ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದ ಐಶ್ವರ್ಯ ಗೌಡ ಅವರಿಗೆ ಹೈಕೋರ್ಟ್‌ನಲ್ಲಿ ರಿಲೀಫ್ ಸಿಕ್ಕಿದೆ. ನ್ಯಾಯಾಲಯವು ಅವರ ವಿರುದ್ಧದ 5 ಪ್ರಮುಖ ಪ್ರಕರಣಗಳನ್ನು ರದ್ದುಗೊಳಿಸಿದೆ.
ಬೆಂಗಳೂರು (ಜು.06): ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದ ಐಶ್ವರ್ಯ ಗೌಡ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ 5 ಪ್ರಮುಖ ಪ್ರಕರಣಗಳನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠವು ರದ್ದುಪಡಿಸಿ ಆದೇಶ ಹೊರಡಿಸಿದೆ.
ಸಿವಿಲ್ ಸ್ವರೂಪದ ಪ್ರಕರಣ:
ಐಶ್ವರ್ಯ ಗೌಡ ಪರ ವಾದ ಮಂಡಿಸಿದ ವಕೀಲ ಎಸ್. ಸುನಿಲ್ ಕುಮಾರ್ ಅವರು, 'ದೂರುದಾರರು ನೀಡಿರುವ ದೂರುಗಳೆಲ್ಲವೂ ಹಣದ ವ್ಯವಹಾರ ಮತ್ತು ಅದರ ರಿಕವರಿ (Recovery) ಸ್ವರೂಪದ್ದಾಗಿವೆ. ಇಲ್ಲಿ ಯಾವುದೇ ಉದ್ದೇಶಪೂರ್ವಕ ಅಪರಾಧದ ಅಂಶಗಳಿಲ್ಲ. ಇದು ಕೇವಲ ಸಿವಿಲ್ ಸ್ವರೂಪದ ವಿವಾದವಾಗಿದೆ' ಎಂದು ವಾದಿಸಿದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ. ಇದೇ ವೇಳೆ ನಟ ಧರ್ಮೇಂದ್ರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನೂ ನ್ಯಾಯಾಲಯ ರದ್ದುಗೊಳಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಐಶ್ವರ್ಯ ಗೌಡ ವಿರುದ್ಧ ಈ ಹಿಂದೆ ಅತ್ಯಂತ ಗಂಭೀರವಾದ ವಂಚನೆಯ ಆರೋಪಗಳು ಕೇಳಿಬಂದಿದ್ದವು.
ವೈದ್ಯೆಗೆ ವಂಚನೆ: ಡಿ.ಕೆ. ಸುರೇಶ್ ಅವರ ತಂಗಿ ಎಂದು ನಂಬಿಸಿ ವೈದ್ಯೆ ಡಾ. ಮಂಜುಳಾ ಎಂಬುವವರಿಂದ 2.52 ಕೋಟಿ ರೂ. ನಗದು ಮತ್ತು 2 ಕೆ.ಜಿಗೂ ಹೆಚ್ಚು ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚಿನ್ನದ ವ್ಯಾಪಾರಿಗಳಿಗೆ ಮೋಸ: ಚಿನ್ನದಂಗಡಿ ಮಾಲೀಕರಿಂದ ಸುಮಾರು 8.41 ಕೋಟಿ ರೂ. ಮೌಲ್ಯದ 14.6 ಕೆ.ಜಿ ಚಿನ್ನ ಪಡೆದು ಹಣ ನೀಡದೆ ಸತಾಯಿಸಿದ ಆರೋಪವೂ ಇವರ ಮೇಲಿತ್ತು. ಇನ್ನೊಂದು ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಗೆ ಬರೋಬ್ಬರಿ 14 ಕೋಟಿ ರೂ. ವಂಚಿಸಿದ ದೂರು ದಾಖಲಾಗಿತ್ತು.
ಪೊಲೀಸ್ ದಾಳಿ: ವಂಚನೆ ದೂರುಗಳು ಹೆಚ್ಚಾದಾಗ ಪೊಲೀಸರು ಐಶ್ವರ್ಯ ಗೌಡ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬಿಎಂಡಬ್ಲ್ಯು, ಆಡಿ ಅಂತಹ ಐಷಾರಾಮಿ ಕಾರುಗಳು ಹಾಗೂ 29 ಕೆ.ಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.
ತಾನು ಪ್ರಭಾವಿ ರಾಜಕಾರಣಿಗಳ ಕುಟುಂಬಕ್ಕೆ ಸೇರಿದವಳು ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಮತ್ತು ಗೋಲ್ಡ್ ಬ್ಯುಸಿನೆಸ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿ ನಂಬಿಕೆ ದ್ರೋಹ ಎಸಗುತ್ತಿದ್ದಾರೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿತ್ತು. ಆದರೆ ಈಗ ಹೈಕೋರ್ಟ್ ಈ ಎಲ್ಲಾ ಪ್ರಕರಣಗಳಲ್ಲಿ ಐಶ್ವರ್ಯ ಗೌಡ ಮತ್ತು ಅವರ ಪತಿ ಹರೀಶ್ ಅವರಿಗೆ ದೊಡ್ಡ ರಿಲೀಫ್ ನೀಡಿದೆ.


