ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿ ತಮಗೆ ಸೇರಿದ 1.24 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ನಟ ಗಣೇಶ್‌ಗೆ ಹೈಕೋರ್ಟ್‌ ಶುಕ್ರವಾರ ಅನುಮತಿಸಿದೆ. 

ಬೆಂಗಳೂರು (ಸೆ.02): ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿ ತಮಗೆ ಸೇರಿದ 1.24 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ನಟ ಗಣೇಶ್‌ಗೆ ಹೈಕೋರ್ಟ್‌ ಶುಕ್ರವಾರ ಅನುಮತಿಸಿದೆ. ಪ್ರಕರಣ ಸಂಬಂಧ ನಟ ಗಣೇಶ್‌ ಅವರು ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠ, ಅರ್ಜಿದಾರರು ಕಟ್ಟಡ ನಿರ್ಮಾಣ ಮಾಡಬಹುದು. ಆದರೆ, ಅದು ಪ್ರಕರಣ ಸಂಬಂಧ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ.

ವಿಚಾರಣೆ ವೇಳೆ ಗಣೇಶ್‌ ಪರ ವಕೀಲ ಶ್ರೀಧರ್‌ ಪ್ರಭು, 2023ರಲ್ಲಿ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ಆದೇಶದಂತೆ ಅರ್ಜಿದಾರರು ವಿವಾದಿತ ಜಾಗದಲ್ಲಿ ಕಟ್ಟಡ ನಿರ್ಮಿಸಲು ಯಾವುದೇ ನಿರ್ಬಂಧವಿಲ್ಲ. ಕಟ್ಟಡ ನಿರ್ಮಾಣ ನಿಯಂತ್ರಣ ಅಥವಾ ನಿಷೇಧಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಯಾವುದೇ ಅಧಿಕಾರವಿಲ್ಲ. ಬೇರೆಯವರಿಗೆ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನೀಡಿದೆ. ಆದರೆ, ಅರ್ಜಿದಾರರಿಗೆ ಮಾತ್ರ ನಿರ್ಬಂಧಿಸಿದೆ. ಒಂದೊಮ್ಮೆ ಅರ್ಜಿದಾರರ ತಪ್ಪು ಕಂಡು ಬಂದರೆ ಕಟ್ಟಡ ತೆರವು ಮಾಡಲಾಗುವುದು ಎಂದು ಭರವಸೆ ನೀಡಿದರು.

ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮಾತ್ರ ಅವಕಾಶವಿದೆ ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಗಣೇಶ್‌ಗೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿತು. ಜತೆಗೆ, ಪ್ರಕರಣ ಸಂಬಂಧ ಹಿಂದಿನ ಸೂಚನೆಯಂತೆ ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಗೆ ನೀಡಬೇಕಾದ ಮನವಿಯನ್ನು ಅಡ್ವೊಕೇಟ್‌ ಜನರಲ್‌ ಅವರ ಮೂಲಕ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿದೆ.