ಸಹಾಯಕ ಎಂಜಿನಿಯರ್‌ಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಕೆಪಿಎಸ್‌ಸಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಆಯೋಗದಲ್ಲಿನ ಅಕ್ರಮಗಳನ್ನು ಸಾರ್ವಜನಿಕರ ಮುಂದೆ ಬಿಚ್ಚಿಡುವ ಎಚ್ಚರಿಕೆ ನೀಡಿದೆ.
ಬೆಂಗಳೂರು (ಮಾ.7): ಸಹಾಯಕ ಎಂಜಿನಿಯರ್‌ಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಕೆಪಿಎಸ್‌ಸಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ನ್ಯಾಯಾಲಯವೇ ಆರಂಭಿಸಲಿದೆ. ಆಯೋಗದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಸಾರ್ವಜನಿಕರ ಮುಂದೆ ಬಿಚ್ಚಿಡಲಾಗುವುದು ಎಂದು ಕಿಡಿಕಾರಿದೆ.
ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಳಂಕಿತರನ್ನು ಸೇವೆಯಿಂದ ವಜಾಗೊಳಿಸುವಂತೆ ಆಯೋಗ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ನಿರಾಕರಿಸಿರುವ ಕ್ರಮ ಪ್ರಶ್ನಿಸಿ ಎಇಇ ವಿಶ್ವಾಸ್ ಮತ್ತಿತರ ಎಂಜಿನಿಯರ್‌ಗಳು ಸಲ್ಲಿಸಿರುವ ಮೇಲ್ಮನವಿಗಳನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಕೆಪಿಎಸ್‌ಸಿಗೆ ಚಾಟಿ ಬೀಸಿತು.
ಇದನ್ನೂ ಓದಿ:ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಮಹಿಳೆಗೆ ₹4 ಕೋಟಿ ವಂಚಿಸಿದ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ದೊಡ್ಡ ಕುಳಗಳ ಕೈವಾಡವಿಲ್ಲದೆ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮಗಳು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಆಯೋಗದ ಯಾವ್ಯಾವ ಸದಸ್ಯರು, ಸಿಬ್ಬಂದಿ ಮೇಲೆ ಎಷ್ಟು ಕ್ರಿಮಿನಲ್ ಕೇಸುಗಳು ಬಾಕಿಯಿವೆ. ಅವುಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ಒದಗಿಸುವಂತೆ ರಾಜ್ಯ ಅಡ್ವೋಕೇಟ್ ಜನರಲ್‌ಗೆ ಸೂಚಿಸಿತು.
ಟೀವಿ ಹಾಕಿಸಿ ಬಹಿರಂಗ:
ವಿಚಾರಣೆ ವೇಳೆ ಕೆಪಿಎಸ್‌ಸಿ ಪರ ಹಿರಿಯ ವಕೀಲ ರೋಬೇನ್ ಜಾಕೋಬ್, ಎಂಜಿನಿಯರ್ ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆಯ ಓಎಂಆರ್‌ಶೀಟ್‌ಗಳು, ಎಫ್‌ಎಸ್‌ಎಲ್ ವರದಿ, ಪೆನ್ ಡ್ರೈವ್ ಸೇರಿ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಅದನ್ನು ದಾಖಲಿಸಿಕೊಂಡು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಮೊದಲಿಗೆ ಕೆಲ ವಕೀಲರ ಸಮಕ್ಷಮದಲ್ಲಿ ತಾವೇ ಮುಚ್ಚಿದ ಲಕೋಟೆಯಲ್ಲಿ ವಿವರ ಪರಿಶೀಲಿಸುತ್ತೇವೆ. ಅಗತ್ಯಬಿದ್ದರೆ ಎಲ್ಲ ವಿವರಗಳನ್ನು ಸಾರ್ವಜನಿಕವಾಗಿ ಬಿಚ್ಚಿಡುತ್ತೇವೆ. ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಟಿವಿಗಳನ್ನು ಹಾಕಿಸಿ ಆಯೋಗದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಕ್ರಮ ಕುರಿತು ಬೇಸರ:
