ಹಿಜಾಬ್ ವಿವಾದದಿಂದ ಭವಿಷ್ಯದ ಬಗ್ಗೆ ಆತಂಕ: ನಾರಾಯಣಗೌಡ ‘15-16ರ ಮಕ್ಕಳಲ್ಲಿ ಧರ್ಮದ್ವೇಷ ಬಿತ್ತಿದರೆ ಅಪಾಯ ನಮ್ಮದು ಶರಣರು, ಸಂತರ ನಾಡು, ಇಂಥ ನಾಡಿಗೆ ಧರ್ಮಗಳ ಹೆಸರಲ್ಲಿ ಬೆಂಕಿ
ಬೆಂಗಳೂರು(ಫೆ.09): ಹಿಜಾಬ್ ವಿವಾದ(Hijab Row) ಸಂಬಂಧ ನಡೆಯುತ್ತಿರುವ ಬೆಳವಣಿಗೆಗಳು ನಾಡಿನ ಭವಿಷ್ಯದ ಕುರಿತು ಆತಂಕ ಮೂಡಿಸಿದ್ದು, 15-16 ವಯಸ್ಸಿನ ಮಕ್ಕಳಲ್ಲಿ ಧರ್ಮದ್ವೇಷದ ವಿಷಬೀಜ ಬಿತ್ತಿರುವ ಪರಿಣಾಮ ಘೋರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ(Karnataka Rakshana Vedike) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ(narayana gowda), ಪ್ರಚೋದನಕಾರಿಯಾಗಿ ಮಾತನಾಡುವವರ ಬಾಯಿ ಮುಚ್ಚಿಸಬೇಕು, ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ(School College) ಮೂರು ದಿನಗಳ ಕಾಲ ರಜೆ ನೀಡಿರುವುದು ಸರಿಯಾದ ಕ್ರಮ, ಇನ್ನಷ್ಟುಅಪಾಯಗಳು ಆಗದಂತೆ ತಡೆಯುವುದು ಅನಿವಾರ್ಯವಾಗಿತ್ತು. ಪರಿಸ್ಥಿತಿ ತಿಳಿಯಾದ ನಂತರ ಶಾಲಾ ಕಾಲೇಜುಗಳನ್ನು ಆರಂಭಿಸಬೇಕು, ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಸರಿಯಾಗಿ ಶಾಲಾ-ಕಾಲೇಜುಗಳು ತೆರೆಯಲಿಲ್ಲ. ಈಗ ಆರಂಭವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು(Students) ಸಂಘರ್ಷದಲ್ಲಿ ತೊಡಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Udupi Hijab Controversy: ಮುಗಿಯದ ಹಿಜಾಬ್ ವಿವಾದ
ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು, ನಮ್ಮದು ಶರಣರು, ಸಂತರ ನಾಡು, ಇಂಥ ನಾಡಿಗೆ ಧರ್ಮಗಳ ಹೆಸರಲ್ಲಿ ಬೆಂಕಿ ಹಚ್ಚುತ್ತಿರುವ ದುಷ್ಟರು ಭವಿಷ್ಯದ ದಿನಗಳನ್ನು ಇನ್ನಷ್ಟುಅಪಾಯಕಾರಿಯಾಗಿಸುತ್ತಿದ್ದಾರೆ. ಹಿಜಾಬ್ ಕುರಿತಂತೆ ನ್ಯಾಯಾಲಯಗಳು ತೀರ್ಮಾನಿಸಲಿ, ಆದರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಮಕ್ಕಳನ್ನು ಬಳಸಿಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು ಎಷ್ಟುಸರಿ ಎಂದು ಟಿ.ಎ. ನಾರಾಯಣಗೌಡ ಪ್ರಶ್ನಿಸಿದ್ದಾರೆ.
ವಿವಾದ ಆರಂಭಗೊಂಡಾಗಲೇ ಸರ್ಕಾರ ಮಧ್ಯ ಪ್ರವೇಶಿಸಿ ಸೌಹಾರ್ದಯುತವಾಗಿ ಬಗೆಹರಿಸಬಹುದಿತ್ತು, ಆದರೆ ಸರ್ಕಾರದ ಮಂತ್ರಿಗಳು, ಸಂಸದರು, ಶಾಸಕರುಗಳು ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ನೀಡಿ ಪ್ರತ್ಯೇಕ್ಷವಾಗಿ ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ ಎಂದು ಅವರು ಆರೋಪಿಸಿದ್ದಾರೆ.
