ಲೋಕಸಭಾ ಚುನಾವಣೆ ವೇಳೆ ಶಿವಮೊಗ್ಗದ ದೇವಸ್ಥಾನದಲ್ಲಿ ರಾಜಕೀಯ ಸಭೆ ನಡೆಸಿದ ಆರೋಪದ ಮೇಲೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮತ್ತು ಇತರರ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ರಾಜಕೀಯ ಉದ್ದೇಶಗಳಿಗೆ ಧಾರ್ಮಿಕ ಸ್ಥಳಗಳನ್ನು ಬಳಸಬಾರದು ಎಂದು ನ್ಯಾಯಾಲಯ ಅಭಿಪ್ರಾಯ

ಬೆಂಗಳೂರು (ಮೇ.1): ರಾಜಕೀಯ ಉದ್ದೇಶಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸುವುದು ಸರಿಯಲ್ಲ ಎಂದಿರುವ ಹೈಕೋರ್ಟ್, ಲೋಕಸಭಾ ಚುನಾವಣೆ ವೇಳೆ ಶಿವಮೊಗ್ಗ ದೇವಸ್ಥಾನದಲ್ಲಿ ರಾಜಕೀಯ ಸಭೆ ನಡೆಸಿದ ಆರೋಪದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.

Add Asianetnews Kannada as a Preferred SourcegooglePreferred

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗದ ತುಂಗಾನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿ ರದ್ದತಿ ಕೋರಿ ಕೆ.ಎಸ್‌.ಈಶ್ವರಪ್ಪ ಸೇರಿ ಒಂಬತ್ತು ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

ಧಾರ್ಮಿಕ ಸ್ಥಳ ಬಳಕೆ ಮಾಡಲಾಗದು:

ಕನಿಷ್ಠ ಪಕ್ಷ ದೇವಸ್ಥಾನದ ಅರ್ಚಕ ಮತ್ತು ಇನ್ನೊಬ್ಬ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಆಗ ಪೀಠವು ರಾಜಕೀಯ ಕಾರಣಗಳಿಗೆ ನೀವು ಧಾರ್ಮಿಕ ಸ್ಥಳಗಳನ್ನು ಬಳಕೆ ಮಾಡಲಾಗದು. ಇದಕ್ಕೆ ವಿರಾಮ ಹಾಕಬೇಕು ಎಂದು ಮೌಖಿಕವಾಗಿ ಹೇಳಿತು.

ಅರ್ಜಿದಾರರ ಪರ ವಕೀಲ ಲೀಲೇಶ್‌ ಕೃಷ್ಣ ಅವರು ‘ದೇವಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಯಾವುದೇ ರಾಜಕೀಯ ಭಾಷಣ ಮಾಡಿಲ್ಲ. ಯಾವ ರಾಜಕೀಯ ಚಟುವಟಿಕೆ ನಡೆಸಲಾಗಿದೆ ಎಂಬುದನ್ನು ದೂರಿನಲ್ಲಿ ವಿವರಿಸಲಾಗಿಲ್ಲ. ಅಪರಾಧ ಎನಿಸುವ ಯಾವುದೇ ಕೃತ್ಯ ನಡೆಸಿಲ್ಲ. 14 ಸಾಕ್ಷಿಗಳ ಪೈಕಿ 13 ಮಂದಿ ಸರ್ಕಾರಿ ಅಧಿಕಾರಿಗಳೇ ಆಗಿದ್ದಾರೆ. ಒಬ್ಬರು ಮಾತ್ರ ಪ್ರತ್ಯಕ್ಷದರ್ಶಿಯಾಗಿದ್ದಾರೆ’ ಎಂದು ತಿಳಿಸಿದರು.

ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌.ಜಗದೀಶ್‌ ಅವರು ದೇವಸ್ಥಾನದಲ್ಲಿ ಸಭೆ ನಡೆಸಲಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಚರ್ಚೆ ನಡೆಸಲಾಗಿದೆ. ಆದ್ದರಿಂದ, ಧಾರ್ಮಿಕ ಸ್ಥಳಗಳ (ದುರ್ಬಳಕೆ) ತಡೆ ಕಾಯಿದೆ ಅನ್ವಯಿಸಿರುವುದು ಸಮರ್ಥನೀಯ ಎಂದರು.

ವಾದ ಪ್ರತಿವಾದ ಆಲಿಸಿದ ಕೋರ್ಟ್, ಈ ಕುರಿತು ವಿಸ್ತೃತ ವಿಚಾರಣೆ ಅಗತ್ಯವಿದೆ ಎಂದ ಜೂ.2ನೇ ವಾರಕ್ಕೆ ವಿಚಾರಣೆ ಮುಂದೂಡಿತು.