ಸರ್ಕಾರಿ ಆವರಣಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ನ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಧಾರವಾಡ/ಕಲಬುರಗಿ (ಅ.29): ಸರ್ಕಾರಿ ಆವರಣಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ನ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ನ.2ರಂದು ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್‌ಗೆ ಹಾದಿ ಸುಗಮ ಆಗಲಿದೆಯೇ ಎಂಬ ಚರ್ಚೆ ಶುರುವಾಗಿದೆ.
ಸರ್ಕಾರಿ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ಕಡಿವಾಣ ಹಾಕಲು ತಮಿಳುನಾಡು ಮಾದರಿಯಲ್ಲಿ ನಿರ್ಬಂಧ ಹೇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಸರ್ಕಾರವು ಸರ್ಕಾರಿ ಸ್ಥಳಗಳಲ್ಲಿ ಆರೆಸ್‌ಎಸ್ ರೀತಿಯ ಚಟುವಟಿಕೆಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಅನುಮತಿಯಿಲ್ಲದೆ 10 ಜನರು ಸಾರ್ವಜನಿಕ ಸ್ಥಳದಲ್ಲಿ ಸೇರಿದರೆ ಅಪರಾಧ ಎಂಬ ಅಂಶ ಇದರಲ್ಲಿತ್ತು. ಈ ಆದೇಶದ ಮೂಲಕವೇ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿತ್ತು.
ಇದರ ನಡುವೆ, ಅ.19ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ನಡೆಸಲು ತಹಸೀಲ್ದಾರ್ ಅನುಮತಿ ನಿರಾಕರಿಸಿದ್ದರು. ‘ಪಥ ಸಂಚಲನದಲ್ಲಿ ಲಾಠಿ, ಆಯುಧ ಬಳಕೆ ಬಗ್ಗೆ ಉಲ್ಲೇಖ ಮಾಡಿಲ್ಲ. ಸಂಘದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಿಲ್ಲ, ಪಥ ಸಂಚಲನದ ಉದ್ದೇಶದ ಬಗ್ಗೆ ಮಾಹಿತಿ ಸಲ್ಲಿಸಿಲ್ಲ’ ಎಂಬುದು ಸೇರಿದಂತೆ 11 ಅಂಶಗಳ ವಿವರಣೆ ಕೇಳಿದ್ದರು. ಇದೇ ವೇಳೆ, ದಲಿತ ಸಂಘಟನೆ ಸೇರಿ ಇತರ 9 ಸಂಘಟನೆಗಳವರೂ ಪ್ರತಿಭಟನೆಗೆ ಅವಕಾಶ ಕೋರಿದ್ದರಿಂದ, ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಅನುಮತಿ ನಿರಾಕರಿಸಿದ್ದರು.
ಮಧ್ಯಂತರ ತಡೆ
ಇದರ ನಡುವೆ, ‘ಸರ್ಕಾರಿ ಜಾಗಗಳಲ್ಲಿನ ಖಾಸಗಿ ಚಟುವಟಿಕೆಗೆ ನಿರ್ಬಂಧ’ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೀಗಾಗಿ ಆರೆಸ್ಸೆಸ್ ತನ್ನ ಪಥಸಂಚಲನಕ್ಕೆ ಸಕಾರಣಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದರೆ ಅದಕ್ಕೆ ಅನುಮತಿ ದೊರಕಬಹುದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ನ.2ರಂದು ಪಥಸಂಚಲನ ನಡೆಸಲು ಆರೆಸ್ಸೆಸ್ ಉದ್ದೇಶಿಸಿದೆ.
