ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸುವ ಕುರಿತ ವಿಚಾರಣೆಯನ್ನು ಮತ್ತೆ ನ.13ಕ್ಕೆ ಹೈಕೋರ್ಟ್ ಮುಂದೂಡಿದೆ. ಅನುಮತಿ ಕೋರಿದ್ದ ಆರ್‌ಎಸ್‌ಎಸ್‌ ನ.13 ಅಥವಾ 16ಕ್ಕೆ ಪಥ ಸಂಚಲನ ಅನುಮತಿ ಕೋರಿತ್ತು.

ಬೆಂಗಳೂರು (ನ.07): ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸುವ ಕುರಿತ ವಿಚಾರಣೆಯನ್ನು ಮತ್ತೆ ನ.13ಕ್ಕೆ ಹೈಕೋರ್ಟ್ ಮುಂದೂಡಿದೆ. ಇಂದು ಶುಕ್ರವಾರ ನಡೆದ ವಿಚಾರಣೆಯಲ್ಲಿ ಪಥ ಸಂಚಲನಕ್ಕೆ ಅರ್ಜಿ ಹಾಕಿದ ಎಲ್ಲಾ 11 ಸಂಘಟನೆಗಳಿಗೂ ಪರಿಗಣಿಸಲು ಅಡ್ವೋಕೇಟ್ ಜನರಲ್ ವಾದಿಸಿದ್ದಾರೆ. ಅನುಮತಿ ಕೋರಿದ್ದ ಆರ್‌ಎಸ್‌ಎಸ್‌ ನ.13 ಅಥವಾ 16ಕ್ಕೆ ಪಥ ಸಂಚಲನ ಅನುಮತಿ ಕೋರಿತ್ತು. ಆದರೆ ನ.5ರ ಸಭೆಯ ಚರ್ಚೆ ಫಲಪ್ರದ ಆಗಿದೆ, ಷರತ್ತು ಇತ್ಯಾದಿಗಳ ಬಗ್ಗೆ ನಿರ್ಣಯ ಮಾಡೋದಿದೆ. ಹೀಗಾಗಿ ಇನ್ನೂ 1 ವಾರ ಅವಕಾಶವನ್ನು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕೋರಿದ್ದರು.

Add Asianetnews Kannada as a Preferred SourcegooglePreferred

ಇವರ ವಾದಕ್ಕೆ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ಆಕ್ಷೇಪಿಸಿದರು. ವಾದ, ಪ್ರತಿವಾದ ಅಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂಜಿಎಸ್ ಕಮಲ ಅವರು ಸದರಿ ಪ್ರಕರಣದಲ್ಲಿ ವಿಚಾರಣೆ ನ.13ಕ್ಕೆ ಮುಂದೂಡಿ ಆದೇಶವನ್ನು ಹೊರಡಿಸಿದರು. ನೀವು ಎರಡು ದಿನಾಂಕ ಕೊಟ್ಟಿದ್ದೀರಿ. ನ.13 ಹಾಗೂ ನ.16, ಹೀಗಾಗಿ ನ.13ಕ್ಕೆ ಮತ್ತೆ ಸೇರೋಣ, ಅಲ್ಲಿನ ವಾದ ಆಲಿಸಿ ನಿರ್ಣಯ ಕೊಡುವೆ ಎಂದ ನ್ಯಾಯಮೂರ್ತಿ ಎಂಜಿಎಸ್ ಕಮಲ ತಿಳಿಸಿದರು. ಇನ್ನು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನಿಂದ ಹಾಜರಾಗಿದ್ದರು.

ಪ್ರಸ್ತಾವನೆ ಏನು?

ನ.13 ಅಥವಾ 16ರಂದು ಪಥಸಂಚಲನ ನಡೆಸಲು ಉದ್ದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಪಥಸಂಚಲನದಲ್ಲಿ ಚಿತ್ತಾಪುರ ತಾಲೂಕು ಆರ್‌ಎಸ್‌ಎಸ್‌ ಸ್ವಯಂ ಸೇವಕರು ಮಾತ್ರ ಭಾಗವಹಿಸುತ್ತಾರೆ. ನೆರೆಯ ತಾಲೂಕಿನವರು ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಪಥಸಂಚಲನದಲ್ಲಿ 600ರಿಂದ 850 ಸ್ವಯಂ ಸೇವಕರು ಮಾತ್ರ ಗಣವೇಷದಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ನಡೆಸುವ ನಾಲ್ಕು ಸಾಲಿನ ಬದಲು ಮೂರು ಸಾಲಿನಲ್ಲೇ ಮೂರು ಕಿ.ಮೀ. ಪಥಸಂಚಲನ ನಡೆಸಲಾಗುತ್ತದೆ. ಪಥ ಸಂಚಲ ಸುಮಾರು 37ರಿಂದ 45 ನಿಮಿಷದೊಳಗೆ ಪೂರ್ಣಗೊಳ್ಳಲಿದೆ. ಈ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.