Hijab Controversy 'ಕಾಲೇಜಿನಲ್ಲಿ ಹಿಜಾಬ್ ಧರಿಸುವವರಿಗೆ TC ಕೊಟ್ಟು, ಒದ್ದು ಮನೆಗೆ ಕಳಿಸಿ'
ಉಡುಪಿಯ ಒಂದು ಕಾಲೇಜಿನಲ್ಲಿ ಆರಂಭಗೊಂಡ ಈ ಸಮಸ್ಯೆ ಇಡೀ ರಾಜ್ಯಕ್ಕೆ ವ್ಯಾಪಿಸಲು ಕಾರಣವಾದರೂ ಏನು? ಎಲ್ಲಡೆ ಶಾಂತಿ ಕದಡಿ ಗಲಭೆ ಎಬ್ಬಿಸಲು ಹಿನ್ನೆಲೆಯಲ್ಲಿ ನಿಂತು ಸಂಚು ರೂಪಿಸಿದ ಸಂಘಟನೆಗಳು ಯಾವುವು? ಈ ಸಂಘಟನೆಗಳಿಗೆ ಸರ್ಕಾರದ ಬೆಂಬಲ ಇದೆಯಾ ಎಂದು ಪ್ರಶ್ನಿಸಿರುವ ನಾರಾಯಣಗೌಡ, ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿರುವ ವಿವಾದ ದುರುದ್ದೇಶಕಪೂರ್ವಕವಾಗಿದ್ದು, ನಾಡಿನ ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಧಕ್ಕೆ ತಂದಿದೆ, ಈ ಕುಟಿಲ ತಂತ್ರವನ್ನು ರಾಜ್ಯದ ಶಾಂತಿಪ್ರಿಯ ನಾಗರಿಕರು ವಿಫಲಗೊಳಿಸಬೇಕು ಎಂದು ತಿಳಿಸಿದ್ದಾರೆ.
ಹಿಜಾಬ್ ವಿವಾದದಿಂದಲೇ ಕಾಂಗ್ರೆಸ್ ನಾಶ: ಈಶ್ವರಪ್ಪ
ಹಿಜಾಬ್ ವಿವಾದದಿಂದಲೇ ಕಾಂಗ್ರೆಸ್ ಸರ್ವನಾಶವಾಗುತ್ತದೆ. ಕಲಬುರಗಿ ಶಾಸಕಿ ಖನೀಜ್ ಫಾತಿಮಾ ಅವರು ಧಮ್ ಇದ್ದರೆ ಮುಸ್ಲಿಂ ಮಹಿಳೆಯರಿಗೆ ಮಸೀದಿಗೆ ಪ್ರವೇಶ ಕೊಡಿಸಲಿ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಹಾಕಿಕೊಂಡು ಅಧಿವೇಶನಕ್ಕೆ ಬರುವುದಲ್ಲ. ನೀವು ಮೊದಲು ಮಸೀದಿಗೆ ಹೋಗಿ, ಎಷ್ಟುಜನ ಮಹಿಳೆಯರು ಮಸೀದಿಗೆ ಹೋಗಲು ಅವಕಾಶ ಇದೆ ಎಂದು ಪ್ರಶ್ನಿಸಿದರು. ಇನ್ನು, ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶವಾಗುವುದು ಖಚಿತ. ಈ ಹಿಂದೆ ಗೋಹತ್ಯೆ ನಿಷೇಧವನ್ನು ಉಡುಪಿಯಲ್ಲೇ ಮಾಡಿದ್ದರು. ಆಗ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಸೋತರು. ಈಗ ಅಲ್ಲಿಂದಲೇ ಹಿಜಾಬ್ ವಿವಾದ ಆರಂಭವಾಗಿದೆ, ಕಾಂಗ್ರೆಸ್ ಸರ್ವನಾಶ ಖಚಿತ ಎಂದರು.
ವಿದ್ಯಾರ್ಥಿಗಳಲ್ಲಿ ಕಾಂಗ್ರೆಸ್ ಪಕ್ಷ ವಿಷಬೀಜ ಬಿತ್ತುತ್ತಿದೆ: ವಿಜಯೇಂದ್ರ
ವಿದ್ಯಾರ್ಥಿಗಳಲ್ಲಿ ಕಾಂಗ್ರೆಸ್ ಮತೀಯ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಬಹಳ ದುರದೃಷ್ಟಕರ ಸಂಗತಿ. ಶಾಲಾ, ಕಾಲೇಜುಗಳಿಗೆ ಸಮವಸ್ತ್ರದಲ್ಲಿ ಹೋಗುವುದು ಮುಂಚೆಯಿಂದ ಬಂದ ಪದ್ಧತಿ. ಶಾಲಾ, ಕಾಲೇಜಿನ ಸಮವಸ್ತ್ರ ಅಂದರೆ ಏನು ಎಂಬುದು ಹೆಸರಲ್ಲೇ ಗೊತ್ತಾಗುತ್ತೆ. ಶಾಲೆಗಳಲ್ಲಿ ಎಲ್ಲರೂ ಸಮಾನವಾಗಿ ಇರಬೇಕು. ಇದರ ನಡುವೆ ಎಂದಿಗೂ ಜಾತಿ ವಿಚಾರ ಬರಬಾರದು, ಹಿಂದೂ ಮುಸ್ಲಿಂ ಅನ್ನೋದು ಬರಬಾರದು. ಆದರೆ ಶಾಲಾ, ಕಾಲೇಜು ಮಕ್ಕಳಲ್ಲಿಯೂ ರಾಜಕಾರಣ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದರಲ್ಲಿ ಯಾರೂ ಸಹ ರಾಜಕಾರಣ ಬೆರೆಸುವುದು ಸರಿಯಲ್ಲ, ವಿರೋಧ ಪಕ್ಷದವರು ಹಿಜಾಬ… ಕುರಿತ ವಿಷಯ ಬಿಟ್ಟು, ದೂರ ಉಳಿದರೆ ಉತ್ತಮ ಎಂದರು.
