ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉದ್ಯೋಗ ಮಾತ್ರವಲ್ಲ, ವ್ಯಾಪಾರ ಹಾಗೂ ಉದ್ಯಮ ಕ್ಷೇತ್ರದ ಅವಕಾಶಗಳಿಂದಲೂ ಕನ್ನಡಿಗರು ವಂಚಿತರಾಗುತ್ತಿದ್ದು, ಉದ್ದಿಮೆಗಳೂ ಪರಭಾಷಿಕರ ಪಾಲಾಗುವಂತಹ ವಾತಾವರಣ ನಿರ್ಮಾಣವಾಗಿದೆ.

ಸಂಪತ್‌ ತರೀಕೆರೆ

 ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉದ್ಯೋಗ ಮಾತ್ರವಲ್ಲ, ವ್ಯಾಪಾರ ಹಾಗೂ ಉದ್ಯಮ ಕ್ಷೇತ್ರದ ಅವಕಾಶಗಳಿಂದಲೂ ಕನ್ನಡಿಗರು ವಂಚಿತರಾಗುತ್ತಿದ್ದು, ಉದ್ದಿಮೆಗಳೂ ಪರಭಾಷಿಕರ ಪಾಲಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಹೀಗೆ ಮುಂದುವರೆದರೆ ಮುಂದೊಂದು ದಿನ ಕನ್ನಡಿಗರು ಕೆಲಸಗಳಿಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡರೂ ಅಚ್ಚರಿಪಡಬೇಕಿಲ್ಲ.

ರಾಜ್ಯದಲ್ಲಿ ಬಹುತೇಕ ಎಲ್ಲ ವ್ಯಾಪಾರಗಳಲ್ಲೂ ಉತ್ತರ ಭಾರತೀಯರ ಪಾರಮ್ಯ ಹೆಚ್ಚುತ್ತಿದ್ದು, ಕೆಲ ಉದ್ಯಮದಲ್ಲಿ ಏಕಸ್ವಾಮ್ಯ ಸಾಧಿಸಿದ್ದಾರೆ. ಸ್ಥಳೀಯ ಕನ್ನಡಿಗರು ಈ ಉದ್ಯಮಗಳಲ್ಲಿ ತೊಡಗಿಕೊಳ್ಳದಂತೆ ಅಕ್ರಮ ಮಾರ್ಗಗಳ ಮೂಲಕ ತಡೆಯುವ ಕುತಂತ್ರಗಳನ್ನು ಗುಜರಾತಿಗಳು, ರಾಜಸ್ಥಾನಿಗಳು ಸೇರಿದಂತೆ ಉತ್ತರ ಭಾರತೀಯ ಉದ್ಯಮಿಗಳು ಮಾಡುತ್ತಿದ್ದಾರೆ ಎಂಬ ಆರೋಪಗಳಿರುವುದು ಸುಳ್ಳಲ್ಲ. ಹೀಗಾಗಿ ಕನ್ನಡಿಗರು ಉದ್ದಿಮೆ ಸ್ಥಾಪಿಸಲು ಸಂಕಷ್ಟ ಎದುರಿಸುವ ಸ್ಥಿತಿ ಹೆಮ್ಮರವಾಗಿ ಬೆಳೆಯ ತೊಡಗಿದೆ.

ಹಬ್ಬ, ಆಹಾರದಲ್ಲೂ ಹಿಂದಿವಾಲಾಗಳ ಸಂಸ್ಕೃತಿ ಹೇರಿಕೊಳ್ಳುತ್ತಿರುವ ಕನ್ನಡಿಗರು: ಬೆಂಗಳೂರಿನ ಮೇಲೆ ಸಾಂಸ್ಕೃತಿಕ ದಾಳಿ!

