Asianet Suvarna News Asianet Suvarna News

ರೀ, ನಿಮ್ಮ ಕಥೆ, ಚಿತ್ರಕಥೆ, ಸಂಭಾಷಣೆ ಬೇಡ: ಸಂಸದ ಪ್ರಜ್ವಲ್‌ಗೆ ಹೈಕೋರ್ಟ್‌ ಚಾಟಿ

ಹಾಸನ ಲೋಕಸಭಾ ಕ್ಷೇತ್ರದಿಂದ ತಾವು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಲು ಕೋರಿದ ಅರ್ಜಿ ಕುರಿತ ಪಾಟಿ ಸವಾಲಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸುದೀರ್ಘವಾಗಿ ವಿವರಣೆ ನೀಡಲು ಮುಂದಾದ ಸಂಸದ ಪ್ರಜ್ವಲ್‌ ರೇವಣ್ಣಗೆ ಚಾಟಿ ಬೀಸಿದ ಹೈಕೋರ್ಟ್‌.

Karnataka High Court Slams On Hassan MP Prajwal Revanna gvd
Author
First Published Nov 23, 2022, 6:21 AM IST

ಬೆಂಗಳೂರು (ನ.23): ಹಾಸನ ಲೋಕಸಭಾ ಕ್ಷೇತ್ರದಿಂದ ತಾವು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಲು ಕೋರಿದ ಅರ್ಜಿ ಕುರಿತ ಪಾಟಿ ಸವಾಲಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸುದೀರ್ಘವಾಗಿ ವಿವರಣೆ ನೀಡಲು ಮುಂದಾದ ಸಂಸದ ಪ್ರಜ್ವಲ್‌ ರೇವಣ್ಣಗೆ ಚಾಟಿ ಬೀಸಿದ ಹೈಕೋರ್ಟ್‌, ‘ರ್ರೀ, ನಿಮ್ಮ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲಾ ನಮಗೆ ಬೇಡ. ಕೇಳಿದ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸಿ ಎಂದು ತಾಕೀತು ಮಾಡಿದ ಘಟನೆ ಮಂಗಳವಾರ ನಡೆಯಿತು.

ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ಎಸಗಿ ಆಯ್ಕೆಯಾಗಿರುವ ಕಾರಣ ಪ್ರಜ್ವಲ್‌ ರೇವಣ್ಣ ಲೋಕಸಭೆ ಸದಸ್ಯತ್ವನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ಸಂಬಂಧ ಮಂಗಳವಾರ ನ್ಯಾಯಮೂರ್ತಿ ಕೆ.ನಟರಾಜನ್‌ ಅವರು ಪಾಟಿ ಸವಾಲು ಪ್ರಕ್ರಿಯೆ ಮುಂದುವರಿಸಿದರು. ಈ ವೇಳೆ ಅರ್ಜಿದಾರರ ಪರ ವಕೀಲರು, 2019ರ ಏ.17ರಂದು ಹೊಳೆನರಸೀಪುರದ ಚನ್ನಾಂಬಿಕಾ ಥಿಯೇಟರ್‌ ಒಳಗೆ ನಿಂತಿದ್ದ ಕೆಎ 01ಎಂಎಚ್‌ 4477 ಇನ್ನೋವಾ ಕಾರಿನಲ್ಲಿದ್ದ 1.20 ಲಕ್ಷ ಮೊತ್ತವನ್ನು ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದ್ದು ಹೌದಲ್ಲವೇ ಎಂದು ಪ್ರಜ್ವಲ್‌ ರೇವಣ್ಣ ಅವರನ್ನು ಪ್ರಶ್ನಿಸಿದರು.

ತಾಯಿ-ಮಗ ಇಬ್ಬರೂ ಎಣ್ಣೆ ಹೊಡೆದು ಮಾತನಾಡ್ತಾರೆ: ಭವಾನಿ, ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರೀತಂಗೌಡ ವಾಗ್ದಾಳಿ

ಅದಕ್ಕೆ ಉತ್ತರಿಸಿದ ಪ್ರಜ್ವಲ್‌ ರೇವಣ್ಣ, ‘ಇಲ್ಲ, ಅದು ನನ್ನ ತಂದೆಯ ಎಸ್ಕಾರ್ಟ್‌ನವರಿಗೆ ಸೇರಿದ ಸರ್ಕಾರಿ ಕಾರು ಆಗಿತ್ತು. ಆಗ ತಂದೆ ಲೋಕೋಪಯೋಗಿ ಸಚಿವರಾಗಿದ್ದರು. ಕಾರು ಥಿಯೇಟರ್‌ ಒಳಗೆ ನಿಂತಿರಲಿಲ್ಲ. ಕಾಂಪೌಂಡ್‌ ಒಳಗೆ ನಿಂತಿತ್ತು. ಅವತ್ತು ಆ ಹಣವನ್ನು ಐಟಿ (ಆದಾಯ ತೆರಿಗೆ) ಅಧಿಕಾರಿಗಳೇ ತಂದು ಕಾರಿನಲ್ಲಿ ದುರುದ್ದೇಶದಿಂದ ಇರಿಸಿ ದೂರು ದಾಖಲಿಸಿದ್ದರು ಎಂದರು. ನಂತರ ಅದಕ್ಕೆ ತದ್ವಿರುದ್ಧವಾಗಿ ಅಷ್ಟಕ್ಕೂ ಆ ಹಣವನ್ನು ನನ್ನ ತಾಯಿ ನಮ್ಮ ಮನೆಯ ಸೇವಕನಿಗೆ ಹಸುಗಳಿಗೆ ಬೂಸಾ ತರಲು ನೀಡಿದ್ದರು. ಈಗಾಗಲೇ ಈ ದೂರಿನ ತನಿಖೆ ನಡೆದಿದ್ದು, ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಕೆಯಾಗಿದೆ ಎಂದರು.