ನೇಮಕಾತಿ ಅಕ್ರಮದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಆಯೋಗವನ್ನು ಸರ್ಕಾರ ಶುದ್ಧೀಕರಿಸಬೇಕಿದೆ. ಸರ್ಕಾರ ತನ್ನ ಕರ್ತವ್ಯ ನಿರ್ವಹಿಸದೆ ಹೋದರೆ ಆಯೋಗದ ಸ್ವಚ್ಛತಾ ಕಾರ್ಯವನ್ನು ನ್ಯಾಯಾಲಯವೇ ಆರಂಭಿಸುತ್ತದೆ. ಆಯೋಗದಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಸಾರ್ವಜನಿಕರ ಮುಂದೆ ಬಿಚ್ಚಿಡುತ್ತೇವೆ. ಸಗಣಿ ತಿಂದವರನ್ನು ಸುಮ್ಮನೆ ಬಿಡುವುದಿಲ್ಲ. ಆಯೋಗದ ನೇಮಕದಲ್ಲಿ ಪಾರದರ್ಶಕತೆ ತರಲು ಏನೆಲ್ಲ ಮಾಡಬೇಕೋ ಅದನ್ನು ಮಾಡೋಣ. 4-5 ಮಂದಿ ತಲೆದಂಡವಾದರೆ ಎಲ್ಲವೂ ಸರಿ ಹೋಗುವುದು ಎಂದು ಕಟುವಾಗಿ ನುಡಿದರು.
ಇದೇ ವೇಳೆ ಖಾಲಿ ಉಳಿದಿರುವ ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ 2023ರ ಸೆಪ್ಟೆಂಬರ್‌ನಲ್ಲಿ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ನಿರ್ದೇಶಿಸಿದೆ. ಆದರೆ ಇನ್ನೂ ನೇಮಕ ಪ್ರಕ್ರಿಯೆ ನಡೆಸಿಲ್ಲ, ಸರ್ಕಾರಕ್ಕೆ ಏನಾಗಿದೆ? ಏನಾದರೂ ತೊಂದರೆ ಇದ್ದರೆ ನ್ಯಾಯಾಲಯಕ್ಕೆ ತಿಳಿಸಬೇಕು. ಮುಖ್ಯ ನ್ಯಾಯಮೂರ್ತಿಗಳ ಆದೇಶ ಪಾಲಿಸದಿದ್ದರೆ ಕೋರ್ಟ್ ಆದೇಶಗಳಿಗೆ ಬೆಲೆ ಎಲ್ಲಿದೆ? ಎಂದು ಚಾಟಿ ಬೀಸಿದರು.
ಇದನ್ನೂ ಓದಿ: ಲೀಗಲ್ ನೋಟಿಸ್ ಕೊಟ್ಟ ವಕೀಲನೇ ಆರೋಪಿ! 10 ವರ್ಷ ಕಾನೂನು ಹೋರಾಟ, ಕಡೆಗೂ ಗೆದ್ದ ಅಡ್ವೋಕೆಟ್! ಏನಿದು ಪ್ರಕರಣ?
ಕೆಪಿಎಸ್ಸಿಯನ್ನು ಉಳಿಸಬೇಕಾಗಿದೆ. ಇಲ್ಲವಾದರೆ ಮುಂದಿನ ತಲೆಮಾರಿಗೆ ಏನು ಉತ್ತರ ಹೇಳಬೇಕು? ಆಯೋಗದ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಆಯೋಗವನ್ನು ಸರಿ ಮಾಡಲು ನ್ಯಾಯಾಲಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವಂತೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿದರು.
ಅದಕ್ಕೆ ಒಪ್ಪಿದ ಅಡ್ವೋಕೇಟ್ ಜನರಲ್, ಈ ನಿಟ್ಟಿನಲ್ಲಿ ಸರ್ಕಾರವೂ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆ ಸುಧಾರಿಸುವ ದೃಷ್ಟಿಯಿಂದ ನ್ಯಾಯಾಲಯಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