ರಾಜ್ಯದಲ್ಲಿ ಬಹುತೇಕ ಉದ್ಯೋಗಾವಕಾಶಗಳು ಈಗಾಗಲೇ ಅನ್ಯಭಾಷಿಕರ ಪಾಲಾಗಿವೆ. ಬೆಂಗಳೂರಿನಂತಹ ನಗರದಲ್ಲಿ ಕನ್ನಡಿಗ ಉದ್ಯೋಗಿಗಳೇ ಬಹುತೇಕ ಕಂಪನಿಗಳಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಐಟಿ, ಬಿಟಿ, ಬಿಪಿಒ, ಕೆಪಿಒ ಕಂಪನಿಗಳಲ್ಲಂತೂ ಪರಭಾಷಿಕರದ್ದೇ ಪಾರುಪತ್ಯ. ಕೇವಲ ಉದ್ಯೋಗ ಮಾತ್ರವಲ್ಲ, ಉದ್ಯಮಗಳೂ ಸಹ ಅನ್ಯಭಾಷಿಕರ ಪಾಲಾಗಿವೆ. ಕನ್ನಡಿಗರು ಉದ್ಯಮಿಗಳಾಗದೆ ಕನ್ನಡ ಉಳಿಯಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ನಿರಂತರವಾಗಿ ಹೇಳುತ್ತಲೇ ಇರುತ್ತಾರೆ.

ವ್ಯಾಪಾರಿ ಕೇಂದ್ರ ಪರಭಾಷಿಕರ ಕೈಯಲ್ಲಿ:

ಬೆಂಗಳೂರು ನಗರದಲ್ಲಿ ವ್ಯಾಪಾರಿ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಬಳೆಪೇಟೆ, ಚಿಕ್ಕಪೇಟೆ, ಅವೆನ್ಯೂರಸ್ತೆ, ಎಸ್‌.ಪಿ.ರಸ್ತೆಗಳು ಸೇರಿದಂತೆ ವಿವಿಧ ವ್ಯಾಪಾರಿ ಪ್ರದೇಶಗಳಲ್ಲಿ ಕನ್ನಡಿಗ ವ್ಯಾಪಾರಿಗಳೇ ಇಲ್ಲ. ಜವಳಿ ಅಂಗಡಿ, ಉಡುಗೊರೆ ಅಥವಾ ಫ್ಯಾನ್ಸಿ ಸ್ಟೋರ್‌, ಪುಸ್ತಕದ ಅಂಗಡಿ, ಎಲೆಕ್ಟ್ರಿಕಲ್‌, ಮೊಬೈಲ್ಸ್‌, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಮಾರಾಟ ಹಾಗೂ ಸರ್ವೀಸ್‌ ಸೇರಿದಂತೆ ಪ್ರತಿಯೊಂದು ಅಂಗಡಿಗಳಲ್ಲೂ ಉತ್ತರ ಭಾರತೀಯರೇ ತುಂಬಿದ್ದಾರೆ.

ವ್ಯಾಪಾರ ಕೇಂದ್ರ ಪ್ರದೇಶಗಳಿಂದ ಕನ್ನಡಿಗರು ಗಂಟುಮೂಟೆ ಕಟ್ಟಿಕೊಂಡು ಹೊರವಲಯಗಳಿಗೆ ವಲಸೆ ಹೋಗುವಂತಾಗಿದೆ. ಇನ್ನು ನಗರದ ಹೊರ ವಲಯದಲ್ಲೂ ವ್ಯಾಪಾರಿ ಕ್ಷೇತ್ರದಲ್ಲಿ ಉತ್ತರ ಭಾರತೀಯರದ್ದೇ ಮೇಲುಗೈ. ಉತ್ತರ ಭಾರತೀಯ ಹಾಗೂ ಚೀನಾ ಕಂಪನಿಗಳೊಂದಿಗೆ ಸಂಪರ್ಕದಿಂದಾಗಿ ಸ್ಥಳೀಯ ವ್ಯಾಪಾರಿಗಳಿಗಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜೀವನ ಕಟ್ಟಿಕೊಳ್ಳಲು ಕನ್ನಡಿಗ ವ್ಯಾಪಾರಿಗಳು ಒದ್ದಾಡುವ ಪರಿಸ್ಥಿತಿಗೆ ತಳ್ಳಲ್ಪಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.

