Asianet Suvarna News Asianet Suvarna News

ಪೋಷಕರ ತಪ್ಪಿಗೆ ಮಗುವಿಗೆ ತೊಂದರೆ ಆಗಬಾರದು: ಜನನ ಪ್ರಮಾಣ ಪತ್ರ ಸರಿಪಡಿಸಲು ಹೈಕೋರ್ಟ್​ ಸೂಚನೆ

ಪೋಷಕರು ಮಾಡಿರುವ ತಪ್ಪಿನಿಂದ ಮಗು ತೊಂದರೆ ಅನುಭವಿಸುವಂತಾಗಬಾರದು ಎಂಬುದಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಯುವತಿಯೊಬ್ಬಳ ಜನನ ಪ್ರಮಾಣಪತ್ರದಲ್ಲಿ ಆಕೆಯ ಹೆಸರು ನಮೂದಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿದೆ. 

karnataka high court notice to correct the birth certificate of the child gvd
Author
First Published Sep 20, 2023, 9:21 AM IST

ಬೆಂಗಳೂರು (ಸೆ.20): ಪೋಷಕರು ಮಾಡಿರುವ ತಪ್ಪಿನಿಂದ ಮಗು ತೊಂದರೆ ಅನುಭವಿಸುವಂತಾಗಬಾರದು ಎಂಬುದಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಯುವತಿಯೊಬ್ಬಳ ಜನನ ಪ್ರಮಾಣಪತ್ರದಲ್ಲಿ ಆಕೆಯ ಹೆಸರು ನಮೂದಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿದೆ. ಜನನ ಪ್ರಮಾಣ ಪತ್ರದಲ್ಲಿ ತನ್ನ ಹೆಸರು ನಮೂದಿಸಲು ನಿರಾಕರಿಸಿದ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಕೇರಳದ ಎರ್ನಾಕುಲಂ ನಿವಾಸಿ ಫಾತಿಮಾ ರಿಚೆಲ್ ಮಾಥರ್ ಎಂಬಾಕೆ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರ ಪೀಠ ಈ ನಿರ್ದೇಶನ ನೀಡಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 2000ರ ಏ.28ರಂದು ಅರ್ಜಿದಾರೆ ಜನಿಸಿದ್ದಳು. ಆಗ ಆಕೆಯ ತಂದೆ ಮತ್ತು ತಾಯಿಯ ಹೆಸರಿನಲ್ಲಿ ಜನನ ಪ್ರಮಾಣ ಪತ್ರ ನೀಡಲಾಗಿತ್ತು. ಅದರಲ್ಲಿ ಮಗುವಿನ (ಅರ್ಜಿದಾರೆಯ) ಹೆಸರು ನಮೂದಿಸಿರಲಿಲ್ಲ. ನಂತರ ಅವರ ಕುಟುಂಬವು ಕೇರಳಕ್ಕೆ ಸ್ಥಳಾಂತರಗೊಂಡಿತ್ತು. ಅರ್ಜಿದಾರೆಯು ಶಾಲಾ-ಕಾಲೇಜು ಶಿಕ್ಷಣವು ಕೇರಳದಲ್ಲಿ, ಉನ್ನತ ಶಿಕ್ಷಣವನ್ನು ಸ್ಪೈನ್‌ ದೇಶದಲ್ಲಿ ಪೂರೈಸಿದ್ದಾರೆ. ಸದ್ಯ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗುವುದಕ್ಕಾಗಿ ಜನನ ಪ್ರಮಾಣ ಪತ್ರದಲ್ಲಿ ತನ್ನ ಹೆಸರು ನಮೂದಿಸುವಂತೆ 2022ರಲ್ಲಿ ಬಿಬಿಎಂಪಿಗೆ ಮನವಿ ಮಾಡಿದ್ದರು. 

Hassan: ಎಣ್ಣೆ ಕುಡಿಯುವ ಬೆಟ್ ಕಟ್ಟಿ ಯಮರಾಜನ ಫ್ಲೈಟ್‌ ಹತ್ತಿದ ವ್ಯಕ್ತಿ!

