ತಾಳಿ ಕಟ್ಟಲು ಪೆರೋಲ್: ಅಪರಾಧಿ ಮದ್ವೆಯಾಗಲು ಕೋರ್ಟ್ ಮೊರೆ ಹೋದ ಮಹಿಳೆ; ಹೈಕೋರ್ಟ್‌ನಿಂದ ಶಾದಿ ಭಾಗ್ಯ
ವಯಸ್ಸಾದ ಮಹಿಳೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ನೀತಾಳೊಂದಿಗೆ ತನ್ನ ಮಗನ ಮದುವೆಯನ್ನು ನೋಡುವುದು ತನ್ನ ಆಸೆಯಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು.
ಬೆಂಗಳೂರು (ಏಪ್ರಿಲ್ 4, 2023): ಮದುವೆಯಾಗಲು ಕೋರ್ಟ್ ಮೊರೆ ಹೋಗಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಕರುಣೆ ತೋರಿದೆ. ಮದ್ವೆಯಾಗೋಕೆ ಕೋರ್ಟ್‌ಗೆ ಯಾಕಪ್ಪಾ ಹೋಗ್ಬೇಕು ಅಂತೀರಾ..? ಆ ಮಹಿಳೆಯ ಪ್ರಿಯಕರ ಕೊಲೆ ಮಾಡಿದ ಹಿನ್ನೆಲೆ ಜೈಲಿನಲ್ಲಿ ಶಿಕ್ಷೆ ಅನುಭವಿಸ್ತಿದ್ದಾರೆ. ಆದರೂ, ಆಕೆ ತನ್ನ ಪ್ರಿಯಕರ ಅಪರಾಧಿಯಾದ್ರೂ ಪರ್ವಾಗಿಲ್ಲ. ಅವನೇ ತನಗೆ ತಾಳಿ ಕಟ್ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾಳೆ. ಅವರ ಜತೆಗೆ, ಅಪರಾಧಿಯ ತಾಯಿ ಸಹ ಮದುವೆಯಾಗಲು ತನ್ನ ಮಗನಿಗೆ ಪೆರೋಲ್ ನೀಡಬೇಕೆಂದು ಕೇಳಿಕೊಂಡಿದ್ದರು.
ಈ ಹಿನ್ನೆಲೆ, ಇದನ್ನು ಅಸಾಧಾರಣ ಸನ್ನಿವೇಶವೆಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಅಪರಾಧಿಯನ್ನು ತನ್ನ ಗೆಳತಿಯೊಂದಿಗೆ ಮದುವೆಯಾಗಲು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಕೊಲೆ ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯ ತಾಯಿ ಮತ್ತು ಪ್ರೇಮಿ ಕೋರ್ಟ್ ಮೊರೆ ಹೋಗಿದ್ದರು.
ಇದನ್ನು ಓದಿ: ಜೆಡಿಎಸ್ ಶಾಸಕ ಗೌರಿಶಂಕರ್ ಅನರ್ಹ ಎಂದ ಹೈಕೋರ್ಟ್: ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು 63ರ ಹರೆಯದ ಆತನ ತಾಯಿ ಮತ್ತು ಆತನನ್ನು ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡ ಮಹಿಳೆಯ ಮನವಿಗೆ ಸಮ್ಮತಿಸಿ 2023ರ ಏಪ್ರಿಲ್ 5ರಿಂದ 20ರವರೆಗೆ 15 ದಿನಗಳ ಕಾಲ ಆನಂದ್ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಿದರು. ಮತ್ತು ಅವರು ಜೈಲಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿದ್ದಾರೆ ಮತ್ತು ಪೆರೋಲ್ ಅವಧಿಯಲ್ಲಿ ಅವರು ಯಾವುದೇ ಇತರ ಅಪರಾಧವನ್ನು ಮಾಡಬಾರದು ಎಂದೂ ಕೋರ್ಟ್ ಹೇಳಿದೆ
ಕೊಲೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರತ್ನಮ್ಮ ಅವರ ಪುತ್ರ ಆನಂದ್ ಕಳೆದ ಆರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗ ಸುಮಾರು 30 ವರ್ಷ ವಯಸ್ಸಿನ ಜಿ. ನೀತಾ, ಕಳೆದ 9 ವರ್ಷಗಳಿಂದ ಆನಂದ್‌ನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ರತ್ನಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರೂ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: ಮಮತಾ ಬ್ಯಾನರ್ಜಿ ವಿರುದ್ಧ ತನಿಖೆಗೆ ಕೋರ್ಟ್ ಆದೇಶ
ಈ ಹಿನ್ನೆಲೆ, ವಯಸ್ಸಾದ ಮಹಿಳೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ನೀತಾಳೊಂದಿಗೆ ತನ್ನ ಮಗನ ಮದುವೆಯನ್ನು ನೋಡುವುದು ತನ್ನ ಆಸೆಯಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು. ಆನಂದ್ ಮತ್ತು ನೀತಾ ಇಬ್ಬರೂ ಕೋಲಾರ ಜಿಲ್ಲೆಯವರು ಎಂದೂ ತಿಳಿದುಬಂದಿದೆ. ನೀತಾ ಮೊದಲು, ತಾನು ಬೇರೊಬ್ಬರೊಂದಿಗೆ ಮದುವೆಯಾಗುವ ಆತಂಕದಿಂದ 15 ದಿನಗಳ ತುರ್ತು ಪೆರೋಲ್‌ನಲ್ಲಿ ಆನಂದ್‌ನನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಕೋರಿ ಮತ್ತು ಕಾರಾಗೃಹಗಳ ಡಿಐಜಿ ಮತ್ತು ಕೇಂದ್ರ ಕಾರಾಗೃಹದ ಮುಖ್ಯ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದಳು.