ಕೇವಲ ವ್ಯಾಪಾರವಲ್ಲ, ಟೀ ಅಂಗಡಿಗಳು, ಹೋಟೆಲ್‌ಗಳಲ್ಲಿ ಕ್ಲೀನರ್‌ಗಳು, ಸಪ್ಲೈಯರ್‌ಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮುಂದೆ ಬೀಡ ಕಟ್ಟುವವರು, ಬೀದಿ ಬದಿಯಲ್ಲಿ ಕಡ್ಲೆಕಾಯಿ ಮಾರುವವರು, ಗೋಲ್‌ಗಪ್ಪ, ಪಾನಿಪೂರಿ ಮಾಡುವವರು, ಮನೆ ಕೆಲಸದವರು, ರಸ್ತೆ, ಕಟ್ಟಡ ನಿರ್ಮಾಣ ಹೀಗೆ ಎಲ್ಲೆಡೆಯೂ ಉತ್ತರ ಭಾರತೀಯರದ್ದೇ ಮೇಲುಗೈ. ಹೋಟೆಲ್‌ ಉದ್ಯಮದಲ್ಲೂ ಸ್ಥಳೀಯ ನಾಟಿ ಸ್ಟೈಲ್‌ ಹೋಗಿ, ನಾಯ್ಡು ಹೋಟೆಲ್, ಉತ್ತರ ಭಾರತ ಶೈಲಿ ಹೋಟೆಲ್‌, ಪಂಜಾಬಿ ಢಾಬಾ, ಮರಾಠಿ ಶೈಲಿ ಹೋಟೆಲ್‌ಗಳು ಹಾದಿಬೀದಿಯಲ್ಲೂ ತಲೆ ಎತ್ತಿವೆ.

ಕಾರ್ಮಿಕ ಕಾಯ್ದೆ ಉಲ್ಲಂಘಿಸಿ ಪರಭಾಷಿಕ ನೌಕರರ ನೇಮಕ

ಪರಿಷ್ಕೃತ ಸರೋಜಿನಿ ಮಹಿಷಿ ವರದಿ ನಮ್ಮಲ್ಲಿದೆ. ಕನ್ನಡಿಗರ ಮೇಲೆ ಅವೈಜ್ಞಾನಿಕ ಮತ್ತು ಅಸಹಜ ವಲಸೆಯನ್ನು ಹೇರಲಾಗುತ್ತಿದೆ. ಒಂದು ರಾಜ್ಯದ ಸಂಪನ್ಮೂಲಗಳಿಗೆ ತಕ್ಕಂತೆ ಅಲ್ಲಿಯ ಜನಸಂಖ್ಯೆ ಪ್ರಮಾಣ ಇರುತ್ತದೆ. ಅದನ್ನು ಮೂಲೆಗೆ ತಳ್ಳುವ ರೀತಿಯಲ್ಲಿ ಬೇರೆ ರಾಜ್ಯದವರು ವಲಸೆ ಬರುವುದು ಅವೈಜ್ಞಾನಿಕ ವಲಸೆ ಎನ್ನಬಹುದು. ಉದಾ: ಕನ್ನಡ ನಾಡಿನಲ್ಲಿ ಒಬ್ಬ ವ್ಯಕ್ತಿ ಒಂದು ಕಂಪನಿ ತೆರೆಯುತ್ತಾನೆ. ಅಲ್ಲಿ 2 ಸಾವಿರ ಉದ್ಯೋಗಾವಕಾಶ ಇದ್ದರೆ, ಎ ಗ್ರೂಪ್‌ನಲ್ಲಿ ಶೇ.60 ಕನ್ನಡಿಗರಿಗೆ, ಬಿ ಗ್ರೂಪ್‌ನಲ್ಲಿ ಶೇ.80, ಸಿ ಮತ್ತು ಡಿ ಗ್ರೂಪಿನಲ್ಲಿ ಶೇ.80 ಅಥವಾ ಶೇ.100 ಹುದ್ದೆಗಳನ್ನು ಕನ್ನಡಿಗರಿಗೆ ಕೊಡಬೇಕೆಂಬ ಅನುಪಾತವಿದೆ.