ಇದರಿಂದ ಬೇಸರಗೊಂಡ ನ್ಯಾಯಮೂರ್ತಿಗಳು, ರ್ರೀ, ನಿಮ್ಮ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲಾ ನಮಗೆ ಬೇಡ. ವಕೀಲರು ಕೇಳಿದ ಪ್ರಶ್ನೆಗಷ್ಟೇ ಹೌದು ಅಥವಾ ಇಲ್ಲ ಎಂದು ಉತ್ತರಿಸಿ. ನೀವು ನೀಡಿದ ಉತ್ತರವನ್ನು ದಾಖಲು ಮಾಡಿಕೊಳ್ಳುತ್ತೇನೆ ಎಂದು ಸೂಚ್ಯವಾಗಿ ನುಡಿದರು. ಚುನಾವಣೆ ಘೋಷಣೆಯಾದ ನಂತರ ನಿಮ್ಮ ಖಾತೆಯಲ್ಲಿ 27 ಲಕ್ಷ ರು. ಇತ್ತು. ಆ ಬಗ್ಗೆ ಸೂಕ್ತ ವಿವರಣೆ ಪ್ರಮಾಣ ಪತ್ರದಲ್ಲಿ ಇಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್‌, ಕರ್ನಾಟಕ ಬ್ಯಾಂಕ್‌ ಖಾತೆಗೆ ತಂದೆ ಎಚ್‌.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಸೇರಿದಂತೆ ಒಟ್ಟು 16 ಜನರಿಂದ ಸಾಲ ರೂಪದಲ್ಲಿ ಹಣ ಸಂದಾಯವಾಗಿತ್ತು ಎಂದರು. ಆ ಪ್ರಶ್ನೆಯನ್ನು ಪುನಾ ತಿರುವಿ ಕೇಳಿದಾಗ, ನನಗೆ ಹಾಲು ಮಾರಾಟದಿಂದ ಮತ್ತು ಕೃಷಿಯಿಂದ ಬಂದ ಆದಾಯವಿದೆ ಎಂದರು.

ಕಟಕಟೆಯಲ್ಲಿ ಪ್ರಜ್ವಲ್‌ ರೇವಣ್ಣ ಹರಟೆಗೆ ಹೈಕೋರ್ಟ್‌ ಗರಂ

ಅಲ್ಲದೆ, ಕೆಲವೊಂದು ಪ್ರಶ್ನೆಗಳಿಗೆ, ‘ಇದು ನನಗೆ ಗೊತ್ತಿಲ್ಲ. ನನ್ನ ಲೆಕ್ಕಪರಿಶೋಧಕರು ಹಾಗೂ ಬ್ಯಾಂಕ್‌ ಅಧಿಕಾರಿಗಳಿಂದ ವಿವರಣೆ ಪಡೆದುಕೊಂಡು ಬಂದು ಉತ್ತರಿಸುತ್ತೇನೆ’ ಎಂದು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, ‘ರ್ರೀ, ನೀವು ಮನೆಗೆ ಹೋಗಿ ನಿಮ್ಮ ಅಮ್ಮನ ಬಳಿ ಉತ್ತರ ಪಡೆದು ಬಂದು ತಿಳಿಸುತ್ತೇನೆ ಎಂದು ಮಗುವಿನ ರೀತಿಯಲ್ಲಿ ಹೇಳುತ್ತಿದ್ದಿರಲ್ಲಾ. ಇದು ಪರೀಕ್ಷೆ ಇದ್ದಂತೆ. ಸರಿಯಾಗಿ ಉತ್ತರ ನೀಡಬೇಕು ಎಂದು ತಾಕೀತು ಮಾಡಿದರು. ಅಂತಿಮವಾಗಿ ದಿನದ ಕಲಾಪದ ಸಮಯ ಮೀರಿದ ಕಾರಣ ವಿಚಾರಣೆಯನ್ನು ನ.25ಕ್ಕೆ ಮುಂದೂಡಿದರು.

Follow Us:
Download App:
  • android
  • ios