ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬ ಸದಸ್ಯರ ವಿರುದ್ಧದ ಸಿಬಿಐ ತನಿಖೆಗೆ ಫೆ.24ರವರೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ಮಾಡಿದೆ.
ಬೆಂಗಳೂರು (ಫೆ.11): ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬ ಸದಸ್ಯರ ವಿರುದ್ಧದ ಸಿಬಿಐ ತನಿಖೆಗೆ ಫೆ.24ರವರೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ಮಾಡಿದೆ. ಸಿಬಿಐ ತನಿಖೆ ರದ್ದುಪಡಿಸುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಮುಂದಿನ ವಿಚಾರಣೆ ವೇಳೆ ಸಿಬಿಐ ತನಿಖಾಧಿಕಾರಿಯು ಪ್ರಕರಣ ಸಂಬಂಧ ಈವರೆಗೆ ನಡೆಸಿರುವ ತನಿಖೆಯ ಪ್ರಗತಿ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ಇದಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಪರ ಹಿರಿಯ ವಕೀಲ ಸಿ.ಎಚ್.ಜಾಧವ್ ವಾದ ಮಂಡಿಸಿ, ಅರ್ಜಿದಾರರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರಿಗೆ ಸಿಬಿಐ ಮಾನಸಿಕ ಒತ್ತಡ ಹೇರುತ್ತಿದೆ. ಹೆಂಡತಿ, ಪುತ್ರಿ ಸೇರಿದಂತೆ ಕುಟುಂಬದ ಸದಸ್ಯರಿಗೆ ನೋಟಿಸ್ ಜಾರಿ ಮಾಡಿ ವಿನಾ ಕಾರಣ ತೊಂದರೆ ನೀಡುತ್ತಿದೆ. ಅರ್ಜಿದಾರರು ಸಮಾಜ ಸೇವಕರಾಗಿದ್ದಾರೆ. ಕುಟುಂಬದ ಸದಸ್ಯರೆಲ್ಲರ ಆದಾಯವನ್ನೂ ಪರಿಗಣಿಸಿ ಪ್ರಕರಣದಲ್ಲಿ ಅವರನ್ನು ಸಿಲುಕಿಸಿ ಕಿರುಕುಳ ನೀಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಶತ್ರುಗಳ ಪಿತೂರಿ ಇದೆ. ಜಾಮೀನು ದೊರೆತ ಮೇಲೆ ಜಾರಿ ನಿರ್ದೇಶನಾಲಯದ ಮಾಹಿತಿ ಅನುಸಾರ ಸಿಬಿಐ ಕೇಸು ದಾಖಲಿಸಿದೆ ಎಂದು ಆಕ್ಷೇಪಿಸಿದರು.
ಬಿಜೆಪಿಗರು ಬಿಎಸ್‌ವೈ ಇಳಿಸಿದ್ದು ಯಾಕೆ?: ಡಿ.ಕೆ.ಶಿವಕುಮಾರ್
ಈ ವಾದವನ್ನು ಬಲವಾಗಿ ಅಲ್ಲಗೆಳೆದ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್, ಅರ್ಜಿದಾರರು ಪ್ರಕರಣದ ತನಿಖೆಗೆ ತಡೆ ಕೇಳುತ್ತಿಲ್ಲ. ಕುಟುಂಬದ ಸದಸ್ಯರನ್ನು ವಿಚಾರಣೆಗೆ ಕರೆಸಬಾರದು ಎಂದಷ್ಟೇ ಕೇಳುತ್ತಿದ್ದಾರೆ. ಅದರೆ, ಕುಟುಂಬದ ಸದಸ್ಯರಿಗೆ ಸಿಬಿಐ ನೋಟಿಸ್ ನೀಡಿಯೇ ಇಲ್ಲ. ಶಿವಕುಮಾರ್ ಮತ್ತು ಅವರ ಕುಟುಂಬದ ಸದಸ್ಯರು 2013ರ ಏ.1ರಿಂದ ಮತ್ತು 2018ರ ಏ.30ರ ಮಧ್ಯದ ತಪಾಸಣೆಯ ಅವಧಿಯಲ್ಲಿ 75 ಕೋಟಿ ರು. ಮೊತ್ತದ ಅಕ್ರಮ ಆಸ್ತಿ ಹೊಂದಿದ್ದಾರೆ. ಅವರು ಇದಕ್ಕೆ ಸರಿಯಾದ ದಾಖಲೆ ಕೊಡುತ್ತಿಲ್ಲ. ಪ್ರತಿ ಬಾರಿ ವಿಚಾರಣೆಗೆ ಕರೆದಾಗ ಹೊಸ ದಾಖಲೆ ಕೊಡುತ್ತಾರೆ. ಅವು ನಮಗೆ ಸಾವಿರ ಪ್ರಶ್ನೆ ಹುಟ್ಟು ಹಾಕುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯಪೀಠವು, ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿ ಎರಡು ವರ್ಷ ಕಳೆದಿದೆ. ಈವರೆಗೂ ಏನು ತನಿಖೆ ನಡೆಸಲಾಗಿದೆ? ತನಿಖೆಯೆ ಅಂತಿಮ ವರದಿಯನ್ನು ಯಾವಾಗ ಸಲ್ಲಿಸಲಾಗುತ್ತದೆ? ಎಂದು ಸಿಬಿಐ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ ಶಿವಕುಮಾರ್ ಮತ್ತವರ ಕುಟುಂಬ ಸದಸ್ಯರ ವಿರುದ್ಧದ ಸಿಬಿಐ ತನಿಖೆಗೆ ಫೆ.24ರವರೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಿಬಿಐ 2020ರ ಅ.3ರಂದು ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಈ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎದು ಕೋರಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನನ್ನ ಮೇಲೆ ದಾಳಿಗಷ್ಟೆ ಇಡಿ ಇರೋದು: ಡಿ.ಕೆ.ಶಿವಕುಮಾರ್
21 ವರ್ಷದ ಡಿಕೆಶಿ ಪುತ್ರಿ ಬಳಿ ಕೋಟ್ಯಂತರ ಸಂಪತ್ತು ಆಕಾಶದಿಂದ ಬಂತಾ?: ಶಿವಕುಮಾರ್ ಪುತ್ರಿಗೆ ಸದ್ಯ 21 ವರ್ಷ. ಆಕೆ ಕೋಟ್ಯಂತರ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಅಷ್ಟೊಂದು ದುಡ್ಡು ಆಕೆಗೆ ಆಕಾಶದಿಂದ ಉದುರಿತೇ? ಎಂದು ಖಾರವಾಗಿಯೇ ಪ್ರಶ್ನಿಸಿದ ಸಿಬಿಐ ಪರ ವಕೀಲರು, ಶೈಕ್ಷಣಿಕ ಸಂಸ್ಥೆಯ ಟ್ರಸ್ಟಿಯಾಗಿರುವ ಆಕೆ ತನ್ನ ಆದಾಯದ ಕುರಿತು ವಿವರಣೆ ನೀಡಬೇಕಾಗುತ್ತದೆ ಎಂದು ವಾದ ಮಾಡಿದರು. ಎರಡು ವರ್ಷದಿಂದ ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಅಂತಿಮ ವರದಿ ಸಲ್ಲಿಸಲಾಗುವುದು. ಹಾಗಾಗಿ ತನಿಖೆಗೆ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.