ಆದರೆ, ಇಂದು ಒಬ್ಬ ವಾಚ್‌ಮನ್‌ನಿಂದ ಐಟಿ-ಬಿಟಿ ಕಂಪನಿಗಳ ಎ ಗ್ರೇಡ್‌ ಹುದ್ದೆಯವರೆಗೂ ಪ್ರತಿಯೊಂದಕ್ಕೂ ಉತ್ತರ ಭಾರತೀಯರನ್ನೇ ಕರೆದುಕೊಳ್ಳುತ್ತಿದ್ದಾರೆ. ಕಾರಣ ಇಷ್ಟೆ; ಕಡಿಮೆ ಹಣಕ್ಕೆ ಕೆಲಸಕ್ಕೆ ಬರುತ್ತಾರೆ. ಕಾರ್ಮಿಕರ ಸಂಘಟನೆ ಕಟ್ಟಿಕೊಳ್ಳುವುದಿಲ್ಲ. ರಜೆ ಹಾಕುವುದಿಲ್ಲ. ಕೆಲಸ ಮಾಡುತ್ತಿರುತ್ತಾರೆ ಎಂಬಿತ್ಯಾದಿ ಕಾರಣಗಳನ್ನು ಕೊಡುತ್ತಾರೆ. ಹಾಗೆಯೇ ಕನ್ನಡಿಗರ ಬಗ್ಗೆ ದೂರುತ್ತಾರೆ. ಸ್ಥಳೀಯರು ಸೋಮಾರಿಗಳು, ಇಲ್ಲಸಲ್ಲದ ರಾಜಕೀಯ ಮಾಡುತ್ತಾರೆ ಇತ್ಯಾದಿ. ಅಂದರೆ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಕಾರ್ಮಿಕರನ್ನು ಸೇರಿಸಿಕೊಳ್ಳುತ್ತಾರೆ. ಉತ್ತರ ಭಾರತದವರು ಬಂದರೆ ನಮ್ಮ ಎಲ್ಲ ವೃತ್ತಿಗಳನ್ನು, ಉದ್ಯೋಗಗಳನ್ನು ಕಸಿದುಕೊಳ್ಳುತ್ತಾರೆ. ಇದು ಈಗ ನಡೆಯುತ್ತಿದೆ.

'ಬೆಂಗಳೂರಿನಲ್ಲಿ ಹಿಂದಿ ಆಡಳಿತ ಭಾಷೆಯಾದ್ರೂ ಆಶ್ಚರ್ಯವೇನಿಲ್ಲ..' ಕಿರಿಕ್‌ ಕೀರ್ತಿ ಹೀಗೆ ಹೇಳಿದ್ದು ಯಾಕೆ?

ತ್ರಿಭಾಷಾ ನೀತಿಯ ತ್ರಿಶೂಲ!

ಭಾಷೆಗೆ ಸಂಬಂಧಪಟ್ಟಂತೆ ತಮಿಳುನಾಡಿನಲ್ಲಿ ದ್ವಿಭಾಷಾ ನೀತಿ ಇದೆ. ಹಾಗಾಗಿ ಅಲ್ಲಿ ಹಿಂದಿ ಸೇರುವುದು ಕಷ್ಟ. ಕರ್ನಾಟಕದಲ್ಲಿ ತ್ರಿಭಾಷಾ ನೀತಿ ಇದ್ದು ಸುಲಭವಾಗಿ ಹಿಂದಿ ಎಂಟ್ರಿ ಆಗುತ್ತಿದೆ. ‘ತ್ರಿಭಾಷಾ ಸೂತ್ರವೋ ತ್ರಿಶೂಲವೋ’ ಎಂದು ಕುವೆಂಪು ಅವರು ಮೊದಲೇ ಹೇಳಿದ್ದರು. ಇದನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಇದು ಇಂದು ಎಲ್ಲಿಗೆ ಬಂದಿದೆಯೆಂದರೆ, ಕನ್ನಡವನ್ನು ತೆಗೆದು ಹೊರಗೆ ಎಸೆಯುತ್ತಿದೆ. ಕನ್ನಡಿಗರೇ ಮೂರು ಭಾಷೆಗಳನ್ನು ಕಲಿಯುತ್ತಿದ್ದಾರೆ. ತಾಯ್ನಾಡಿನಲ್ಲೇ ಪರಕೀಯರಾಗುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ವಲಸೆಗೆ ಕಡಿವಾಣ ಬೇಕು