ಆದರೆ, ಅವರ ಮನವಿಯನ್ನು ಪರಿಗಣಿಸಲಿಲ್ಲದ ಕಾರಣ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಂಧಿತನನ್ನು ಬಿಡುಗಡೆ ಮಾಡುವುದು ಅನಿವಾರ್ಯ, ಇಲ್ಲದಿದ್ದರೆ ಆತ ತನ್ನ ಜೀವನದ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ ಎಂದಿದ್ದರು.
ಇದನ್ನೂ ಓದಿ: ಮೊದಲ ಬಾರಿಗೆ ಕೋರ್ಟಲ್ಲಿ ChatGPT ಬಳಕೆ: ಜಾಮೀನು ತೀರ್ಪಿನ ವೇಳೆ ಕೃತಕ ಬುದ್ಧಿಮತ್ತೆ ಅಭಿಪ್ರಾಯ ಪಡೆದ ಹೈಕೋರ್ಟ್
ಪೆರೋಲ್ ಮಂಜೂರು ಮಾಡಲು ಯಾವುದೇ ನಿಬಂಧನೆ ಇಲ್ಲ
ಮದುವೆಯಾಗಲು ಪೆರೋಲ್ ಮಂಜೂರು ಮಾಡಲು ಯಾವುದೇ ಅವಕಾಶವಿಲ್ಲ ಎಂದು ಸರ್ಕಾರಿ ವಕೀಲರು ಜೈಲು ಅಧಿಕಾರಿಗಳಿಂದ ತರಿಸಿದ ದಾಖಲೆಯನ್ನು ನೀಡಿದ್ದಾರೆ. ಹಾಗೂ, ಬಂಧಿತನು ಬೇರೆಯವರ ಮದುವೆಗೆ ಹಾಜರಾಗಲು ಬಯಸಿದರೆ, ಅದು ವಿಭಿನ್ನ ಸನ್ನಿವೇಶವಾಗಿರುತ್ತಿತ್ತು ಎಂದೂ ಹೇಳಿದ್ದಾರೆ. ಪ್ರಿಸನ್ ಮ್ಯಾನ್ಯುಯಲ್‌ನ ಷರತ್ತು 636 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಪೆರೋಲ್‌ನ ಉದ್ದೇಶಗಳನ್ನು ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಇದೇ ರೀತಿ, ಹೆಂಡತಿಯನ್ನು ಗರ್ಭಿಣಿ ಮಾಡೋ ಸಲುವಾಗಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ 15 ದಿನದ ಪೆರೋಲ್‌ನಲ್ಲಿ ಬಿಡುಗಡೆ ಮಾಡುವಂತೆ ಕೋರ್ಟ್ ರಾಜಸ್ಥಾನ ಹೈಕೋರ್ಟ್ ಆದೇಶ ನೀಡಿತ್ತು. ಗರ್ಭಿಣಿಯಾಗೋದು ಅಥವಾ ಸಂತಾನ ಪಡೆಯುವುದು ನನ್ನ ಹಕ್ಕು. ಹಾಗಾಗಿ ಪತ್ನಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿ, ಕೈದಿಯ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಬಳಿಕ ಈ ಆದೇಶವನ್ನು ಕೋರ್ಟ್ ನೀಡಿದೆ.
ಇದನ್ನೂ ಓದಿ: ಹೆಂಡತಿಯನ್ನು ಗರ್ಭಿಣಿ ಮಾಡ್ಬೇಕು ಅನ್ನೋ ಕಾರಣಕ್ಕೆ 15 ದಿನದ ಪೆರೋಲ್ ಪಡೆದ ಅಪರಾಧಿ!