: ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಫೈರಿಂಗ್ ಪ್ರಕರಣದ ಕುರಿತು ಮಹತ್ವದ ಹೇಳಿಕೆ ನೀಡಿದರು. ಈ ಫೈರಿಂಗ್ ಸುಳ್ಳು ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಸಿಐಡಿ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು
ಬೆಂಗಳೂರು (ಏ.16): ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಫೈರಿಂಗ್ ಪ್ರಕರಣದ ಕುರಿತು ಮಹತ್ವದ ಹೇಳಿಕೆ ನೀಡಿದರು. ಈ ಫೈರಿಂಗ್ ಸುಳ್ಳು ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಸಿಐಡಿ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು
ತನಿಖೆ ಬಳಿಕ ಸಂತ್ಯಾಂಶ ಬಯಲಿಗೆ: ಈ ಘಟನೆ ಆಕಸ್ಮಿಕವೋ ಅಥವಾ ನಿಜವಾದ ದಾಳಿಯೋ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. ಹಿರಿಯ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ, ಫಲಿತಾಂಶಕ್ಕಾಗಿ ಕಾಯೋಣ ಎಂದು ಅವರು ಹೇಳಿದರು. ಇದೇ ವೇಳೆ ಒಕ್ಕಲಿಗರ ಸಭೆ ಮತ್ತು ಸಾಮಾಜಿಕ ನ್ಯಾಯದ ಕುರಿತ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ನಿನ್ನ ಒಕ್ಕಲಿಗರ ಸಭೆ ನಡೆದಿದೆ ಎಂಬುದು ಮಾತ್ರ ಗೊತ್ತು, ಆದರೆ ಅಲ್ಲಾದ ಚರ್ಚೆಯ ವಿವರ ತಿಳಿದಿಲ್ಲ. ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಬಾರದೆಂದು ಚರ್ಚಿಸಿದ್ದಾರೆ ಎಂದರು. ಈ ವೇಳೆ 'ಒಕ್ಕಲಿಗರ ಸಭೆ ಸರಿಯಾದರೆ, ದಲಿತರ ಸಭೆ ಯಾಕೆ ತಪ್ಪು' ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ತಪ್ಪು-ಸರಿ ಎಂದು ಹೇಳಲು ನನಗೆ ಸಾಧ್ಯವಿಲ್ಲ, ಅದನ್ನು ನಾನು ನಿರ್ಧರಿಸಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ಪ್ರಕರಣ:
ದಾವಣಗೆರೆಯಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಥಳಿತದ ಕುರಿತಾಗಿಯೂ ಪರಮೇಶ್ವರ್ ಮಾತನಾಡಿದರು. 'ಪೊಲೀಸರು ಈಗಾಗಲೇ ಕ್ರಮಕ್ಕೆ ಮುಂದಾಗಿದ್ದಾರೆ. ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರ ಮೇಲಿನ ಹಲ್ಲೆ, ಅತ್ಯಾಚಾರದಂತಹ ಘಟನೆಗಳಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ.ಇಂತಹ ಘಟನೆಗಳ ಬಗ್ಗೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಿಎಂ ಮೆಚ್ಚಿಸಲು ಈಶ್ವರ್ ಖಂಡ್ರೆ ಕಸರತ್ತು, ರಾತ್ರೋರಾತ್ರಿ ಸಸಿ ನೆಡುವ ವಿಡಿಯೋ ಮಾಡಿದ ಪತ್ರಕರ್ತನ ಮೇಲೆ ಹಲ್ಲೆ!
ಕರ್ನಾಟಕ ಪೊಲೀಸ್‌ಗೆ ಟಾಟಾ ಟ್ರಸ್ಟ್‌ನಿಂದ ಮನ್ನಣೆ:
ಟಾಟಾ ಟ್ರಸ್ಟ್ ನಡೆಸಿದ ಸರ್ವೇಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಗೆ 6.8 ಅಂಕಗಳನ್ನು ನೀಡಲಾಗಿದ್ದು, ರಾಜ್ಯವು ದೇಶದಲ್ಲಿ ಮೊದಲ ಸ್ಥಾನ ಪಡೆದಿದೆ. ಇದು ನಾವು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಪರಮೇಶ್ವರ್ ಹೆಮ್ಮೆಯಿಂದ ಹೇಳಿದರು.
ನಾಳೆ ಕ್ಯಾಬಿನೆಟ್ ಸಭೆ ಮತ್ತು ಶಾಮನೂರು ವಿವಾದ:
ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ವರದಿಯ ಮಂಡಣೆಯ ಬಳಿಕ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು. 'ವಾರದ ಸಮಯ ಕೇಳಿದ್ದೆವು, ಸಿಎಂ ಅದನ್ನು ಒಪ್ಪಿದ್ದಾರೆ. ಅಂತಿಮ ತೀರ್ಮಾನವನ್ನು ಚರ್ಚೆಯ ಬಳಿಕ ತೆಗೆದುಕೊಳ್ಳಲಾಗುವುದು" ಎಂದರು. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸಿಡಿಮಿಡಿಗೊಂಡ ಪರಮೇಶ್ವರ್, 'ಯಾರೇನು ಹೇಳಿದರೂ ನಾನು ಉತ್ತರಿಸಲು ಸಾಧ್ಯವಿಲ್ಲ. ಸಂಪುಟದಲ್ಲಿ ಎಲ್ಲರೂ ತಮ್ಮ ಸಮುದಾಯದ ಅಭಿಪ್ರಾಯವನ್ನು ಆಧರಿಸಿ ಮಾತನಾಡುತ್ತಾರೆ. ಚರ್ಚೆಯ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜಾತಿಗಣತಿ ವರದಿ: ಏನಿದೆ ಗೊತ್ತಿಲ್ಲ, ಓದಿ ಪ್ರತಿಕ್ರಿಯಿಸುವೆ: ಗೃಹಸಚಿವ
ನಾಳೆಯ ಅಧಿವೇಶನದ ನಿರೀಕ್ಷೆ: ಹುಬ್ಬಳ್ಳಿ ಫೈರಿಂಗ್ ಪ್ರಕರಣದ ಸಿಐಡಿ ತನಿಖೆ, ಒಕ್ಕಲಿಗ ಮತ್ತು ದಲಿತ ಸಮುದಾಯದ ಚರ್ಚೆಗಳು, ದಾವಣಗೆರೆಯ ಹಲ್ಲೆ ಪ್ರಕರಣದ ಕಠಿಣ ಕ್ರಮಗಳು ಹಾಗೂ ಕ್ಯಾಬಿನೆಟ್ ಸಭೆಯ ತೀರ್ಮಾನಗಳು ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಕುತೂಹಲವನ್ನು ಮೂಡಿಸಿವೆ. ನಾಳೆಯ ಅಧಿವೇಶನದಲ್ಲಿ ಈ ವಿಷಯಗಳ ಕುರಿತಾದ ಚರ್ಚೆಯ ಫಲಿತಾಂಶಕ್ಕಾಗಿ ಎಲ್ಲರ ಚಿತ್ತ ನೆಟ್ಟಿದೆ.