Asianet Suvarna News Asianet Suvarna News

ವಾಣಿಜ್ಯೇತರ ಉದ್ದೇಶಕ್ಕೆ ಆನೆ ದತ್ತು, ಸಾಕುವುದು ತಪ್ಪಲ್ಲ: ಹೈಕೋರ್ಟ್‌

ಖಾಸಗಿ ಮಾಲಿಕತ್ವದ ಆನೆಗಳನ್ನು ವಾಣಿಜ್ಯ ಉದ್ದೇಶಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗಾಗಿ ದತ್ತು ಪಡೆಯಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. 

karnataka high court elephants transfer welfare wildlife protection act gvd
Author
Bangalore, First Published Jun 14, 2022, 5:01 AM IST

ಬೆಂಗಳೂರು (ಜೂ.14): ಖಾಸಗಿ ಮಾಲಿಕತ್ವದ ಆನೆಗಳನ್ನು ವಾಣಿಜ್ಯ ಉದ್ದೇಶಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗಾಗಿ ದತ್ತು ಪಡೆಯಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ಕರ್ನಾಟಕದಿಂದ ನಾಲ್ಕು ಆನೆಗಳನ್ನು ಗುಜರಾತ್‌ ಮೂಲದ ರಾಧಾಕೃಷ್ಣ ದೇವಾಲಯ ಕಲ್ಯಾಣ ಟ್ರಸ್ಟ್‌ಗೆ ದತ್ತು ನೀಡಿರುವುದನ್ನು ಪ್ರಶ್ನಿಸಿ ಎಂ.ಎಸ್‌.ಮುರಳಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಗುಜರಾತ್‌ನ ರಾಧಾಕೃಷ್ಣ ಮಂದಿರಕ್ಕೆ ಕರ್ನಾಟಕದಿಂದ ನಾಲ್ಕು ಆನೆಗಳನ್ನು ಸ್ಥಳಾಂತರ ಮಾಡಿರುವ ಕ್ರಮವನ್ನು ರದ್ದುಗೊಳಿಸಬೇಕು. ಆನೆಗಳನ್ನು ಮಾರಾಟ ಮಾಡದಂತೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. ಅದಕ್ಕೆ ಆಕ್ಷೇಪಿಸಿದ್ದ ಟ್ರಸ್ಟ್‌ ಪರ ವಕೀಲರು, ಗುಜರಾತ್‌ನ ಜಾಮ್‌ನಗರದಲ್ಲಿ ಪ್ರಾಣಿಗಳ ಕಲ್ಯಾಣ ಉದ್ದೇಶದಿಂದಲೇ ಟ್ರಸ್ಟ್‌ ರಚನೆಯಾಗಿದೆ. ನಾವು ಆನೆಗಳನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿಲ್ಲ. ದೇವಾಲಯದ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಮಾತ್ರ ಬಳಕೆ ಮಾಡುತ್ತೇವೆ ಎಂದು ತಿಳಿಸಿ ಪ್ರಮಾಣಪತ್ರ ಸಲ್ಲಿಸಿದ್ದರು.

ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ: ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆಯೇ ಯೋಜನೆ?

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಸೆಕ್ಷನ್‌ 40ರಡಿ ವಾಣಿಜ್ಯ ಉದ್ದೇಶಗಳನ್ನು ಹೊರತುಪಡಿಸಿ ಉಳಿದ ಸ್ವರೂಪದ ಚಟುವಟಿಕೆಗೆ ಆನೆಗಳನ್ನು ದತ್ತು ಪಡೆಯುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ರಾಧಾಕೃಷ್ಣ ಕಲ್ಯಾಣ ಟ್ರಸ್ಟ್‌ ಸಾರ್ವಜನಿಕ ಟ್ರಸ್ಟ್‌ ಅಗಿದೆ. ಅದರಲ್ಲಿ ಆನೆಗಳು ಫಲಾನುಭವಿಗಳಾಗಿವೆ. ಆನೆಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತಿದ್ದು, ಅಗತ್ಯ ಸೌಕರ್ಯ ಒದಗಿಸಲಾಗುತ್ತಿದೆ. ಅವುಗಳು ಕೂಡ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಂತಿವೆ. ಅವುಗಳನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿಲ್ಲ . ಹಾಗಾಗಿ, ಅರ್ಜಿಯಲ್ಲಿ ಯಾವುದೇ ಮೆರಿಟ್‌ ಇಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

ಹುಬ್ಬಳ್ಳಿ ಗಲಭೆ, ಆರೋಪಿಗಳ ಪರ ಎಲ್ಲ ಅರ್ಜಿಗಳ ವಜಾ: ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪರವಾಗಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ಇಲ್ಲಿಯ ಹೈಕೋರ್ಟ್‌ ಪೀಠವು ಸೋಮವಾರ ವಜಾಗೊಳಿಸಿ ಆದೇಶ ನೀಡಿದೆ. ಇದರಿಂದಾಗಿ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿದಂತಾಗಿದೆ. ಏ. 16ರಂದು ಹಳೇ ಹುಬ್ಬಳ್ಳಿಯ ಪೊಲೀಸ್‌ ಠಾಣೆ ಎದುರು ದೊಡ್ಡ ಗಲಭೆ ನಡೆದು ಪೊಲೀಸರು 12 ಪ್ರಕರಣಗಳನ್ನು ದಾಖಲಿಸಿದ್ದರು. ಜತೆಗೆ 158 ಆರೋಪಿಗಳನ್ನು ಬಂಧಿಸಿ ರಾಜ್ಯದ ವಿವಿಧ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. 

ಗೋಶಾಲೆ ಆರಂಭಿಸುವುದು ಪಂಚವಾರ್ಷಿಯ ಯೋಜನೆಯೇ?: ಸರ್ಕಾರಕ್ಕೆ ಛಾಟಿ ಬೀಸಿದ ಹೈಕೋರ್ಟ್‌

ಒಟ್ಟು 12 ಪ್ರಕರಣಗಳ 11 ಎಫ್‌ಐಆರ್‌ಗಳ ವಿರುದ್ಧ ಆರೋಪಿಗಳ ಪರ ವಕೀಲರು ಹೈಕೋರ್ಟ್‌ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಸಿದ ಹೈಕೋರ್ಚ್‌ ಮೇ 17ರಂದು 11 ಎಫ್‌ಐಆರ್‌ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈಚೆಗೆ ಮಹಾನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ ಕುಮಾರ್‌ ಅವರು ಈ ಕುರಿತು ಮೇಲ್ಮನವಿ ಸಲ್ಲಿಸುವ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚಿಸಿ ನಿರ್ದೇಶನ ನೀಡಿದ್ದರು. ಅದರಂತೆ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಹುಬ್ಬಳ್ಳಿ ಕಮೀಶನರೇಟ್‌ ಪೊಲೀಸರು ಮನವಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯವು ಮನವಿಯನ್ನು ಪುರಸ್ಕರಿಸಿ ಆರೋಪಿಗಳ ಪರ ಅರ್ಜಿಗಳನ್ನು ವಜಾಗೊಳಿಸಿದೆ.

Latest Videos
Follow Us:
Download App:
  • android
  • ios