Asianet Suvarna News Asianet Suvarna News

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಿಂದ 'ನ್ಯಾಯಾಂಗ ನಿಂದನೆ' ನೋಟಿಸ್‌ ಜಾರಿ

ನ್ಯಾಯಾಲಯದ ಆದೇಶದ ಹೊರತಾಗಿಯೂ ಅನಧಿಕೃತವಾಗಿ ಉಳುಮೆ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಆದೇಶ ಹೊರಡಿಸಲು ಸಮಿತಿ ರಚಿಸದ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿದೆ.

Karnataka High Court issues Contempt of Court notice to siddaramaiah government rav
Author
First Published Apr 11, 2024, 1:05 PM IST

ಬೆಂಗಳೂರು (ಏ.11) :  ನ್ಯಾಯಾಲಯದ ಆದೇಶದ ಹೊರತಾಗಿಯೂ ಅನಧಿಕೃತವಾಗಿ ಉಳುಮೆ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಆದೇಶ ಹೊರಡಿಸಲು ಸಮಿತಿ ರಚಿಸದ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತಂತೆ ಮಂಗಳೂರು ತಾಲೂಕಿನ ಹರೇಕಳ ಗ್ರಾಮದ ನಿವಾಸಿ ಜೊರೆಮ್‌ ಡಿಸೋಜಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಚುನಾವಣಾ ಬಾಂಡ್‌: ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿತು.ರಾಜ್ಯದಲ್ಲಿ ಅನಧಿಕೃತವಾಗಿ ಉಳುಮೆ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಲು ಮತ್ತು ಆ ಜಮೀನಿನಲ್ಲಿ ಉಳುಮೆ ಮುಂದುವರಿಸಲು ಅನುಮತಿಸಲು ಕೋರಿ ಹಲವು ಮಂದಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆ ಮನವಿಯನ್ನು ಸಕ್ಷಮ ಸಮಿತಿ ಪರಿಶೀಲನೆ ನಡೆಸಬೇಕಿದೆ. ಹಾಗಾಗಿ, ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೋಲಾರದ ಭವರಹಳ್ಳಿ ನಿವಾಸಿ ಮಂಜುನಾಥ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 20ಕ್ಕೂ ಅಧಿಕ ಮಂದಿ 2019ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿ 2023ರ ಜು.14ರಂದು ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು ಹಾಜರಾಗಿ, ಸರ್ಕಾರ ಸಮಿತಿ ರಚನೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಸಮಿತಿ ರಚನೆಯಾದ ನಂತರ ಅರ್ಜಿದಾರರ ಮನವಿಗಳನ್ನು ಪರಿಗಣಿಸಿ ಕಾನೂನು ಪ್ರಕಾರ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಈ ಹೇಳಿಕೆ ದಾಖಲಿಸಿಕೊಂಡಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠ, ಅರ್ಜಿದಾರರ ಮಾದರಿಯಲ್ಲಿಯೇ ಇತರೆ ಅನೇಕ ಜನರು ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಆದ್ಯತೆ ಮೇರೆಗೆ ಶೀಘ್ರ ಸಮಿತಿ ರಚಿಸಬೇಕಿದೆ. ಹಾಗಾಗಿ, 2023ರ ಡಿ.15ರೊಳಗೆ ಸಮಿತಿ ರಚನೆ ಮಾಡಬೇಕು ಎಂದು ನಿರ್ದೇಶಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿತ್ತು.

ತ್ರಿಕಾಲ ಜ್ಞಾನಿ ಸ್ವಾಮಿಗಳೇ ಹೀಗೆ ಮಾಡಿದರೆ ಹೇಗೆ? ನ್ಯಾಯಾಂಗ ನಿಂದನೆ ಮಾಡಿದ ಶ್ರೀಗಳ ವಿರುದ್ಧ ಹೈಕೋರ್ಟ್ ಅಸಮಾಧಾನ 

ಏಕ ಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿ ಮೂರು ತಿಂಗಳು ಕಳೆದರೂ ರಾಜ್ಯ ಸರ್ಕಾರ ಮಾತ್ರ ಇನ್ನೂ ಸಮಿತಿ ರಚನೆ ಮಾಡಿಲ್ಲ. ಆದ್ದರಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಗೆತ್ತಿಕೊಳ್ಳಬೇಕು ಎಂದು ಕೋರಿ ಜೋರೆಮ್‌ ಡಿಸೋಜಾ ಇದೀಗ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

Follow Us:
Download App:
  • android
  • ios