Halal Controversy ಹೊಸತೊಡಕಿನಲ್ಲಿ ಬಳಸಬೇಡಿ, ಹಲಾಲ್‌ ಮಾಂಸ ಬಹಿಷ್ಕರಿಸಲು ಹಿಂದೂ ಸಂಘಟನೆಗಳ ಕರೆ!

- ಮುಸ್ಲಿಮರಿಂದ ಪ್ರಾಣಿವಧೆ ವೇಳೆ ಮೆಕ್ಕಾಗೆ ಪ್ರಾರ್ಥನೆ
- ನಂತರ ಹಿಂದೂ ದೇವರಿಗೆ ಅರ್ಪಣೆ ಹೇಗೆ?
- ಹಲಾಲ್‌ ಎಂಬುದು ಆರ್ಥಿಕ ಜಿಹಾದ್‌: ರವಿ

Karnataka Hindu Groups call to boycott halal meat while launching a nationwide campaign ckm

ಬೆಂಗಳೂರು(ಮಾ.30): ಹಿಜಾಬ್‌, ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಬಳಿಕ, ಹಲಾಲ್‌ ಬಾಯ್ಕಾಟ್‌ ಅಭಿಯಾನ ರಾಜ್ಯದಲ್ಲಿ ಮುಂಚೂಣಿಗೆ ಬಂದಿದೆ. ಹಲಾಲ್‌ ಮಾಡಿ ಕತ್ತರಿಸಿರುವ ಕೋಳಿ, ಕುರಿ ಹಾಗೂ ಮೇಕೆ ಮಾಂಸವನ್ನು ಬಹಿಷ್ಕರಿಸಿ ಕೆಲ ಹಿಂದೂ ಪರ ಸಂಘಟನೆಗಳು ‘ಹಲಾಲ್‌ ಬಾಯ್ಕಾಟ್‌’ ಅಭಿಯಾನಕ್ಕೆ ಕರೆಕೊಟ್ಟಿವೆ. ಹಿಂದೂಗಳು ಯಾವುದೇ ಕಾರಣಕ್ಕೂ ಮುಸ್ಲಿಂ ವರ್ತಕರ ಮಳಿಗೆಗಳಲ್ಲಿ ಹಲಾಲ್‌ ಕಟ್‌ ಮಾಂಸವನ್ನು ಖರೀದಿಸಬಾರದು ಎಂದು ಮನವಿ ಮಾಡಿವೆ.

ಈ ಕುರಿತು ಹಿಂದೂ ಜನ ಜಾಗೃತಿ ಸಮಿತಿಯ ಮೋಹನ್‌ ಗೌಡ ವಿಡಿಯೋ ಬಿಡುಗಡೆ ಮಾಡಿದ್ದು,‘ಹಲಾಲ… ಮಾಂಸವನ್ನು ತಿನ್ನುವುದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಮುಸ್ಲಿಮರು ಪ್ರಾಣಿಯನ್ನು ತುಂಡರಿಸಿದಾಗ ಅದರ ಮುಖವನ್ನು ಮೆಕ್ಕಾ ಕಡೆಗೆ ತಿರುಗಿಸಿ ವಿವಿಧ ಪ್ರಾರ್ಥನೆ ಸಲ್ಲಿಸುತ್ತಾರೆ. ಅದೇ ಮಾಂಸವನ್ನು ಹಿಂದೂ ದೇವತೆಗಳಿಗೆ ಅರ್ಪಿಸಲು ಬರುವುದಿಲ್ಲ. ಹಲಾಲ… ಮಾಂಸ ನಿಷೇಧಕ್ಕೆ ಆಗ್ರಹಿಸಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಸುತ್ತಿದ್ದೇವೆ. ಮುಸ್ಲಿಂ ಅಂಗಡಿಯವರಿಂದ ಮಾಂಸವನ್ನು ಖರೀದಿಸಬೇಡಿ’ ಎಂದು ಹಿಂದುಗಳನ್ನು ಒತ್ತಾಯಿಸಿದ್ದಾರೆ.

