statue on the premises of the Vidhana Soudha rav

ಸಂಪತ್‌ ತರೀಕೆರೆ

 ಬೆಂಗಳೂರು (ಅ.29) :  ನಾಡಿನ ಶಕ್ತಿಕೇಂದ್ರ ವಿಧಾನಸೌಧದ ಆವರಣದಲ್ಲಿ ನ.1ಕ್ಕೆ ನಾಡದೇವಿ ಭುವನೇಶ್ವರಿಯ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹಾತ್ವಾಕಾಂಕ್ಷೆ ಯೋಜನೆ ಇನ್ನಷ್ಟು ವಿಳಂಬವಾಗಲಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಕರ್ನಾಟಕ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭದ ಹೊತ್ತಿನಲ್ಲೇ ನಾಡದೇವಿ ಭುವನೇಶ್ವರಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ಉದ್ದೇಶದಿಂದ ಜೂನ್‌ 20ರಂದು ವಿಧಾನಸೌಧದ ಪಶ್ಚಿಮ ದಿಕ್ಕಿನ ಗೇಟ್‌ ನಂ.1 ಮತ್ತು 2ರ ನಡುವೆ ಇರುವ ವಾಹನ ನಿಲುಗಡೆ ಸ್ಥಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಪೂಜೆ ನೆರವೇರಿಸಿದ್ದರು. ನ.1ರಂದೇ ಭುವನೇಶ್ವರಿ ದೇವಿ ಪ್ರತಿಮೆ ಉದ್ಘಾಟನೆ ಮಾಡುವುದಾಗಿ ಘೋಷಿಸಿದ್ದರು. ಪ್ರತಿಮೆ ನಿರ್ಮಾಣ ದಿಲ್ಲಿಯಲ್ಲಿ ನಡೆದಿದೆ.

ಆದರೆ, ಭುವನೇಶ್ವರಿ ಪ್ರತಿಮೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ಗೊಂಬೆ ಮನೆ ಕೆ.ಶ್ರೀಧರಮೂರ್ತಿ ನೇತೃತ್ವದ ಶಿಲ್ಪಿಗಳು, ‘ನಿಗದಿತ ಸಮಯಕ್ಕೆ ಪ್ರತಿಮೆ ನಿರ್ಮಾಣ ಪೂರ್ಣಗೊಳ್ಳಿಸಲು ಸಾಧ್ಯವಿಲ್ಲ. ಇನ್ನಷ್ಟು ಕಾಲಾವಕಾಶ ಬೇಕಿದೆ. ತರಾತುರಿಯಲ್ಲಿ ಕಂಚಿನ ಪ್ರತಿಮೆ ನಿರ್ಮಿಸಲು ಪ್ರಯತ್ನಿಸಿದರೆ ಫಿನಿಶಿಂಗ್‌ ಚೊಕ್ಕವಾಗಿ ಬರುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರತಿಮೆ ನಿರ್ಮಾಣದ ಕಾರ್ಯ ಪರಿಶೀಲನೆಗೆಂದು ದೆಹಲಿಗೆ ತೆರಳಿದ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಜಾಲತಾಣದಲ್ಲಿ ಉತ್ತರ ಭಾರತೀಯರಿಂದ ಕನ್ನಡಿಗರ ಅವಹೇಳನವೇ ಟ್ರೆಂಡ್‌!