ವಲಸೆಯನ್ನು ನಾವು ವಿರೋಧಿಸುವುದಿಲ್ಲ. ಆದರೆ, ಅವೈಜ್ಞಾನಿಕ ಮತ್ತು ಅಸಹಜ ವಲಸೆಯನ್ನು ನಮ್ಮ ಮೇಲೆ ಹೇರಬೇಡಿ. ಕಾರ್ಮಿಕ ಕಾನೂನು ಉಲ್ಲಂಘಿಸಿದ ರೀತಿಯಲ್ಲಿ ಉತ್ತರ ಭಾರತೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಪರಿಷ್ಕೃತ ಸರೋಜಿನಿ ಮಹಿಷಿ ವರದಿ ಇದೆ. ಅದನ್ನು ಜಾರಿಗೊಳಿಸಿ ಇದಕ್ಕೆಲ್ಲಾ ಕಡಿವಾಣ ಹಾಕಬೇಕು.

- ಎಸ್‌.ಜಿ.ಸಿದ್ದರಾಮಯ್ಯ, ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕೂಲಿ ಕೆಲಸವನ್ನೂ ಬಿಟ್ಟಿಲ್ಲ

ಯಾವ ಕ್ಷೇತ್ರ ಅಂತೇನಿಲ್ಲ, ಎಲ್ಲ ಕ್ಷೇತ್ರದಲ್ಲೂ ಉತ್ತರ ಭಾರತೀಯರೇ ತುಂಬಿಕೊಂಡಿದ್ದಾರೆ. ಎಲ್ಲ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಕಾರ್ಪೆಂಟ್ರಿ, ಮೇಸ್ತ್ರಿ ಕೆಲಸಕ್ಕೂ ಬಂದಿದ್ದಾರೆ. ಕೂಲಿ ಕೆಲಸವನ್ನೂ ಬಿಟ್ಟಿಲ್ಲ. ಇಲ್ಲಿನ ಮೂಲ ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದು, ಅವರಿಗೆ ಕೆಲಸ ಕೊಡುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು.

-ಪ್ರವೀಣ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

ಅನ್ನದ ಭಾಷೆಯಾಗಲಿ

ಕನ್ನಡ ದುಡ್ಡಿನ ಭಾಷೆಯಾಗಬೇಕು. ಕನ್ನಡಿಗರು ಬಂಡವಾಳಶಾಹಿಗಳಾದರೆ ಮಾತ್ರ ಕನ್ನಡವನ್ನು ಉಳಿಸಬಹುದು. ಆದರೆ, ರಾಜ್ಯದಲ್ಲಿ ಕನ್ನಡದ ಉದ್ಯಮಿಗಳಿಗಿಂತಲೂ ರಾಜಸ್ಥಾನಿ, ಗುಜರಾತಿಗಳೇ ಪ್ರಬಲ ಉದ್ಯಮಿಗಳಾಗಿ ಬೆಳೆಯುತ್ತಿದ್ದಾರೆ. ಇವರ ಒಗ್ಗಟ್ಟು ಹೇಗಿದೆಯೆಂದರೆ ದರ ಪೈಪೋಟಿಯಲ್ಲಿ ಸ್ಥಳೀಯ ಉದ್ಯಮಿಗಳು ದಿವಾಳಿಯಾಗುತ್ತಿದ್ದಾರೆ.

- ರೂಪೇಶ್‌ ರಾಜಣ್ಣ, ಕನ್ನಡಪರ ಹೋರಾಟಗಾರ