ಅಪ್ರಾಪ್ತೆಯಾಗಿದ್ದ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣದಲ್ಲಿ ವ್ಯಕ್ತಿಯೋರ್ವನನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ. 

ಬೆಂಗಳೂರು (ಮೇ.24): ಅಪ್ರಾಪ್ತೆಯಾಗಿದ್ದ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣದಲ್ಲಿ ವ್ಯಕ್ತಿಯೋರ್ವನನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ. ಪ್ರಕರಣದಿಂದ ಮಡಿಕೇರಿಯ ಮಡೆ ಗ್ರಾಮದ ವಿಜಯ ಅಲಿಯಾಸ್‌ ವಿಜಯಕುಮಾರ್‌ನನ್ನು ಖುಲಾಸೆಗೊಳಿಸಿ ಕೊಡಗಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಈ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಕೆ.ಎಸ್‌. ಮುದಗಲ್‌ ಮತ್ತು ರಾಜೇಂದ್ರ ಬದಾಮಿಕರ್‌ ಅವರ ನೇತೃತ್ವದ ವಿಭಾಗೀಯ ಪೀಠ, ಆರೋಪಿಯು 15 ವರ್ಷದ ತನ್ನ ಸೋದರ ಸಂಬಂಧಿಯ ಜೊತೆ ಸಂಭೋಗ ನಡೆಸಿ ಗರ್ಭಿಣಿಯನ್ನಾಗಿಸಿದ್ದಾನೆ. ನಂತರ ಮದುವೆಯಾಗದೆ ಪರಾರಿಯಾಗುವ ಮೂಲಕ ಆಕೆಯನ್ನು ವಂಚಿಸಿದ್ದಾನೆ. ಇದಕ್ಕೆ ಪೂರಕ ಸಾಕ್ಷ್ಯಧಾರಗಳನ್ನು ತನಿಖಾಧಿಕಾರಿಗಳು ಒದಗಿಸಿದ್ದಾರೆ. 

ಬೆಂಗಳೂರಿನಲ್ಲಿ 53 ಅಂಡರ್‌ ಪಾಸ್‌ಗಳ ಪರಿಶೀಲನೆಗೆ ಬಿಬಿಎಂಪಿ ಸಜ್ಜು

ಆದರೆ, ವಿಚಾರಣಾ ನ್ಯಾಯಾಲಯ ಸಾಕ್ಷ್ಯಧಾರಗಳನ್ನು ಪರಿಗಣಿಸದೆ ಕಾನೂನುಬಾಹಿರವಾಗಿ ನಡೆದು ಕೊಂಡಿದೆ ಹೀಗಾಗಿ, ಆರೋಪಿಯನ್ನು ಖುಲಾಸೆ ಮಾಡಿರುವ ಆದೇಶ ನ್ಯಾಯದಾನಕ್ಕೆ ಮಾರಕವಾಗಿದ್ದು, ರದ್ದುಪಡಿಸಲು ಅರ್ಹವಾಗಿದೆ ಎಂದು ಆದೇಶಿಸಿದೆ. ನಂತರ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿದ ನ್ಯಾಯಪೀಠ, ಪ್ರಕರಣದಲ್ಲಿ ವಿಜಯ್‌ ಕುಮಾರ್‌ನ್ನು ದೋಷಿಯಾಗಿ ಪರಿಗಣಿಸಿತು. ಜತೆಗೆ, ಅತ್ಯಾಚಾರ ಮತ್ತು ವಂಚನೆ ಅಪರಾಧದಡಿ ವಿಜಯ್‌ ಕುಮಾರ್‌ಗೆ ಶಿಕ್ಷೆ ವಿಧಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.

ಪ್ರಕರಣದ ವಿವರ: ಸಂತ್ರಸ್ತೆಯು 1992ರ ಫೆ.29ರಂದು ಜನಿಸಿದ್ದು, ಆರೋಪಿಯು ಆಕೆಯ ಚಿಕ್ಕಪ್ಪನ ಮಗನಾಗಿದ್ದಾನೆ. 2008ರ ಜನವರಿಯಲ್ಲಿ ಸಂತ್ರಸ್ತೆಯು ಆರೋಪಿಯ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದಳು. ಈ ವೇಳೆ ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ, ಆಕೆಯೊಂದಿಗೆ ಸಂಭೋಗ ನಡೆಸಿದ್ದ. ಇದರಿಂದ ಆಕೆ ಗರ್ಭಿಣಿಯಾಗಿದ್ದು, ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಊರಿನವರ ಪಂಚಾಯಿತಿಯಲ್ಲಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದ ಆರೋಪಿ ಬಳಿಕ ನಾಪತ್ತೆಯಾಗಿದ್ದ. ಇದರಿಂದ ಆತನ ವಿರುದ್ಧ ದೂರು ದಾಖಲಾಗಿತ್ತು. ಈ ಮಧ್ಯೆ ಸಂತ್ರಸ್ತೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ನಂತರ ಆಕೆ ಮತ್ತೊಂದು ಮದುವೆಯಾಗಿದ್ದಳು. ಈ ಸಂಬಂಧದಿಂದ ಮತ್ತೊಂದು ಮಗು ಪಡೆದಿದ್ದಳು.

ಜಂತರ್‌ ಮಂತರ್‌ನಲ್ಲಿ ಕುಸ್ತಿಪಟುಗಳ ಹೋರಾಟ ನ್ಯಾಯಯುತ: ನಟ ಕಿಶೋರ್‌ ಬೆಂಬಲ

ಡಿಎನ್‌ಎ ವರದಿ ಸಲ್ಲಿಸಿಲ್ಲವೆಂದು ಖುಲಾಸೆಗೊಳಿಸಿ ಕೋರ್ಟ್‌ ಆದೇಶ: ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ವಿಜಯ್‌ಕುಮಾರ್‌ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ವಿಚಾರಣಾಧೀನ ನ್ಯಾಯಾಲಯವು ಸಂತ್ರಸ್ತೆಯ ವಯಸ್ಸು ಸಾಬೀತಾಗಿಲ್ಲ. ಆರೋಪಿ ಮತ್ತು ಸಂತ್ರಸ್ತೆಯ ನಡುವಿನ ಸಂಬಂಧ ಒಪ್ಪಿತವಾಗಿತ್ತು. ಆರೋಪಿಯು ಸಂತ್ರಸ್ತೆಯ ಜೊತೆಗೆ ಹೊಂದಿದ್ದ ಸಂಭೋಗದಿಂದ ಆಕೆ ಗರ್ಭಿಣಿಯಾಗಿದ್ದಳು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಂಶವಾಹಿ ಪರೀಕ್ಷೆ ವರದಿ (ಡಿಎನ್‌ಎ) ಸಲ್ಲಿಸಿಲ್ಲ ಎಂದು ಕಾರಣ ನೀಡಿ, ಆರೋಪಿಯನ್ನು ಖುಲಾಸೆಗೊಳಿಸಿ 2016ರ ಮಾ.10ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.