PSI Scam: ಯಾವ ಹೋರಾಟ ನಡೆಸಿ ಹಾಗರಗಿ ಜೈಲಲ್ಲಿ ಇದ್ದಾರೆ?: ಹೈಕೋರ್ಟ್
ಕರ್ನಾಟಕ ನರ್ಸಿಂಗ್ ಮಂಡಳಿ ಕಾರ್ಯ ವೈಖರಿಗೆ ಸಂಬಂಧಿಸಿದಂತೆ 2020ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದ್ದ ದಿವ್ಯಾ ಹಾಗರಗಿ (ಪಿಎಸ್‌ಐ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ) ಯಾವ ಕಾರಣಕ್ಕೆ ಜೈಲಿನಲ್ಲಿದ್ದಾರೆ.
ಬೆಂಗಳೂರು (ಜು.19): ಕರ್ನಾಟಕ ನರ್ಸಿಂಗ್ ಮಂಡಳಿ ಕಾರ್ಯ ವೈಖರಿಗೆ ಸಂಬಂಧಿಸಿದಂತೆ 2020ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದ್ದ ದಿವ್ಯಾ ಹಾಗರಗಿ (ಪಿಎಸ್‌ಐ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ) ಯಾವ ಕಾರಣಕ್ಕೆ ಜೈಲಿನಲ್ಲಿದ್ದಾರೆ, ಯಾವ ಸಾರ್ವಜನಿಕ ಹೋರಾಟ ನಡೆಸಿ ಜೈಲಿಗೆ ಹೋಗಿದ್ದಾರೆ ಎಂಬ ಬಗ್ಗೆ ಹೈಕೋರ್ಟ್ ಸೋಮವಾರ ವಿವರಣೆ ಕೇಳಿದೆ.
ದಿವ್ಯಾ ಹಾಗರಗಿ ಅವರು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಕಾರ್ಯ ವೈಖರಿ ವಿರುದ್ಧ 2020ರಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಆ ಅರ್ಜಿ ಸೋಮವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಸೋಮವಾರ ವಿಚಾರಣೆಗೆ ಹಾಜರಾದ ದಿವ್ಯಾ ಪರ ವಕೀಲರು, ತಮ್ಮ ಕಕ್ಷಿದಾರರು ಜೈಲಿನಲ್ಲಿದ್ದಾರೆ, ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ, ಆದ್ದರಿಂದ ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಕೋರಿದರು.
PSI Recruitment Scam; ಅಮೃತ್ ಪಾಲ್ ಮಂಪರು ಪರೀಕ್ಷೆಗೆ ಸಿಐಡಿಯಿಂದ ಅರ್ಜಿ
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪಿಐಎಲ್ ಸಲ್ಲಿಸಿದವರು ಜೈಲಿನಲ್ಲಿರುವುದು ಕುತೂಹಲಕರ ವಿಚಾರವಾಗಿದೆ, ಅರ್ಜಿದಾರರು ಜೈಲಿಗೆ ಹೋಗಿರುವ ಕಾರಣ ತಿಳಿದು ಮಾಹಿತಿ ನೀಡುವಂತೆ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಒಂದು ವಾರ ಮುಂದೂಡಿತು.
ದಿವ್ಯಾ ಹಾಗರಗಿ 2020ರಲ್ಲಿ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನ ನಾಮ ನಿರ್ದೇಶಿತ ಸದಸ್ಯರಾಗಿದ್ದರು. 2020ರ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ನರ್ಸಿಂಗ್ ಕೌನ್ಸಿಲ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ಕರ್ನಾಟಕ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಪ್ರಾಧಿಕಾರದ ವಿಶೇಷಾಧಿಕಾರಿ ಡಾ.ಎನ್. ರಾಮಕೃಷ್ಣಾರೆಡ್ಡಿ ಅವರನ್ನು ಪ್ರತಿವಾದಿ ಮಾಡಿದ್ದರು.
ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ತಪ್ಪಿತಸ್ಥರನ್ನು ಬಿಟ್ಟಿಲ್ಲ: ಸಚಿವ ಹಾಲಪ್ಪ
2020ರ ನ.5ರಂದು ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯಪೀಠ, ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಹಾಗಾಗಿ, ಅದನ್ನು ಪಿಐಎಲ್ ಆಗಿ ಪರಿಗಣಿಸಲು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠವನ್ನು ಕೋರಿತ್ತು. ನಂತರ ವಿಭಾಗೀಯ ಪೀಠ ಹಲವು ಬಾರಿ ವಿಚಾರಣೆ ನಡೆಸಿದೆ. ವಿವಿಧ ಕಾರಣಗಳಿಂದ ಅರ್ಜಿ ವಿಚಾರಣೆ ಮುಂದೂಡಿಕೆಯಾಗುತ್ತಾ ಬಂದಿದೆ.