ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೇ 2ರಂದು ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಯಲಿರುವ ಈ ಪ್ರಕ್ರಿಯೆಯಲ್ಲಿ, ತಿರಸ್ಕೃತ ಮತಪತ್ರಗಳ ಮರುಪರಿಶೀಲನೆ ಮತ್ತು ಅಂತಿಮ ಎಣಿಕೆ ನಡೆಯಲಿದೆ.
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಗೆ ಸಂಬಂಧಿಸಿದ ಅಂಚೆ ಮತಗಳ ಮರು ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತವು ಸಂಪೂರ್ಣ ಸಿದ್ಧತೆಗಳನ್ನು ಕೈಗೊಂಡಿದೆ. ಮೇ 2ರಂದು ಬೆಳಗ್ಗೆ 9 ಗಂಟೆಗೆ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಅಂಚೆ ಮತಪತ್ರಗಳ ಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಮೊದಲ ಮಹಡಿಯಲ್ಲಿ ಮತ ಎಣಿಕೆಗೆ ಅಗತ್ಯ ಸೌಕರ್ಯಗಳನ್ನು ಸಿದ್ಧಪಡಿಸಲಾಗಿದೆ ಎಂದರು. ಬೆಳಗ್ಗೆ 7ರಿಂದ 7.30ರೊಳಗೆ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು, ಶೃಂಗೇರಿ ಕ್ಷೇತ್ರಕ್ಕೆ ಸಂಬಂಧಿಸಿದ ಅಂಚೆ ಮತಪತ್ರಗಳನ್ನು ಕಠಿಣ ಪೊಲೀಸ್ ಭದ್ರತೆ ಹಾಗೂ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯೊಂದಿಗೆ ಮತ ಎಣಿಕಾ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಬಳಿಕ ಬೆಳಗ್ಗೆ 9ರಿಂದ ಅಧಿಕೃತವಾಗಿ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಆಡಳಿತ) ಗೌರವ್ ಕುಮಾರ್ ಶೆಟ್ಟಿ ಮಾತನಾಡಿ, 2023ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 12 ಅಭ್ಯರ್ಥಿಗಳು ಅಥವಾ ಅವರ ಏಜೆಂಟ್‌ಗಳ ಸಮ್ಮುಖದಲ್ಲೇ ಮರು ಪರಿಶೀಲನೆ ಮತ್ತು ಎಣಿಕೆ ನಡೆಯಲಿದೆ ಎಂದು ಹೇಳಿದರು. ಈ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲು ತಿರಸ್ಕೃತಗೊಂಡ ಅಂಚೆ ಮತಪತ್ರಗಳನ್ನು ಮರು ಪರಿಶೀಲಿಸಲಾಗುತ್ತದೆ. ನಂತರ ಅರ್ಹವಾಗಿರುವ ಮತಪತ್ರಗಳನ್ನು ಈಗಾಗಲೇ ಪರಿಗಣಿಸಲಾದ ಮತಗಳೊಂದಿಗೆ ಸೇರಿಸಿ ಅಂತಿಮ ಎಣಿಕೆ ನಡೆಸಲಾಗುತ್ತದೆ ಎಂದು ವಿವರಿಸಿದರು.
ಒಟ್ಟು 1822 ಅಂಚೆ ಮತಪತ್ರಗಳು ಬಂದಿದ್ದು, ಅವುಗಳಲ್ಲಿ 279 ಮತಪತ್ರಗಳನ್ನು ತಿರಸ್ಕರಿಸಲಾಗಿತ್ತು. ಉಳಿದ 1543 ಮತಪತ್ರಗಳನ್ನು ಅರ್ಹವೆಂದು ಪರಿಗಣಿಸಲಾಗಿತ್ತು. ಈಗ ಮರು ಪರಿಶೀಲನೆಯಲ್ಲಿ ತಿರಸ್ಕೃತ ಮತಗಳಲ್ಲಿ ಕೆಲವು ಮಾನ್ಯವಾಗಿರುವುದು ಕಂಡುಬಂದರೆ, ಅವುಗಳನ್ನು ಕೂಡ ಸೇರಿಸಿ ಮರು ಎಣಿಕೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಭದ್ರತೆಗೆ ಕಟ್ಟುನಿಟ್ಟಿನ ಕ್ರಮ
ಅಂಚೆ ಮತ ಎಣಿಕೆ ಪ್ರಕ್ರಿಯೆಗಾಗಿ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, ಇಬ್ಬರು ಎಣಿಕೆ ಸಹಾಯಕರು, ಒಬ್ಬ ಮೇಲ್ವಿಚಾರಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್ ಸೇರಿದಂತೆ ಆರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ, ಸ್ಟ್ರಾಂಗ್ ರೂಂನಿಂದ ಮತಪತ್ರಗಳನ್ನು ಎಣಿಕಾ ಕೇಂದ್ರಕ್ಕೆ ಸಾಗಿಸುವುದು ಹಾಗೂ ಕೇಂದ್ರದ ಭದ್ರತೆಗಾಗಿ ಸುಮಾರು 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಎಣಿಕಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ನಿಯಮಗಳು
ಮತ ಎಣಿಕೆ ಪ್ರಕ್ರಿಯೆ ಆರಂಭವಾದ ಬಳಿಕ ಅಭ್ಯರ್ಥಿಗಳು ಅಥವಾ ಏಜೆಂಟ್‌ಗಳು ಕೇಂದ್ರದಿಂದ ಹೊರಗೆ ಹೋದರೆ, ಅವರಿಗೆ ಮರು ಪ್ರವೇಶ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದು ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಶಿಸ್ತನ್ನು ಕಾಪಾಡಲು ಕೈಗೊಂಡ ಕ್ರಮವಾಗಿದೆ.