ಆದರೆ, ಕೇಂದ್ರ ಗೃಹ ಸಚಿವಾಲಯ ಸೂಚನೆಯಂತೆ 15 ವರ್ಷದ ಅವಧಿಯಲ್ಲಿ ಜನನ ಪ್ರಮಾಣ ಪತ್ರದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಈ ಸಮಯ 2015ಕ್ಕೆ ಪೂರ್ಣಗೊಂಡಿದೆ. ನಿಗದಿತ 15 ವರ್ಷ ಪೂರ್ಣಗೊಂಡರೂ ಮತ್ತೆ ಐದು ವರ್ಷ ಅವಧಿಯಲ್ಲಿ ಜನನ ಪ್ರಮಾಣ ಪತ್ರ ನೋಂದಾಯಿಸಿಕೊಳ್ಳಬಹುದು. ಅದರಂತೆ, ಹೆಚ್ಚುವರಿ ಅವಧಿಯೂ 2020ಕ್ಕೆ ಅಂತ್ಯಗೊಂಡಿದೆ. ಆದ ಕಾರಣ ಜನನ ಪ್ರಮಾಣ ಪತ್ರದಲ್ಲಿ ಹೆಸರನ್ನು ಸೇರ್ಪಡೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದ ಬಿಬಿಎಂಪಿ, ಅರ್ಜಿದಾರೆಯ ಮನವಿ ತಿರಸ್ಕರಿಸಿ 2023ರ ಜು.28ರಂದು ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸರ್ಕಾರಿ ಜಾಗ ಒತ್ತುವರಿ ಪತ್ತೆಗೆ 'ಲ್ಯಾಂಡ್‌ ಆಡಿಟ್‌' ನಡೆಸಿ: ಸಿಎಂ ಸಿದ್ದರಾಮಯ್ಯ

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಅರ್ಜಿದಾರರಿಗೆ ಸರ್ಕಾರದಿಂದ ನೀಡಿರುವ ವಿವಿಧ ದಾಖಲೆಗಳಲ್ಲಿ ಆಕೆಯ ಪೋಷಕರ ಹೆಸರಿದೆ. ಮಗು ಮತ್ತು ಪೋಷಕರು ಗುರುತು ಯಾವುದೇ ವಿವಾದವಿಲ್ಲ. ತಂದೆ-ತಾಯಿ ಮಗುವಿನ ಹೆಸರು ನೀಡಲು ವಿಳಂಬ ಮಾಡಿದ್ದಾರೆ ಎಂಬುದು ನಿಜ. ಆದರೆ, ಪೋಷಕರ ತಪ್ಪಿನಿಂದ ಮಗು ತೊಂದರೆ ಅನುಭವಿಸುವಂತಾಗಬಾರದು. ಪೋಷಕರ ವಿಳಂಬ ಮಾಡಿರುವ ಕಾರಣಕ್ಕೆ ಮಗುವಿನ ಹೆಸರಿನೊಂದಿಗೆ ಜನನ ಪ್ರಮಾಣ ಪತ್ರ ವಿತರಿಸಲು ನಿರಾಕರಿಸುವುದು ಸರಿಯಲ್ಲ. ಅರ್ಜಿದಾರೆ ಸದ್ಯ ವಯಸ್ಕಳಾಗಿದ್ದು, ಉದ್ಯೊಗದ ಹುಡುಕಾಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜನನ ಸ್ಥಳ ಧೃಢೀಕರಣ ಪ್ರಮಾಣ ಪತ್ರ ಅಗತ್ಯವಿದೆ. ಹಾಗಾಗಿ, 30 ದಿನದಲ್ಲಿ ಅರ್ಜಿದಾರೆಯ ಹೆಸರನ್ನು ಜನನ ಪ್ರಮಾಣ ಪತ್ರದಲ್ಲಿ ನಮೂದಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿದೆ.

Follow Us:
Download App:
  • android
  • ios