ಬೆಂಗಳೂರು(ಜೂ.12): ಕೊರೋನಾ ಪರಿಸ್ಥಿತಿಯನ್ನು ‘ಸಾರ್ವಜನಿಕ ತುರ್ತು ಪರಿಸ್ಥಿತಿ’ಯಾಗಿ ಪರಿಗಣಿಸಿ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿರುವುದನ್ನು ಒಪ್ಪದ ಹೈಕೋರ್ಟ್‌, ಸರ್ಕಾರ ಈ ಕುರಿತು ಹೊಸದಾಗಿ ಶುಕ್ರವಾರದೊಳಗೆ ನಿರ್ಧಾರ ಕೈಗೊಳ್ಳದಿದ್ದರೆ ಕೆಲಸದ ಅವಧಿ ಹೆಚ್ಚಿಸಿದ ಅಧಿಸೂಚನೆಗೆ ತಡೆಯಾಜ್ಞೆ ನೀಡಲಾಗುವುದು ಎಂದು ಎಚ್ಚರಿಸಿದೆ.

ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು 9 ತಾಸುಗಳಿಂದ 10 ತಾಸುಗಳಿಗೆ ಹೆಚ್ಚಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಲು ಕೋರಿ ಬೆಂಗಳೂರಿನ ದೀಪಾಂಜಲಿ ನಗರದ ನಿವಾಸಿ ಎಚ್‌. ಮಾರುತಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಹಾಗೂ ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೈಗಾರಿಕೆಗಳ ಕಾಯ್ದೆ ಸೆಕ್ಷನ್‌ 5 ಉಲ್ಲೇಖಿಸಿ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು ಸರ್ಕಾರ ಹೆಚ್ಚಿಸಿದೆ. ಸೆಕ್ಷನ್‌ 5ರ ಪ್ರಕಾರ ದೇಶದ ಭದ್ರತೆಗೆ ತೊಂದರೆಯಾದಾಗ ಅಂದರೆ ಹೊರಗಿನ ಆಕ್ರಮಣ ಮತ್ತು ಆಂತರಿಕ ತೊಂದರೆಗಳಿದ್ದಾಗ ಇಂತಹ ತೀರ್ಮಾನ ಕೈಗೊಳ್ಳಲು ಅವಕಾಶವಿದೆ. ಆದರೆ, ಕೊರೋನಾ ಹಾಗೂ ಲಾಕ್‌ಡೌನ್‌ ಪರಿಸ್ಥಿತಿಯನ್ನು ಸೆಕ್ಷನ್‌ 5ರಡಿ ‘ಸಾರ್ವಜನಿಕ ತುರ್ತು ಪರಿಸ್ಥಿತಿ’ ಎಂದು ಪರಿಗಣಿಸಿ, ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿ ಹೊರಡಿಸಿರುವ ಅಧಿಸೂಚನೆಯನ್ನು ಒಪ್ಪಲಾಗದು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಕೊರೋನಾ ಸಾವಿನ ಸಂಖ್ಯೆ ಮುಚ್ಚಿಟ್ಟ 2 ರಾಜ್ಯಗಳು..!

ಹೊಸ ಅಧಿಸೂಚನೆ:

ಸರ್ಕಾರಿ ವಕೀಲರು ಉತ್ತರಿಸಿ, ಕಾರ್ಮಿಕರ ಕೆಲಸ ಅವಧಿ ಹೆಚ್ಚಿಸಲು ತಪ್ಪಾಗಿ ಸೆಕ್ಷನ್‌ 5 ಉಲ್ಲೇಖಿಸಲಾಗಿದೆ. ಆದರೆ, ಆ ಸೆಕ್ಷನ್‌ 65(2) ಅಡಿಯಲ್ಲಿ ಇಂತಹ ತೀರ್ಮಾನ ಕೈಗೊಂಡು ಅಧಿಸೂಚನೆ ಹೊರಡಿಸಲು ಸಾಧ್ಯವಿದೆ. ಅದರಂತೆ ಸೆಕ್ಷನ್‌ 5ರಡಿಯಲ್ಲಿ ಹೊರಡಿಸುವ ಅಧಿಸೂಚನೆಯನ್ನು ಹಿಂಪಡೆದು ಸೆಕ್ಷನ್‌ 65(2) ಅಡಿಯಲ್ಲಿ ಹೊಸ ಅಧಿಸೂಚನೆ ಹೊರಡಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ಸೆಕ್ಷನ್‌ 5ರ ಉಲ್ಲೇಖಿಸಿ ಅಧಿಸೂಚನೆ ಹೊರಡಿಸಿರುವ ಬಗ್ಗೆ ಶುಕ್ರವಾರದೊಳಗೆ ರಾಜ್ಯ ಸರ್ಕಾರ ಹೊಸದಾಗಿ ತೀರ್ಮಾನ ತೆಗೆದುಕೊಳ್ಳದೇ ಹೋದರೆ ಸದ್ಯ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು ಹೆಚ್ಚಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.

ಕಾರ್ಖಾನೆಗಳ ಕಾಯ್ದೆ-1984ರ ಸೆಕ್ಷನ್‌ 51 ಮತ್ತು 54ರಿಂದ ಎಲ್ಲಾ ಕಾರ್ಖಾನೆಗಳಿಗೆ ವಿನಾಯಿತಿ ನೀಡಿ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪರಿಣಾಮ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿ 9 ತಾಸುಗಳಿಂದ 10 ತಾಸು ಹಾಗೂ ಒಂದು ವಾರದ ಕೆಲಸದ ಅವಧಿ 48 ತಾಸುಗಳಿಂದ 60 ತಾಸುಗಳಿಗೆ ಹೆಚ್ಚಳವಾಗಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಹೀಗಾಗಿ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.