ಮಾರಾಟ ಮಾಡುವ ಮಾಂಸ ಯಾವುದು? ಬೋರ್ಡ್ ಹಾಕೋದು ಕಡ್ಡಾಯ

ಭಾರತದಲ್ಲಿ ಹಲಾಲ… ಪ್ರಮಾಣ ಪತ್ರದ ಮೂಲಕ ಸಾವಿರಾರು ಕೋಟಿ ರು. ವ್ಯವಹಾರ ನಡೆಯುತ್ತಿದ್ದು, ಅದರ ಹಣದಿಂದ ದೇಶವನ್ನು ಇಸ್ಲಾಮಿಕ್‌ ಕೇಂದ್ರವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ಹಣವನ್ನು ದೇಶ ವಿರೋಧಿ ಚಟುವಟಿಕೆ ನಡೆಸಲು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಪದ್ಧತಿಯ ಪ್ರಕಾರ ಜಟ್ಕಾ ಮಾಂಸವನ್ನು ಬಳಸಬೇಕು ಎಂದು ಮನವಿ ಮಾಡಿದ್ದಾರೆ.

ನಾಟಿ ಕೋಳಿ ಬಲಿ:
ಬೆಂಗಳೂರಿನ ಹಿಂದವೀ ಮೀಟ್‌ ಮಾರ್ಕೆಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ಕಾಳಿ (ಋುಷಿಕೇಶ) ಸ್ವಾಮೀಜಿ ಸ್ವತಃ ದೇವರ ಫೋಟೊ ಮುಂಭಾಗ ನಾಟಿ ಕೋಳಿ ಕತ್ತರಿಸಿ ಹಲಾಲ್‌ ಬಾಯ್ಕಾಟ್‌ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ.

ಅಯ್ಯಪ್ಪನ ಪ್ರಸಾದದಲ್ಲಿ ಹಲಾಲ್ ಬೆಲ್ಲ, ಕೋರ್ಟ್‌ ಮುಂದೆ TDB ಸ್ಪಷ್ಟನೆ

ಈ ವೇಳೆ ಮಾತನಾಡಿದ ಅವರು, ‘ಹಲಾಲ… ಮಾಡುವಾಗ ಮೆಕ್ಕಾ ಕಡೆ ಮುಖ ತಿರುಗಿಸಲಾಗುತ್ತದೆ. ಕುತ್ತಿಗೆಯ ಒಂದು ನರವನ್ನು ಮಾತ್ರ ಕತ್ತರಿಸಿ ಪ್ರಾಣ ತೆಗೆಯಬೇಕು ಎಂಬ ನಿಯಮವಿದೆ. ಈ ಪದ್ಧತಿ ಪ್ರಕಾರ ಮಾಡಿದ ಮೇಲೆ ಆ ಮಾಂಸವು ಅಲ್ಲಾಗೆ ಅರ್ಪಿಸಿದಂತೆ. ಇದನ್ನ ತಂದು ಹಿಂದೂಗಳು ಹಬ್ಬ ಹರಿದಿನಗಳನ್ನ ಮಾಡಬೇಕಾದ ಸ್ಥಿತಿ ಇದೆ. ಹಲಾಲ… ಬಾಯ್ಕಾಟ್‌ ಅಭಿಯಾನ ರಾಜ್ಯಾದ್ಯಂತ ಮಾಡುತ್ತೇವೆ. ಮುಸ್ಲಿಂ ಧಾರ್ಮಿಕ ಗುರುಗಳು, ಅವರ ಭಕ್ತರಿಗೆ ತಮ್ಮ ಆಹಾರ ನಿಯಮ ಹೀಗೆ ಇರಬೇಕು ಅಂತ ಹೇಳುವಾಗ, ಹಿಂದೂ ಗುರುಗಳು ತಮ್ಮ ಭಕ್ತರಿಗೆ ಸೂಕ್ತ ವಿಧಾನ ಇರಬೇಕು ಅಂತ ಹೇಳುವ ಅವಶ್ಯಕತೆ ಇದೆ. ಹಿಂದೂ ಧರ್ಮದಲ್ಲಿ ಅನೇಕ ಯತಿಗಳು ಇದ್ದು, ಅವರು ತಮ್ಮ ಭಕ್ತರಿಗೆ ಹಲಾಲ್‌ ಮಾಂಸ ಖರೀದಿಸದಂತೆ ಸಂದೇಶ ನೀಡಬೇಕು’ ಎಂದು ಒತ್ತಾಯಿಸಿದರು.

