ನವದೆಹಲಿ(ಜೂ.12): ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕಿತರು ಮತ್ತು ಸೋಂಕಿನಿಂದ ಸಾವನ್ನಪ್ಪಿದವರ ನೈಜ ಸಂಖ್ಯೆ ಮುಚ್ಚಿಡಲಾಗುತ್ತಿದೆ ಎನ್ನುವ ಆರೋಪಗಳ ಬೆನ್ನಲ್ಲೇ, ದೆಹಲಿ ಹಾಗೂ ತಮಿಳುನಾಡಿನಲ್ಲಿ ಸಾವಿನ ಸಂಖ್ಯೆ ಪ್ರಕಟದಲ್ಲಿ ಭಾರೀ ಏರುಪೇರಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅದರಲ್ಲೂ ದೆಹಲಿಯಲ್ಲಿ 1100ಕ್ಕೂ ಹೆಚ್ಚು ಸಾವಿನ ಪ್ರಕರಣಗಳು, ರಾಜ್ಯ ಸರ್ಕಾರ ಪ್ರಕಟಿಸುವ ದೈನಂದಿನ ಮಾಹಿತಿಯಲ್ಲೇ ಸೇರಿಕೊಂಡೇ ಇಲ್ಲ ಎಂಬುದು ಬಹಿರಂಗವಾಗಿದೆ.

"

ದೆಹಲಿಯ ಆಪ್‌ ಸರ್ಕಾರ ಬುಧವಾರ ರಾತ್ರಿ ಬಿಡುಗಡೆ ಮಾಡಿದ್ದ ವರದಿಗಳ ಅನ್ವಯ, ರಾಜಧಾನಿಯಲ್ಲಿ 984 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಬಿಜೆಪಿಯ ಆಡಳಿತ ಇರುವ ದೆಹಲಿ ಮಹಾನರ ಪಾಲಿಕೆ ಕೊರೋನಾದಿಂದ ಮೃತ ಪಟ್ಟವರ ಸಂಖ್ಯೆಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಈವರೆಗೆ ಒಟ್ಟು 2098 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ತನ್ನ ವ್ಯಾಪ್ತಿಯ 3 ಚಿತಾಗಾರಗಳಲ್ಲಿ ಈವರೆಗೆ 2098 ಕೊರೋನಾ ಸೋಂಕಿತರ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂಬ ಮಾಹಿತಿಯನ್ನು ಆಧರಿಸಿ ಅದು ಈ ಅಂಕಿ ಅಂಶ ನೀಡಿದೆ. ಇದು ದೆಹಲಿಯಲ್ಲಿ ಆಪ್‌ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕೊರೋನಾ ಸೋಂಕಿತರಲ್ಲಿ ಭಾರತಕ್ಕೆ ವಿಶ್ವದಲ್ಲೇ 4ನೇ ಸ್ಥಾನ..!

ಮತ್ತೊಂದೆಡೆ ತಮಿಳುನಾಡಲ್ಲೂ ಕನಿಷ್ಠ 200 ಸಾವುಗಳ ಲೆಕ್ಕ ಬಿಟ್ಟು ಹೋಗಿದೆ ಎಂಬ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರದ ಮಾಹಿತಿ ಅನ್ವಯ ಈವರೆಗೆ ರಾಜ್ಯದಲ್ಲಿ 326 ಜನ ಸಾವನ್ನಪ್ಪಿದ್ದು, ಈ ಪೈಕಿ 260 ಜನರು ಕೇವಲ ರಾಜಧಾನಿ ಚೆನ್ನೈ ಒಂದರಲ್ಲೇ ಸಾವನ್ನಪ್ಪಿದ್ದಾರೆ. ಆದರೆ ನಗರದ ವಿವಿಧ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ 200ಕ್ಕೂ ಹೆಚ್ಚು ಸಾವಿನ ಲೆಕ್ಕಾಚಾರ ರಾಜ್ಯ ಆರೋಗ್ಯ ಇಲಾಖೆಯನ್ನೇ ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ, ಲೆಕ್ಕಾಚಾರದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿದೆ.

ಈ ಹಿಂದೆ ತೆಲಂಗಾಣದಲ್ಲೂ ಸೋಂಕಿತರ ಹಾಗೂ ಸಾವನ್ನಪ್ಪಿದವರ ನಿಖರ ಸಂಖ್ಯೆ ಮರೆ ಮಾಚಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತೆಲಂಗಾಣ ಹೈ ಕೋರ್ಟ್‌ ಕೆ. ಚಂದ್ರಶೇಖರ್‌ ರಾವ್‌ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.