ಅಭ್ಯರ್ಥಿಗಳೊಂದಿಗೆ ಪೂರ್ವಭಾವಿ ಸಭೆ
ಮರು ಎಣಿಕೆಗೆ ಮುನ್ನ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರು ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಿಜೇತ ಶಾಸಕ ರಾಜೇಗೌಡ, ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಗೂ ಜೆಡಿಎಸ್ ಅಭ್ಯರ್ಥಿ ಸುಧಾಕರ ಎಸ್. ಶೆಟ್ಟಿ ಸೇರಿದಂತೆ ಇತರರು ಭಾಗವಹಿಸಿದರು.
ಅಂಚೆ ಮತಪತ್ರಗಳ ಪರಿಶೀಲನೆ ವಿಧಾನ
ಅಂಚೆ ಮತಪತ್ರಗಳ ಪರಿಶೀಲನೆ ವೇಳೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಅಂಚೆ ಮತಪತ್ರದ ಲಕೋಟೆಯನ್ನು ಫಾರಂ 13(ಸಿ) ಎಂದು ಕರೆಯಲಾಗುತ್ತದೆ. ಅದರೊಳಗಿನ ಮತದಾರರ ದೃಢೀಕರಣ ಪತ್ರವನ್ನು ಫಾರಂ 13(ಬಿ) ಎಂದು, ಮತ್ತು ಮತಪತ್ರವನ್ನು ಫಾರಂ 13(ಎ) ಎಂದು ಗುರುತಿಸಲಾಗುತ್ತದೆ.
ಫಾರಂ 13(ಬಿ) ಕಡ್ಡಾಯವಾಗಿದ್ದು, ಅದು ಇಲ್ಲದಿದ್ದರೆ ಮತಪತ್ರ ತಿರಸ್ಕೃತವಾಗುತ್ತದೆ. ಅದೇ ರೀತಿ, ಫಾರಂ 13(ಎ)ಯಲ್ಲಿ ಮತದಾರರ ಸಹಿ ಹಾಗೂ ಗಜೆಟೆಡ್ ಅಧಿಕಾರಿಯ ದೃಢೀಕರಣ ಇರಬೇಕು. ಇಲ್ಲದಿದ್ದರೆ ಮತಪತ್ರವನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ. ಜೊತೆಗೆ, ದೃಢೀಕರಣ ಪತ್ರದ ಕ್ರಮ ಸಂಖ್ಯೆ ಮತ್ತು ಮತಪತ್ರದ ಸಂಖ್ಯೆಗಳು ಹೊಂದಿಕೆಯಾಗಬೇಕು. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಮತ ಚಲಾಯಿಸಿದರೆ ಅಥವಾ ಸ್ಪಷ್ಟತೆ ಇಲ್ಲದಿದ್ದರೆ, ಅಂತಹ ಮತಪತ್ರಗಳನ್ನೂ ತಿರಸ್ಕರಿಸಲಾಗುತ್ತದೆ.
ನಿಷೇಧಾಜ್ಞೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳು
ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಮದ್ಯ ಮಾರಾಟ ಸಂಪೂರ್ಣ ಬಂದ್ ಇರಲಿದೆ. ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಸಂಪೂರ್ಣ ತಡೆ ವಿಧಿಸಲಾಗಿದ್ದು, ವಿಜಯೋತ್ಸವ, ಘೋಷಣೆ ಕೂಗು ಹಾಗೂ ಧ್ವನಿವರ್ಧಕಗಳ ಬಳಕೆಗೂ ನಿಷೇಧ ಹೇರಲಾಗಿದೆ. ಸಾರ್ವಜನಿಕ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೈಬರ್ ಕಫೆ ಹಾಗೂ ಝರಾಕ್ಸ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ.
ಒಟ್ಟಿನಲ್ಲಿ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತವು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಅಂಚೆ ಮತಪತ್ರ ಮರು ಎಣಿಕೆಗೆ ಪ್ರತ್ಯೇಕ ಮಾನದಂಡಗಳಿಲ್ಲ. ಸಾಮಾನ್ಯವಾಗಿ ಅಂಚೆ ಮತಪತ್ರ ಪರಿಶೀಲನೆ ಮತ್ತು ಎಣಿಕೆ ಗೆ ಅನುಸರಿಸುವ ನಿಯಮಾವಳಿಗಳನ್ನೇ ಈಗ ಅನುಸರಿಸಲಾಗುವುದು.
ಎನ್,ಎಂ.ನಾಗರಾಜ್, ಜಿಲ್ಲಾ ಚುನಾವಣಾಧಿಕಾರಿ, ಚಿಕ್ಕಮಗಳೂರು