ಹಿಂದೂ ಮಾಂಸದಂಗಡಿಗೆ ಸಹಕಾರ:
ಹಿಂದೂಗಳು ಜಟ್ಕಾ ಕಟ್‌ ಮಾಂಸದ ಅಂಗಡಿಗಳನ್ನು ತೆರೆಯಲು ಮುಂದಾದರೆ ಅವರಿಗೆ ಅಗತ್ಯ ಸಹಕಾರ ಕೊಡಲಾಗುವುದು. ಹಿಂದವೀ ಮೀಟ್‌ ಮಾರ್ಚ್‌ನಿಂದ ಉಚಿತ ತರಬೇತಿ ಕೊಡುತ್ತೇವೆ. ಅನೇಕ ಹೋಟೆಲ್‌ಗಳಲ್ಲಿ ಹಲಾಲ… ಕಟ್‌ ಎಂದು ಫಲಕ ಹಾಕಿರುತ್ತಾರೆ. ಇದರ ಅಗತ್ಯ ಏನಿದೆ ಎಂದು ಕಿಡಿಕಾರಿದ ಸ್ವಾಮೀಜಿ, ಫಲಕಗಳನ್ನು ಕಿತ್ತು ಬಿಸಾಕಬೇಕು ಎಂದು ಹಿಂದೂ ಮಾಂಸಾಹಾರ ಹೋಟೆಲ್‌ಗಳಿಗೆ ಕರೆ ನೀಡಿದರು.

ಅಭಿಯಾನಕ್ಕೆ ಪರ, ವಿರುದ್ಧ ವಾದ
ಹಿಂದೂ ಜನಜಾಗೃತಿ ಸಮಿತಿಯ ವಿಡಿಯೋ ಸಾಮಾಜಿಕ ಜಾಲತಾಣಗಳ ವೈರಲ್‌ ಆಗಿದೆ. ಇದರ ಬಗ್ಗೆ ಪರ-ವಿರೋಧ ಎರಡೂ ಚರ್ಚೆಗಳು ಬಂದಿದೆ. ಹಲಾಲ್‌ ಕ್ರಮದ ಮಾಂಸ ಹೆಚ್ಚು ರುಚಿಕರವಾಗಿರುತ್ತದೆ ಮತ್ತು ಉತ್ತಮವಾಗಿದೆ ಎಂದು ಕೆಲವರು ಅಭಿಯಾನವನ್ನು ಅಲ್ಲಗಳೆದಿದ್ದಾರೆ. ಮಾಂಸ ಯಾವುದಾದರೇನು? ಹಲಾಲ್‌, ಜಟ್ಕಾ ಎಲ್ಲಾ ಒಂದೇ ಮಾಂಸವೇ ತಾನೇ ಎಂದಿದ್ದಾರೆ. ಹಿಜಾಬ್‌, ಜಾತ್ರೆಗಳಲ್ಲಿ ಮಾರುಕಟ್ಟೆಬಹಿಷ್ಕಾರ ನಂತರ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಹೊಸ ಹಾದಿ ಇದು ಎಂದು ಕೆಲವರು ಕಿಡಿಕಾರಿದ್ದಾರೆ.

ಹೊಸತೊಡಕಿನಲ್ಲಿ ಬಳಸಬೇಡಿ
ದಕ್ಷಿಣ ಕರ್ನಾಟಕದ ಹಲವು ಜಿಲೆಗಳಲ್ಲಿ ಯುಗಾದಿ ಹಬ್ಬದ ಮರುದಿನ ಹೊಸತೊಡಕು ಎಂದು ಮಾಂಸದ ಅಡುಗೆ ಮಾಡಲಾಗುತ್ತದೆ. ಹಲವರು ನೈವೇದ್ಯ ಮಾಡಿ ದೇವರಿಗೆ ಮಾಂಸ ಅರ್ಪಣೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹಲಾಲ್‌ ಮಾಡಿರುವ ಮಾಂಸ ಬಳಸಿದರೆ ಇಸ್ಲಾಂ ದೇವರಿಗೆ ಅರ್ಪಣೆ ಮಾಡಿರುವ ಮಾಂಸವನ್ನು ತಂದು ನಮ್ಮ ದೇವರಿಗೆ ಬಳಸಿದಂತಾಗುತ್ತದೆ. ಹೀಗಾಗಿ, ಹಲಾಲ್‌ ಬದಲು ಹಿಂದೂ ಮಾಂಸದ ಅಂಗಡಿಯಲ್ಲಿ ಜಟ್ಕಾ ಕಟ್‌ ಮಾಂಸವನ್ನು ಖರೀದಿ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಹೇಳುತ್ತಾರೆ.