ಇದಕ್ಕೆ ಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ, ‘ಸಾಧ್ಯವಾದಷ್ಟು ಶೀಘ್ರದಲ್ಲೇ ಯಾವುದೇ ಲೋಪವಿಲ್ಲದೆ ಭುವನೇಶ್ವರಿ ದೇವಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಬೇಕು. ಯಾವುದೇ ತರಾತುರಿಯಿಲ್ಲದಿದ್ದರೂ ನ.1ಕ್ಕೂ ಮೊದಲೇ ಪ್ರತಿಮೆ ನಿರ್ಮಾಣ ಪೂರ್ಣಗೊಂಡರೆ ಒಳ್ಳೆಯದು. ಸಾಧ್ಯವಾಗದಿದ್ದರೆ, ಮುಂದೆ ಏನು ಮಾಡಬೇಕೆಂದು ನಿರ್ಧಾರ ಕೈಗೊಂಡರಾಯಿತು. ಎಲ್ಲಿಯೂ ಪ್ರತಿಮೆ ನಿರ್ಮಾಣದಲ್ಲಿ ರಾಜಿಯಾಗದೆ ಕೆಲಸ ಮಾಡಿ’ ಎಂದು ಸೂಚಿಸಿದ್ದಾರೆ.ಈ ಹಿನ್ನೆಲೆಯಲ್ಲಿ ನ.1ರಂದು ವಿಧಾನಸೌಧದ ಎದುರು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭದ ಹೊತ್ತಿನಲ್ಲಿ ಭುವನೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾಪನೆ ನೆರವೇರುವುದು ಅನುಮಾನ ಎನ್ನುವುದು ಸ್ಪಷ್ಟವಾಗಿದೆ. ಆದರೂ, ಕೊನೆಯ ಕ್ಷಣದಲ್ಲಿ ಬದಲಾವಣೆಯಾದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿವೆ ಇಲಾಖೆ ಮೂಲಗಳು.

21.24 ಕೋಟಿ ರು.ವೆಚ್ಚ: ಅಂದಾಜು 21.24 ಕೋಟಿ ರು.ವೆಚ್ಚದಲ್ಲಿ ನಾಡದೇವಿ ಭುವನೇಶ್ವರಿಯ 25 ಅಡಿಯ ಕಂಚಿನ ಪ್ರತಿಮೆ ನಿರ್ಮಾಣ ಕೈಗೊಳ್ಳಲಾಗಿದೆ. ಇದು ಪ್ರತಿಮೆ ನಿರ್ಮಾಣಕ್ಕೆ ಆಗುವ ಖರ್ಚು ವೆಚ್ಚ. ಇನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಮೆ ಸ್ಥಾಪನೆಗೆ 81 ಲಕ್ಷ ರು. ಟೆಂಡರ್‌ ಅನ್ನು ಎಸ್‌.ಶಿವರಾಜು ಎಂಬುವರಿಗೆ ನೀಡಲಾಗಿದೆ. ಕಂಚಿನ ಪ್ರತಿಮೆ ಎತ್ತರ 25 ಅಡಿ ಇರಲಿದ್ದು, ಕಂಚಿನ ಕರ್ನಾಟಕ ನಕ್ಷೆಯ ಉಬ್ಬು ಶಿಲ್ಪದ ಎತ್ತರ 30 ಅಡಿ ಇದ್ದು, ಒಟ್ಟಾರೆ ನೆಲಮಟ್ಟದಿಂದ 41 ಅಡಿ ಎತ್ತರ ಇರಲಿದೆ.

ಬೆಂಗಳೂರಿನ ಕಂಪನಿಗಳಲ್ಲಿ ಕನ್ನಡಿಗ ಉದ್ಯೋಗಿಗಳೇ ಅಲ್ಪಸಂಖ್ಯಾತರು!

31.50 ಟನ್‌ ತೂಕದ ಪ್ರತಿಮೆ: ಭುವನೇಶ್ವರಿ ಪ್ರತಿಮೆ ಹಾಗೂ ಕರ್ನಾಟಕ ನಕ್ಷೆಯ ಒಟ್ಟು ತೂಕ 31.50 ಟನ್‌ ಇರಲಿದೆ. ಭುವನೇಶ್ವರಿ ದೇವಿ ಪ್ರತಿಷ್ಠಾಪಿಸುವ ಕಲ್ಲುಕಟ್ಟಡದ ಪೀಠಕ್ಕೆ ಗ್ರೇ ಗ್ರಾನೈಟ್‌ ಕಲ್ಲಿನ ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಣ ಪಥದ ಸುತ್ತ ಕರ್ಣಕೂಡ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಿಸಲು ಯೋಜಿಸಲಾಗಿದೆ. ಪ್ರತಿಮೆಯ ಸುತ್ತಲೂ ಫೆಡಸ್ಟಾಲ್‌, ಪಾತ್‌ವೇ ಮತ್ತು ಉದ್ಯಾನವನ ಸೇರಿದಂತೆ 4500 ಚದರ ಮೀ. ವ್ಯಾಪ್ತಿಯನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಹಿತಿ ನೀಡಿದೆ.
 

Latest Videos
Follow Us:
Download App:
  • android
  • ios