ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರಿಗೆ ಮನೆ ಊಟ ನೀಡಲು ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದ ನ್ಯಾಯಾಲಯ, ಜೈಲು ಅಧಿಕಾರಿಗಳ ಅರ್ಜಿಯನ್ನು ಪುರಸ್ಕರಿಸಿದೆ. 

ಬೆಂಗಳೂರು (ಜ.20): ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಜೈಲಿನಲ್ಲಿ ಮನೆ ಊಟ ಸವಿಯುವ ಅವರ ಆಸೆಗೆ ಸದ್ಯ ತಣ್ಣೀರು ಬಿದ್ದಿದ್ದು, ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕಾನೂನಿನ ಮುಂದೆ ಎಲ್ಲರೂ ಒಂದೇ

ಪವಿತ್ರಾ ಗೌಡ ಸೇರಿದಂತೆ ಆರೋಪಿಗಳಾದ ಲಕ್ಷ್ಮಣ್ ಮತ್ತು ನಾಗರಾಜ್ ಅವರಿಗೆ ಮನೆ ಊಟ ನೀಡಲು ಅನುಮತಿ ನೀಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜೈಲು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, 'ಎಷ್ಟೇ ದೊಡ್ಡವರಾದರೂ ಕಾನೂನಿನ ಮುಂದೆ ಎಲ್ಲರೂ ಒಂದೇ' ಎಂದು ಮಾರ್ಮಿಕವಾಗಿ ನುಡಿಯುತ್ತಾ, ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ.

ಎಸ್‌ಪಿಪಿ ಬಿ.ಎನ್. ಜಗದೀಶ್ ವಾದವೇನು?

ವಿಚಾರಣೆ ವೇಳೆ ಸರ್ಕಾರದ ಪರ ವಿಶೇಷ ಅಭಿಯೋಜಕ (SPP) ಬಿ.ಎನ್. ಜಗದೀಶ್ ಅವರು ಸುಪ್ರೀಂ ಕೋರ್ಟ್‌ನ ಹಳೆಯ ಆದೇಶಗಳನ್ನು ಉಲ್ಲೇಖಿಸಿ ಪ್ರಬಲ ವಾದ ಮಂಡಿಸಿದರು. 'ಜೈಲಿನ ಕೈದಿಗಳಿಗೆ ಮನೆ ಊಟ ನೀಡುವುದು ಜೈಲು ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮನೆ ಊಟಕ್ಕೆ ಅವಕಾಶ ನೀಡಿದರೆ ಅಧಿಕಾರಿಗಳ ಮೇಲೆ ಕ್ರಮವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆ ಊಟಕ್ಕೆ ಅವಕಾಶ ನೀಡಬಾರದು' ಎಂದು ವಾದಿಸಿದರು.

ಈ ಹಿಂದೆ ಸೆಷನ್ಸ್ ಕೋರ್ಟ್, ವೈದ್ಯರ ಸಲಹೆ ಮೇರೆಗೆ ಅಷ್ಟೇ ಊಟ ನೀಡಲು ಮತ್ತು ವಾರಕ್ಕೊಮ್ಮೆ ಮನೆ ಊಟ ಪಡೆಯಲು ಪವಿತ್ರಾ ಗೌಡ ಅವರಿಗೆ ಅವಕಾಶ ಕಲ್ಪಿಸಿತ್ತು. ಆದರೆ, ಇದೀಗ ಹೈಕೋರ್ಟ್ ಈ ಆದೇಶವನ್ನು ಪ್ರಶ್ನಿಸಿ ಜೈಲು ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದೆ.

ಫೆಬ್ರವರಿ 3ಕ್ಕೆ ಮುಂದೂಡಿಕೆ

ಸದ್ಯ ಹೈಕೋರ್ಟ್ ನೀಡಿರುವ ಈ ಆದೇಶದಿಂದಾಗಿ ಪವಿತ್ರಾ ಗೌಡ , ಲಕ್ಷ್ಮಣ್ ಮತ್ತು ನಾಗರಾಜ್ ಅವರು ಜೈಲಿನ ಊಟವನ್ನೇ ಅವಲಂಬಿಸಬೇಕಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಫೆಬ್ರವರಿ 3ಕ್ಕೆ ಮುಂದೂಡಿದೆ. ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ನಿರೀಕ್ಷಿಸುತ್ತಿದ್ದ ಆರೋಪಿಗಳಿಗೆ ಹೈಕೋರ್ಟ್‌ನ ಈ ಕಟ್ಟುನಿಟ್ಟಿನ ನಿಲುವು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.