ಜಟ್ಕಾ ಕಟ್‌ ಎಂದರೇನು?
ಜಟ್ಕಾ ಕಟ್‌ ವಿಧಾನದಲ್ಲಿ ಪ್ರಾಣಿ, ಪಕ್ಷಿಗೆ ಯಾವುದೇ ರೀತಿಯ ಹಿಂಸೆಯಾಗದಂತೆ ಒಮ್ಮೆಗೆ ಅದರ ಕತ್ತನ್ನು ಕತ್ತರಿಸಬೇಕು. ಯಾವುದೇ ಕಾರಣಕ್ಕೂ ಕತ್ತನ್ನು ಅರ್ಧ ಭಾಗ ಸೀಳಿ ಪ್ರಾಣಿಗೆ ಹಿಂಸೆ ನೀಡುವಂತಿಲ್ಲ. ಹಿಂದು ವ್ಯಕ್ತಿಯು, ಹಿಂದು ದೇವರ ಸ್ಮರಣೆಯೊಂದಿಗೆ ಬಲಿ ಕೊಡಬೇಕು.

ಹಲಾಲ್‌ ಕಟ್‌ ಎಂದರೇನು?
ಪ್ರಾಣಿ, ಪಕ್ಷಿಯನ್ನು ಕೊಲ್ಲುವುದಕ್ಕೂ ಮುನ್ನ ಪಾಲಿಸುವ ನಿಯಮವೇ ಹಲಾಲ್‌. ಮೊದಲು ಪ್ರಾಣಿಗೆ ನೀರು ಕುಡಿಸಿ, ಬಳಿಕ ಮೆಕ್ಕಾದತ್ತ ಮುಖ ಮಾಡಿ ವಧಿಸಬೇಕು. ತಲೆ ಸಂಪೂರ್ಣ ಕತ್ತರಿಸದೆ ಗಂಟಲು ಸೀಳಿ ಸಾಯಿಸಬೇಕು. ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಲು ಬಿಡಬೇಕು. ವಧಿಸುವ ವ್ಯಕ್ತಿಯು ಮುಸ್ಲಿಂ ಆಗಿರಬೇಕು ಮತ್ತು ಅಲ್ಲಾನ ನಾಮೋಚ್ಚಾರ ಮಾಡುತ್ತಾ ವಧಿಸಬೇಕು. ವಧಿಸುವ ಮೊದಲೇ ಪ್ರಾಣಿ ಸತ್ತಿರಬಾರದು. ಈ ರೀತಿ ಧರ್ಮಬದ್ಧವಾಗಿ ಸಿದ್ಧಪಡಿಸಿದ್ದು ಹಲಾಲ್‌ ಮಾಂಸವಾಗಿರುತ್ತದೆ.

ಹಲಾಲ್‌ ಎಂಬುದು ಆರ್ಥಿಕ ಜಿಹಾದ್‌: ರವಿ
‘ಹಲಾಲ್‌ ಎಂಬುದು ಆರ್ಥಿಕ ಜಿಹಾದ್‌. ಹಲಾಲ್‌ ಮಾಂಸ ಉಪಯೋಗಿಸಿ ಎಂದು ಹೇಳಲು ಹೇಗೆ ಹಕ್ಕಿದೆಯೋ, ಅದನ್ನು ಬಹಿಷ್ಕರಿಸಿ ಎಂದು ಹೇಳಲೂ ಹಕ್ಕಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಹಲಾಲ್‌ ಎಂಬುದು ಮುಸ್ಲಿಂ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯ. ಅದನ್ನು ಎಲ್ಲರೂ ಒಪ್ಪಬೇಕು ಎನ್ನುವಂತಿಲ್ಲ. ಸಾಮರಸ್ಯ ಎಂಬುದು ಒನ್‌ ವೇ ಅಲ್ಲ. ಅದು ಟೂ ವೇ. ಹಲಾಲ್‌ ಇಲ್ಲದ ಮಾಂಸ ತಿನ್ನಲು ಅವರು ಸಿದ್ಧರಾದರೆ, ಹಲಾಲ್‌ ಮಾಂಸ ತಿನ್ನಲು ಇವರೂ ಸಿದ್ಧರಾಗುತ್ತಾರೆ ಎಂದಿದ್ದಾರೆ.

Latest Videos
Follow Us:
Download App:
  • android
  • ios